ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ಶೀಘ್ರ ಬಿಡುಗಡೆ: ಬೊಮ್ಮಾಯಿ

Last Updated 17 ಅಕ್ಟೋಬರ್ 2021, 7:17 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಬಿಜೆಪಿಯಿಂದ ಶೀಘ್ರದಲ್ಲೇ 'ವಿಷನ್ ಡಾಕ್ಯುಮೆಂಟ್'ಬಿಡುಗಡೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾನಗಲ್ ಚುನಾವಣಾ ಪ್ರಚಾರ ಸಭೆಗೆ ಹೋಗುವ ಮುನ್ನ ಹಾವೇರಿ ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಿಗಲಿದೆ.ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಾಸಕರು, ಸಚಿವರು ಕೂಡ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಎರಡೂ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಹಾನಗಲ್ ತಾಲ್ಲೂಕು ರಾಜಕಾರಣ ಬಹಳ ವಿಭಿನ್ನವಾದುದು. ಸಿ‌.ಎಂ.ಉದಾಸಿ ಮತ್ತು ಮನೋಹರ ತಹಶೀಲ್ದಾರ್ ಈ ಇಬ್ಬರೂ ಅಭ್ಯರ್ಥಿಗಳ ಕೇಂದ್ರೀಕೃತ ಚುನಾವಣೆಯಾಗಿತ್ತು‌. ಎರಡು ದಶಕಗಳ ನಂತರ ಮೊದಲ ಬಾರಿ ಆ ಇಬ್ಬರು ಕಣದಲ್ಲಿ ಇಲ್ಲದೆ ಚುನಾವಣೆ ನಡೆಯುತ್ತಿದೆ ಎಂದರು.

ಬಾಳಂಬೀಡ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಬಿಜೆಪಿ ಕಾಲದಲ್ಲೇ ಜಾರಿಯಾಗಿವೆ. ಎಲ್ಲವೂ ಕಡತದಲ್ಲಿ ದಾಖಲಾಗಿದೆ‌. ಸುಳ್ಳು ಪ್ರಚಾರ ಮಾಡಿದರೆ ಸತ್ಯವಾಗುವುದಿಲ್ಲ. ದಾಖಲೆಯನ್ನು ನೋಡಿದರೆ, ಯಾರ ಕಾಲದಲ್ಲಿ ಟೆಂಡರ್ ಆಯಿತು, ಯಾರ ಕಾಲದಲ್ಲಿ ಅನುದಾನ ಬಿಡುಗಡೆ ಆಯಿತು ಎಂಬುದು ತಿಳಿಯುತ್ತದೆ.

ಸಿ.ಎಂ. ಉದಾಸಿ ಅವರು ತಾವು ಗೆಲ್ಲುವ ಮೂಲಕ ಪಕ್ಷವನ್ನೂ ಕಟ್ಟಿ ಬೆಳೆಸಿದರು. ಜನರ ಜತೆ ನಿಕಟ ಸಂಪರ್ಕ ಹೊಂದಿದ್ದರು. ವೈಯಕ್ತಿಕ ಸ್ಪಂದನೆ ಉತ್ತಮವಾಗಿತ್ತು. ಹಾನಗಲ್ ಅಭಿವೃದ್ಧಿಗೆ ಉದಾಸಿ ಕೊಡುಗೆ ಬಹಳ ದೊಡ್ಡದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರಿಗೆ ಬೆಳೆ ವಿಮೆಯನ್ನು ಪರಿಚಯ ಮಾಡಿಕೊಟ್ಟಿದ್ದೇ ಉದಾಸಿಯವರು. ಎರಡು ದಶಕಗಳ ಕಾಲ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿದ್ದಾರೆ. ಹಾವೇರಿ ಜಿಲ್ಲೆ ಮಾಡುವಲ್ಲೂ ಉದಾಸಿ ಕೊಡುಗೆ ಅಪಾರ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಡಿಗಲ್ಲು ಹಾಕಿದರು‌. ತುಂಗಾ ಮೇಲ್ದಂಡೆ ಯೋಜನೆ ಕೂಡ ಉದಾಸಿ ಅವರ ಕೊಡುಗೆ ದೊಡ್ಡದು ಎಂದು ಗುಣಗಾನ ಮಾಡಿದರು.

ಅಭಿವೃದ್ಧಿ ಎಂದರೆ ಬಿಜೆಪಿ ಎಂದು ಜನಸಾಮಾನ್ಯರಿಗೆ ಗೊತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ನನ್ನ ಬದ್ಧತೆ ಬಗ್ಗೆಯೂ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದರು.

ಕುಮಾರಸ್ವಾಮಿ ಅವರು ಯಾರನ್ನು ಮೆಚ್ಚಿಸಲು ಆರ್.ಎಸ್.ಎಸ್ ಮೇಲೆ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಅವರ ಆರೋಪ ಸತ್ಯಕ್ಕೆ ದೂರವಾದುದು. ಸಿದ್ದರಾಮಯ್ಯ ಮತ್ತು ಎಚ್ಡಿಕೆ ನಡುವೆ ಆರ್.ಎಸ್.ಎಸ್ ಮೇಲೆ ಆರೋಪ ಮಾಡಲು ಪೈಪೋಟಿ ಇದೆ. ಅಲ್ಪಸಂಖ್ಯಾತರನ್ನು ಓಲೈಸಿ ಮತಗಳನ್ನು ಗಳಿಸಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಈ ಉಪಚುನಾವಣೆ ನಮಗೆ ಪ್ರತಿಷ್ಠೆಯಲ್ಲ. ಪ್ರತಿಷ್ಠೆ ಎಂಬುದು ಸಣ್ಣ ವಿಷಯ. ಹಾನಗಲ್ ಜನರ ಭವಿಷ್ಯ ಇದರಲ್ಲಿ ಅಡಗಿದೆ ಎಂದು ಹೇಳಿದರು.

ಈ ಉಪಚುನಾವಣೆಗಳು ಮುಂದಿನ ಚುನಾವಣೆಯ ದಿಕ್ಸೂಚಿಯಲ್ಲ ಎಂಬುದನ್ನು ಸಿದ್ದರಾಮಯ್ಯ ಅವರೂ ಹೇಳಿದ್ದಾರೆ. ನಾವೂ ಹೇಳಿದ್ದೇವೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ಉಪಚುನಾವಣೆಗಳನ್ನೂ ಗೆದ್ದರು. ಮುಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿದ್ದರು. ಹೀಗಾಗಿ ಈ ಉಪಚುನಾವಣೆಗಳು ಉಪಚುನಾವಣೆಗೆ ಮಾತ್ರ ಸೀಮಿತವಾಗಿರುತ್ತವೆ. ಮುಂದೆ ಇಡೀ ರಾಜ್ಯಕ್ಕೆ ಸಂಬಂಧಿಸಿದ ಸಾರ್ವತ್ರಿಕ ಚುನಾವಣೆ ಬಂದಾಗ ಜನರು ಆಗ ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪನವರು ಯಾರ ಬಲವಂತದಿಂದಲೂ ಚುನಾವಣಾ ಪ್ರಚಾರಕ್ಕೆ ಬರುತ್ತಿಲ್ಲ‌‌‌. ಅವರೇ ಸ್ವಯಂ ಸ್ಫೂರ್ತಿಯಿಂದ ಪಕ್ಷದ ಗೆಲುವಿಗೆ ಪ್ರಚಾರ ನಡೆಸುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT