ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಗ್ಗಾವಿ: ಗದಿಗೇಶ್ವರ ಶ್ರೀ ಲಿಂಗದೊಳಗೆ ಐಕ್ಯ

44 ಗ್ರಾಮಗಳ ಭಕ್ತರು, ಸ್ವಾಮೀಜಿಗಳಿಂದ ಶ್ರೀಗಳ ದರ್ಶನ
Published 3 ಜೂನ್ 2024, 16:16 IST
Last Updated 3 ಜೂನ್ 2024, 16:16 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಸದಾಶಿವಪೇಟೆ ವಿರಕ್ತಮಠದ ಲಿಂಗೈಕ್ಯ ಗದಿಗೇಶ್ವರ(ಮಲ್ಲಿಕಾರ್ಜುನ) ಸ್ವಾಮೀಜಿ ಅಂತ್ಯ ಸಂಸ್ಕಾರ ವೀರಶೈವ ಲಿಂಗಾಯತ ಧರ್ಮದಂತೆ ಶಾಸ್ತ್ರೋತ್ರವಾಗಿ ಮಠದ ಆವರಣದಲ್ಲಿ ನೆರವೇರಿತು. ಭಕ್ತ ಸಮೂಹದ ನಡುವೆ ಸ್ವಾಮೀಜಿ ಕ್ರಿಯಾಸಮಾಧಿಯಲ್ಲಿ ಲಿಂಗದೊಳಗೆ ಐಕ್ಯರಾದರು.

ಬಾಳೂರ ಅಡವಿಸ್ವಾಮಿ ವಿರಕ್ತಮಠದ ಕುಮಾರ ಸ್ವಾಮೀಜಿ ಅವರು ಲಿಂಗೈಕ್ಯ ಗದಿಗೇಶ್ವರ ಸ್ವಾಮೀಜಿ ಅಂತ್ಯ ಸಂಸ್ಕಾರದ ಕ್ರಿಯಾ ಸಮಾಧಿ ಕಾರ್ಯದ ನೇತೃತ್ವ ವಹಿಸಿ ನೆರವೇರಿಸಿದರು. ಮಠದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 3ಗಂಟೆವರೆಗೆ ಲಿಂಗೈಕ್ಯ ಗದಿಗೇಶ್ವರ ಸ್ವಾಮೀಜಿ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತು. ಸುಮಾರು 44 ಗ್ರಾಮಗಳ ಭಕ್ತರು ಸರತಿಯಲ್ಲಿ ನಿಂತು ಶ್ರೀಗಳ ದರ್ಶನ ಪಡೆದರು. ಸ್ವಾಮೀಜಿ ಅವರ ಸ್ಮರಣೆ ಮಾಡಿ ಕಂಬನಿ ಮೀಡಿದರು. ನಂತರ ಪ್ರಸಾದ ಪಡೆದು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.

ಶಾಸಕ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿಮರದ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಯಾಸಿರಖಾನ್ ಪಠಾಣ, ಸಾಹಿತಿ ಶಿವಾನಂದ ಮ್ಯಾಗೇರಿ ಸೇರಿದಂತೆ ಅನೇಕ ಗಣ್ಯರು ಲಿಂಗೈಕ್ಯ ಗದಿಗೇಶ್ವರ ಸ್ವಾಮೀಜಿ ಅಂತಿಮ ದರ್ಶನ ಪಡೆದರು.

ಹುಬ್ಬಳ್ಳಿ ಮೂರುಸಾವಿರ ಮಠ, ಚಿತ್ರದುರ್ಗ ಮಠ, ರಾಮದುರ್ಗ ಮಠ, ಶಿರಹಟ್ಟಿ ದಿಂಗಾಲೇಶ್ವರ ಸ್ವಾಮೀಜಿ, ಫಕೀರೇಶ್ವರ ಸ್ವಾಮೀಜಿ, ದಾಸೋಹಮಠದ ಶಿವದೇವ ಶರಣರು, ಹಾವೇರಿ ಶಾಂತವೀರ ಸ್ವಾಮೀಜಿ, ಹತ್ತಿಮತ್ತೂರಿನ ನಿಜಗುಣ ಸ್ವಾಮೀಜಿ, ಶಿಗ್ಗಾವಿ ಸಂಗನಬಸವ ಸ್ವಾಮೀಜಿ ಗಂಜೀಗಟ್ಟಿ ಶಿವಲಿಂಗೇಶ್ವರ ಸ್ವಾಮೀಜಿ, ಸವಣೂರಿನ ದೊಡ್ಡಹುಣಸಿಮಠ, ನಿಪಾನಿ, ದೇಸಾಯಿಮಠ, ತೊಗರ್ಸಿ, ಸಿಂಧಗಿ, ಗುತ್ತಲ, ಸಂಶಿ, ತಿಪಾಯಿಕೊಪ್ಪ, ಕೂಡಲ,ಜಡೆ ಸೇರಿದಂತೆ ವಿವಿಧ ಭಾಗಗಳಿಂದ ಬಂದಿರುವ ಸ್ವಾಮೀಜಿಗಳು ಅಂತಿಮ ದರ್ಶನ ಪಡೆಯುವ ಜತೆಗೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.

ಸುಮಾರು 500 ವರ್ಷಗಳ ಇತಿಹಾಸ ಕಂಡಿರುವ ಗದಿಗೇಶ್ವರ ಮಠ ಯಡೆಯೂರ ತೋಂಟದ ಸಿದ್ದಲಿಂಗೇಶ್ವರ ಶಿವಯೋಗಿ ಸ್ವಾಮೀಜಿ ವಿರಕ್ತ ಪರಂಪರೆ ಹೊಂದಿದ ಮಠವೆನಿಸಿದೆ.

‘ಕನಕದಾಸರು, ಟಿಪ್ಪು ಸುಲ್ತಾನರು ಸೇರಿದಂತೆ ಗಣ್ಯರಿಂದ ಮನ್ನಣೆ ಪಡೆದ ಪುಣ್ಯ ನೆಲದಲ್ಲಿ ಭಕ್ತರ ಭಕ್ತಿಯ ಪರಾಕಾಷ್ಠೆಯಲ್ಲಿ ಬೆಳೆದು ಬಂದಿರುವ ಮಠದ ಪೀಠಾಧಿಪತಿಯಾಗಿ  ಗದಿಗೇಶ್ವರ ಸ್ವಾಮೀಜಿ ಅವರು ತಮ್ಮ ಆಧ್ಯಾತ್ಮಿಕ, ಧಾರ್ಮಿಕ ಶಕ್ತಿಯಿಂದ ಸುಮಾರು 9 ಶಾಖಾ ಮಠಗಳನ್ನು ಸ್ಪಾಪಿಸುವ ಮೂಲಕ ಭಕ್ತರ ಆಶೋತ್ತರಗಳನ್ನು ಈಡೇಸುವ ಜತೆಗೆ ಮಠದ ಬೆಳವಣಿಗೆ ಶ್ರಮಿಸಿದ್ದರು. ಅವರ ಸರಳ ಸಜ್ಜನಿಕೆ ಜನಮನ ಮೆಚ್ಚಿಗೆಗೆ ಕಾರಣವಾಗಿತ್ತು’ ಎಂದು ಮುಖಂಡ ಶಿವಯ್ಯ ಹಿರೇಮಠ, ಶರಣಬಸಪ್ಪ ಕಿವುಡನವರ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT