ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಜಿಲ್ಲೆಯಲ್ಲಿ 63 ವಿಮಾ ಗ್ರಾಮಗಳು!

ಜೀವನದ ಸುರಕ್ಷತೆಗೆ ‘ಗ್ರಾಮೀಣ ಅಂಚೆ ಜೀವ ವಿಮೆ’: 13 ಗ್ರಾಮಗಳಲ್ಲಿ ಶೇ 100ರಷ್ಟು ಸಾಧನೆ
Last Updated 11 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹಾವೇರಿ:ಜಿಲ್ಲೆಯಲ್ಲಿ ಒಟ್ಟು 63 ಹಳ್ಳಿಗಳು ‘ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಮಗಳು’ ಎಂಬ ಬಿರುದಿಗೆ ಪಾತ್ರವಾಗಿದ್ದು, ಅವುಗಳಲ್ಲಿ 13 ಹಳ್ಳಿಗಳಲ್ಲಿ ಶೇ 100ರಷ್ಟು ಸಾಧನೆಯನ್ನು ಅಂಚೆ ಇಲಾಖೆ ಮಾಡಿದೆ.

ಹಾವೇರಿ ತಾಲ್ಲೂಕಿನ ಹೊಮ್ಮರಡಿ, ಕೆರೆಮತ್ತಿಹಳ್ಳಿ; ಹಾನಗಲ್‌ ತಾಲ್ಲೂಕಿನ ವರ್ದಿ, ಬಾಳಂಬೀಡ, ಶೇಷಗಿರಿ, ಮುದ್ದಿನಕೊಪ್ಪ; ರಾಣೆಬೆನ್ನೂರು ತಾಲ್ಲೂಕಿನ ಅರೆಮಲ್ಲಾಪುರ, ಐರಣಿ; ಹಿರೇಕೆರೂರು ತಾಲ್ಲೂಕಿನ ತಾವರಗಿ; ರಟ್ಟೀಹಳ್ಳಿ ತಾಲ್ಲೂಕಿನ ಕಡೂರು; ಸವಣೂರು ತಾಲ್ಲೂಕಿನ ಹೊಸಹಲಸೂರು, ಸಾವೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಹೊಸೂರು ಗ್ರಾಮ... ಈ 13 ಗ್ರಾಮಗಳ ಎಲ್ಲ ಕುಟುಂಬಗಳು ‘ಗ್ರಾಮೀಣ ಅಂಚೆ ಜೀವ ವಿಮೆ’ ಮಾಡಿಸಿರುವುದರಿಂದ ಈ ಗ್ರಾಮಗಳು ‘ಸಂಪೂರ್ಣ ಅಂಚೆ ಜೀವ ವಿಮಾ ಗ್ರಾಮಗಳು’ ಎಂಬ ಖ್ಯಾತಿಗೆ ಪಾತ್ರವಾಗಿವೆ.

ಗೌರಾಪುರ, ವೆಂಕಟಾಪುರ, ತಿಮ್ಮನಹಳ್ಳಿ, ಯತ್ತಿನಹಳ್ಳಿ, ಕುಸನೂರು, ಬಸಾಪುರ, ಕದರಮಂಡಲಗಿ, ಮುದೇನೂರು, ಛತ್ರ ಸೇರಿದಂತೆ ಒಟ್ಟು 50 ಗ್ರಾಮಗಳು ‘ವಿಮಾ ಗ್ರಾಮ’ ಹೆಸರಿಗೆ ಪಾತ್ರವಾಗಿವೆ. ಈ ಗ್ರಾಮಗಳಲ್ಲಿ ಕನಿಷ್ಠ 100 ಕುಟುಂಬಗಳು ಅಂಚೆ ಜೀವ ವಿಮೆಯನ್ನು ಮಾಡಿಸಿವೆ.

ಅಂಚೆ ಜೀವವಿಮೆಯು 1884ರಲ್ಲಿ ಸ್ಥಾಪನೆಗೊಂಡಿತು. ಇದು ಭಾರತ ಸರ್ಕಾರದ ಆಶ್ವಾಸನೆ ಹೊಂದಿರುವ ಅತ್ಯಂತ ಪುರಾತನ ಜೀವ ವಿಮಾ ಯೋಜನೆ. ಗ್ರಾಮೀಣ ಅಂಚೆ ಜೀವ ವಿಮೆಯು ಗ್ರಾಮೀಣ ಜನತೆಗಾಗಿ 1995ರಲ್ಲಿ‍ಪ್ರಾರಂಭವಾಯಿತು. ‘ಜೀವನದ ಸುರಕ್ಷತೆ, ಉಜ್ವಲ ಭವಿಷ್ಯದ ಭರವಸೆ’ ಎಂಬುದು ಈ ವಿಮೆಯ ಘೋಷವಾಕ್ಯ.ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ 19ರಿಂದ 55 ವರ್ಷದೊಳಗಿನವರು ಜೀವ ವಿಮೆ ಮಾಡಿಸಲು ಅರ್ಹರು. ಕನಿಷ್ಠ ₹ 10 ಸಾವಿರದಿಂದ ಗರಿಷ್ಠ ₹ 10 ಲಕ್ಷದವರೆಗೆ ವಿಮಾ ಮೊತ್ತವನ್ನು ಮಾಡಿಸಬಹುದು.

ಕಡಿಮೆ ಕಂತು, ಅಧಿಕ ಬೋನಸ್‌!
ಈ ಗ್ರಾಮೀಣ ಅಂಚೆ ಜೀವ ವಿಮೆಯಲ್ಲಿ ಒಟ್ಟು 6 ಯೋಜನೆಗಳಿವೆ. ಈ ಪ್ರೀಮಿಯಂನಲ್ಲಿ ಅತಿ ಕಡಿಮೆ ಕಂತು, ಅಧಿಕ ಬೋನಸ್‌ ಸೌಲಭ್ಯವಿರುತ್ತದೆ.ನಿಗದಿತ ವಯೋಮಿತಿ ವಿಮೆ (ಗ್ರಾಮ ಸಂತೋಷ), ಗ್ರಾಮೀಣ ಅಂಚೆ ಜೀವ ವಿಮೆ (ಗ್ರಾಮ ಪ್ರಿಯಾ), ನಿರೀಕ್ಷಿತ ವಯೋಮಿತಿ ವಿಮೆ (ಗ್ರಾಮ ಸುಮಂಗಳ), ಆಜೀವ ವಿಮೆ (ಗ್ರಾಮ ಸುರಕ್ಷ), ಪರಿವರ್ತನೀಯ ಆಜೀವ ವಿಮೆ (ಗ್ರಾಮ ಸುವಿಧ) ಹಾಗೂ ಬಾಲ ವಿಮೆ ಯೋಜನೆಗಳಿವೆ.

‘ಈ ವಿಮೆಗೆ ಆದಾಯ ತೆರಿಗೆ ರಿಯಾಯಿತಿ ಇರುತ್ತದೆ. ಮುಂಗಡ ಕಂತಿನ ಪಾವತಿಗೆ ರಿಯಾಯಿತಿಯಿದ್ದು, ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಪಾವತಿಸಬಹುದು. ‘ಗ್ರಾಮ ಸಂತೋಷ’ ಯೋಜನೆಯಲ್ಲಿ 3 ವರ್ಷಗಳ ನಂತರ ಸೌಲ ಸೌಲಭ್ಯ ದೊರೆಯುತ್ತದೆ. ಒಂದು ಲಕ್ಷ ವಿಮಾ ಮೊತ್ತದ ವಿಮೆ ಮಾಡಿಸಿದರೆ ಒಂದು ವರ್ಷಕ್ಕೆ ₹ 5 ಸಾವಿರ ಬೋನಸ್‌ ಸಿಗುತ್ತದೆ. ‘ನಿಗದಿತ ವಯೋಮಿತಿ ವಿಮೆ’ಯತ್ತ ಗ್ರಾಮೀಣ ಜನರು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ’ ಎಂದು ಹಾವೇರಿ ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ರಾಜು ಕೋಪರ್ಡೆ ತಿಳಿಸಿದರು.

‘ಈ ವಿಮೆಯಲ್ಲಿ ಕಮಿಷನ್‌ ಮತ್ತು ಏಜೆಂಟರ ಹಾವಳಿ ಇರುವುದಿಲ್ಲ. ವಿಮಾದಾರ ಅವಧಿ ಪೂರ್ತಿಯಾಗುವ ಮೊದಲೇ ಮರಣ ಹೊಂದಿದಲ್ಲಿ, ಅವರ ಕುಟುಂಬಕ್ಕೆ ವಿಮಾ ಮೊತ್ತ ಮತ್ತು ಬೋನಸ್‌ ಕೊಡಲಾಗುವುದು. ಮದುವೆ, ವೈದ್ಯಕೀಯ ವೆಚ್ಚ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ವಿಮೆಯ ಮೇಲೆ ಸಾಲ ಪಡೆಯಬಹುದು’ ಎಂದು ಕೋಪರ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT