ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಟ್ಟೀಹಳ್ಳಿ: ಸಂಚಾರ ದಟ್ಟಣೆಯ ಕಿರಿಕಿರಿ

ರಸ್ತೆ ವಿಸ್ತರಣೆಗೆ ಸಿಗದ ಆದ್ಯತೆ *ಪಾರ್ಕಿಂಗ್‌ ಅವ್ಯವಸ್ಥೆ * ಟ್ರಾಫಿಕ್‌ ಸಿಗ್ನಲ್‌ಗಳ ಕೊರತೆ
Published 27 ನವೆಂಬರ್ 2023, 4:51 IST
Last Updated 27 ನವೆಂಬರ್ 2023, 4:51 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಪಟ್ಟಣವು ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದ್ದು, ಜನಸಂಚಾರ, ವಾಹನ ಸಂಚಾರ ಹೆಚ್ಚಾಗುತ್ತಿದೆ. ಕಿರಿದಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. 

ಪಟ್ಟಣದಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳ ಕೊರತೆ, ವಾಹನ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದು, ಮುಖ್ಯರಸ್ತೆಗಳ ವಿಸ್ತರಣೆಯಾಗದಿರುವುದು, ಪಾದಚಾರಿ ಮಾರ್ಗದ ಕೊರತೆ ಮುಂತಾದ ಕಾರಣಗಳಿಂದ ಸಂಚಾರ ದಟ್ಟಣೆಯ ಸಮಸ್ಯೆ ತಲೆದೋರಿದೆ.

ತಾಲ್ಲೂಕು ಕೇಂದ್ರವಾಗಿರುವುದರಿಂದ ಇಲ್ಲಿಗೆ ನಿತ್ಯ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಗ್ರಾಮಸ್ಥರು ವ್ಯಾಪಾರ, ವಹಿವಾಟು ಹಾಗೂ ಕಚೇರಿ ಕೆಲಸಗಳಿಗೆ ಬರುತ್ತಾರೆ. ಇದರಿಂದ ಪಟ್ಟಣದಲ್ಲಿ ಸಂಚಾರ ದಟ್ಟಣೆಯಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಪಾದಚಾರಿಗಳು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮುಖ್ಯವಾಗಿ ಪಟ್ಟಣದ ಬಸ್ ನಿಲ್ದಾಣದ ಸರ್ಕಲ್, ರಾಣೆಬೆನ್ನೂರು ರಸ್ತೆ, ಮಾಸೂರು ರಸ್ತೆ, ತುಮ್ಮಿನಕಟ್ಟೆ ರಸ್ತೆಗೆ ತೆರಳುವ ಸಂದರ್ಭದಲ್ಲಿ ಜನದಟ್ಟಣೆ, ವಾಹನದಟ್ಟಣೆ ಉಂಟಾಗುತ್ತದೆ. ಬಸ್ ಸ್ಟ್ಯಾಂಡ್ ಸರ್ಕಲ್‌ಗೆ ಹೊಂದಿಕೊಂಡ ಕರ್ನಾಟಕ ಬ್ಯಾಂಕ್, ಎಸ್.ಬಿ.ಐ. ಬ್ಯಾಂಕ್, ಅಂಚೆ ಕಚೇರಿ ಮತ್ತು ಕಂಪ್ಯೂಟರ್‌ ಸೆಂಟರ್, ಪುಸ್ತಕ ಮಳಿಗೆಗಳು ಸೇರಿದಂತೆ ಬಹಳಷ್ಟು ಅಂಗಡಿಗಳಿದ್ದು, ಇಲ್ಲಿ ವಿಶೇಷವಾಗಿ ಕಚೇರಿ ಪ್ರಾರಂಭದ ಸಮಯದಲ್ಲಿ ಹಾಗೂ ಸಂಜೆ ಶಾಲಾ, ಕಾಲೇಜು ಬಿಡುವ ವೇಳೆ ವಿಪರೀತ ಸಂಚಾರ ದಟ್ಟಣೆಯಾಗುತ್ತದೆ.

ಪಟ್ಟಣದ ಭಗತ್‌ಸಿಂಗ್‌ ಸರ್ಕಲ್‌ನಲ್ಲಿ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದೆ. ನೋಬೆಲ್ ಪಬ್ಲಿಕ್ ಶಾಲೆ, ಕಾಲೇಜು, ಲಯನ್ಸ್ ಶಾಲೆ, ತರಳುಬಾಳು ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಇದೇ ಮಾರ್ಗದಲ್ಲಿದ್ದು, ಬೆಳಿಗ್ಗೆ ಮತ್ತು ಸಂಜೆ ಜನದಟ್ಟಣೆ, ವಾಹನ ದಟ್ಟಣೆಯಾಗುತ್ತದೆ. ರಟ್ಟೀಹಳ್ಳಿ ಮಾರ್ಗದಲ್ಲಿ ಇದೀಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಾಹನ ಸಂಚಾರದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಿರಿದಾದ ರಸ್ತೆಗಳು:

‘ಹೊಸ್ ಬಸಸ್ಟ್ಯಾಂಡ್‌ ಮಾರ್ಗವಾಗಿ ತುಮ್ಮಿನಕಟ್ಟಿಗೆ ಸಂಚರಿಸುವ ಮುಖ್ಯರಸ್ತೆ ಅತ್ಯಂತ ಕಿರಿದಾಗಿದ್ದು, ರಸ್ತೆ ವಿಸ್ತರಣೆ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಅವಶ್ಯವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವುದೇ ದೊಡ್ಡ ಸಾಹಸವಾಗಿದೆ. ಇದಕ್ಕೆ ಅಗತ್ಯ ಕ್ರಮವಹಿಸಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಶ್ರೀನಿವಾಸ ಭೈರಪ್ಪನವರ.

ಪಟ್ಟಣದಲ್ಲಿ ಅನೇಕ ಯುವಕರು ವಾಹನ ಪರವಾನಗಿ ಇಲ್ಲದೆ ಹಾಗೂ ಕೆಲವು ಬಾಲಕರು ದ್ವಿಚಕ್ರ ವಾಹನ ಚಾಲನೆ ಮಾಡುತ್ತಾರೆ. ಟ್ರಿಪಲ್‌ ರೈಡಿಂಗ್‌ ಸಾಮಾನ್ಯವಾಗಿದೆ. ಬೈಕ್‌ಗಳಿಗೆ ಕರ್ಕಶ ಧ್ವನಿ ಹೊರಡಿಸುವ ಹಾರ್ನ್ ಬಳಸುತ್ತಾರೆ. ಇದರಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ.

‘ಪೋಷಕರು ತಮ್ಮ ಚಿಕ್ಕವಯಸ್ಸಿನ ಮಕ್ಕಳಿಗೆ ಬೈಕನ್ನು ಓಡಿಸಲು ಕೊಡುವುದು ಅಪರಾಧ. ಆದಾಗ್ಯೂ ಬಹಳಷ್ಟು ಯುವಕರು ವಾಹನ ಪರವಾನಗಿ ಇಲ್ಲದೆ, ರಸ್ತೆ ನಿಯಮ ಪಾಲನೆ ಮಾಡದೆ ವಾಹನ ಚಲಿಸುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಿಸಬೇಕು’ ಎನ್ನುತ್ತಾರೆ ಸ್ಥಳೀಯ ವರ್ತಕರಾದ ಶಂಭಣ್ಣ ಗೂಳಪ್ಪನವರ.

ರಟ್ಟೀಹಳ್ಳಿ ಪಟ್ಟಣದ ಹೊಸ್ ಬಸ್‌ ನಿಲ್ದಾಣ ವೃತ್ತದ ಬಳಿ ರಸ್ತೆಯ ಎರಡೂ ಬದಿ ಬೈಕ್‌ ನಿಲ್ಲಿಸಿರುವ ಕಾರಣ ವಾಹನಗಳ ಸಂಚಾರಕ್ಕೆ ತೊಡಕಾಗಿರುವ ದೃಶ್ಯ
ರಟ್ಟೀಹಳ್ಳಿ ಪಟ್ಟಣದ ಹೊಸ್ ಬಸ್‌ ನಿಲ್ದಾಣ ವೃತ್ತದ ಬಳಿ ರಸ್ತೆಯ ಎರಡೂ ಬದಿ ಬೈಕ್‌ ನಿಲ್ಲಿಸಿರುವ ಕಾರಣ ವಾಹನಗಳ ಸಂಚಾರಕ್ಕೆ ತೊಡಕಾಗಿರುವ ದೃಶ್ಯ

ರಟ್ಟೀಹಳ್ಳಿ ಪಟ್ಟಣದ ಹೊಸ ಬಸ್‌ಸ್ಟ್ಯಾಂಡ್ ಸರ್ಕಲ್ ಭಗತ್ ಸಿಂಗ್‌ ಸರ್ಕಲ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್‌ ಅಳವಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು

-ಶಂಭಣ್ಣ ಗೂಳಪ್ಪನವರ, ಪಟ್ಟಣದ ನಿವಾಸಿ

‘ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ’

‘ಇತ್ತೀಚೆಗೆ ಶಾಲೆ ಕಾಲೇಜು ರೈತ ಸಭೆಗಳಲ್ಲಿ ಇಲಾಖಾ ವತಿಯಿಂದ ಸಂಚಾರ ನಿಯಮಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ. ಪಟ್ಟಣದಲ್ಲಿ ಒಂದೇ ಭಾಗದಲ್ಲಿ ಸಂತೆ ಹಾಗೂ ಮಾರುಕಟ್ಟೆ ನಡೆಯುವುದರಿಂದ ಜನದಟ್ಟಣೆ ಹೆಚ್ಚಾಗಿ ಕಂಡುಬರುತ್ತದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ’ ಎನ್ನುತ್ತಾರೆ ರಟ್ಟೀಹಳ‍್ಳಿ ಪಿಎಸ್ಐ ಜಗದೀಶ ಜೆ. ವಾಹನ ಸವಾರರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿ ಮತ್ತು ಹೆಲ್ಮೆಟ್ ಧರಿಸುವಂತೆ ಮನವರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

‘ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಿ’

ರಟ್ಟೀಹಳ್ಳಿ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ಜನರು ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಗ್ರಾಹಕರು ಅಂಗಡಿಗಳಿಗೆ ತೆರಳಲು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಹೊಸ್ ಬಸ್‌ಸ್ಟ್ಯಾಂಡ್ ಸರ್ಕಲ್ ಎಸ್.ಬಿ.ಐ. ಬ್ಯಾಂಕ್ ಕರ್ನಾಟಕ ಬ್ಯಾಂಕ್‌ಗೆ ಹೊಂದಿಕೊಂಡಂತೆ ಬಹಳಷ್ಟು ಜನದಟ್ಟಣೆಯಾಗಿ ತೊಂದರೆಯಾಗುತ್ತಿದ್ದು ಈ ಸ್ಥಳಗಳಲ್ಲಿ ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೃಷ್ಣರಾಜ ವೆರ್ಣೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT