ಬುಧವಾರ, ಮಾರ್ಚ್ 22, 2023
32 °C

ಮತ್ತೆ ಸಿ.ಎಂ ಬಿಎಸ್‌ವೈ ಹಗಲುಗನಸು: ಸಚಿವ ಜಮೀರ್ ಅಹ್ಮದ್ ಖಾನ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಹಣ ಹೊಡೆಯುವ ಸಲುವಾಗಿ ಅಂದು ಎರಡೂವರೆ ದಿನ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ, ಮತ್ತೆ ಪ್ರಯತ್ನ ನಡೆಸಿದ್ದಾರೆ. ನಿದ್ದೆಯಲ್ಲೂ ‘ನಾನು ಮುಖ್ಯಮಂತ್ರಿ’ ಎನ್ನುತ್ತಿದ್ದು, ಹಗಲು ಕನಸು ಕಾಣುತ್ತಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಲೇವಡಿ ಮಾಡಿದರು.

ಅಂದು ಏಳು ಶಾಸಕರನ್ನು ಸೆಳೆಯಲು ಸಾಧ್ಯವಾಗದ ಬಿಜೆಪಿಯು, ಈಗ 17 ಶಾಸಕರ ‘ಆಪರೇಷನ್ ಕಮಲ’ ಮಾಡುವುದು ಅಸಾಧ್ಯ. ಈಗಾಗಲೇ ಎಲ್ಲ ಸರ್ಕಸ್‌ಗಳನ್ನು ಮಾಡಿ ಮುಗಿಸಿದೆ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಹಿಟ್‌ ಆ್ಯಂಡ್‌ ರನ್’ ಸಂಸ್ಕೃತಿಯ ಬಿಜೆಪಿಯು ಈಚೆಗೆ ರೆಸಾರ್ಟ್‌ಗೆ ಸುಮಾರು ₹12 ಕೋಟಿ ಖರ್ಚು ಮಾಡಿದೆ. ಬದಲಾಗಿ, ಬರಗಾಲ ಪೀಡಿತ ಜಿಲ್ಲೆಯನ್ನು ದತ್ತು ಪಡೆಯಬಹುದಿತ್ತು ಎಂದರು.

ಅಚ್ಛೇ ದಿನ್‌:

ದೇಶದಲ್ಲಿ ‘ಅಚ್ಛೇ ದಿನ್‌’ ಬಂದಿಲ್ಲ ಎಂದು ಕಾಂಗ್ರೆಸಿಗರು ಹೇಳುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮಾತ್ರ ಅಚ್ಛೇ ದಿನ್ ಬಂದಿದೆ. ಮೋದಿ ₹10 ಲಕ್ಷದ ಬಟ್ಟೆ ಧರಿಸಿದರೆ, ಶಾ ವಿಶೇಷ ವಿಮಾನದಲ್ಲೇ ಹಾರಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

ಮೋದಿಯನ್ನು ದೇಶದ ಜನತೆ ಮತ್ತೊಮ್ಮೆ ಆಯ್ಕೆ ಮಾಡುವುದಿಲ್ಲ. ಚಹಾ ಮಾರಾಟ ಮಾಡುವ ವ್ಯಕ್ತಿ ಬಡವರಿಗೆ ಸ್ಪಂದಿಸುತ್ತಾನೆ ಎಂದು 2014ರಲ್ಲಿ ನಂಬಿದ್ದ ಜನರು ಮೋಸ ಹೋಗಿದ್ದಾರೆ ಎಂದರು.

ತುಮಕೂರಿನ ಸಿದ್ದಗಂಗಾ ಮಠದ ಲಿಂ. ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರ ಒತ್ತಾಯಿಸಿದೆ. ಆದರೆ, ಕೇಂದ್ರ ನಿರ್ಧಾರವು ನಿರಾಸೆ ಮೂಡಿಸಿದೆ ಎಂದ ಅವರು, ರಾಜ್ಯ ಸರ್ಕಾರದ ಯೋಜನೆಯೊಂದಕ್ಕೆ ಶ್ರೀಗಳ ಹೆಸರು ಇಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದರು.

ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ:

ಹಾವೇರಿಯಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆ ಹಾಗೂ ಉದ್ಯೋಗ ಮೇಳದಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದು, ಶಾಸಕರಾದ ಬಸವರಾಜ ಬೊಮ್ಮಾಯಿ ಹಾಗೂ ನೆಹರು ಓಲೇಕಾರ ಅವರಿಗೆ ನೋವಾಗಿತ್ತು. ಆದರೆ, ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು. 

ಅವಕಾಶ ಸಿಕ್ಕಿದೆ:

ನನಗೆ ಅನುಭವ ಇಲ್ಲ. ಆದರೆ, ಅವಕಾಶ ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ವಿವಿಧ ಇಲಾಖಾ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇನೆ ಎಂದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು