ಭಾನುವಾರ, ಆಗಸ್ಟ್ 1, 2021
21 °C
ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇಳಿಕೆ; 19 ಹೊಸ ಪ್ರಕರಣ ಪತ್ತೆ

ಕಲಬುರ್ಗಿ| ಒಂದೇ ದಿನ 100 ಜನ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 19 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಸಮಾಧಾನದ ಸಂಗತಿ ಎಂದರೆ ಸೋಂಕಿನಿಂದ ಬಳಲುತ್ತಿದ್ದ 100 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಹೀಗಾಗಿ, ಒಟ್ಟು 1026 ಸೋಂಕಿತರ ಪೈಕಿ 574 ಜನ ಗುಣಮುಖರಾಗಿದ್ದು, 442 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಅವರನ್ನು ಐಸೋಲೇಶನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. ಬುಧವಾರ ಪತ್ತೆಯಾದ 19 ಜನ ಸೋಂಕಿತರಲ್ಲಿ 17 ಜನ ಮಹಾರಾಷ್ಟ್ರದಿಂದ ಬಂದವರು. ಒಬ್ಬರು ಗುಜರಾತ್‌ನಿಂದ ವಾಪಸಾಗಿದ್ದಾರೆ. ಮತ್ತೊಬ್ಬರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಇವರ ಪೈಕಿ ಎಂಟು ಮಕ್ಕಳಿದ್ದಾರೆ.

ಕಲಬುರ್ಗಿ ತಾಲ್ಲೂಕಿನ ಹಿರೇಸಾವಳಗಿಯ 48 ವರ್ಷದ ಮಹಿಳೆ, ಕಲಬುರ್ಗಿಯ ಎಂಎಸ್‌ಕೆ ಮಿಲ್‌ ಮಿಸ್ಬಾ ನಗರದ 9 ವರ್ಷದ ಬಾಲಕ, ಕಲ್ಲಹಂಗರಗಾದ 13 ವರ್ಷದ ಬಾಲಕಿ, 4 ವರ್ಷದ ಬಾಲಕ, 23 ವರ್ಷದ ಯುವತಿ, ಕರುಣೇಶ್ವರ ನಗರದ 7 ವರ್ಷದ ಬಾಲಕ, ಇಟಗಾ (ಕೆ) ತಾಂಡಾದ 9 ವರ್ಷದ ಬಾಲಕಿ, ಕಮಲಾಪುರ ತಾಲ್ಲೂಕು ಮರಮಂಚಿ ತಾಂಡಾದ 19 ವರ್ಷದ ಯುವಕ, ಹಡಗಿಲ್ ಹಾರುತಿಯ 2 ವರ್ಷದ ಬಾಲಕ, ಕಮಲಾ‍ಪುರದ 37 ವರ್ಷದ ಯುವಕ, ಚೇಂಗಟಾ ಬಳಿಯ ಜಮ್ಮನಕೊಳ್ಳ ತಾಂಡಾದ 23 ವರ್ಷದ ಯುವಕ, ಆಳಂದ ತಾಲ್ಲೂಕು ಚಿಂಚನಸೂರು ಬಳಿಯ ಗೋಳಾ (ಬಿ)ಯ 32 ವರ್ಷದ ಮಹಿಳೆ, 3 ಹಾಗೂ 4 ವರ್ಷದ ಬಾಲಕರು, ವಾಡಿಯ 41 ವರ್ಷದ ಮಹಿಳೆ, ಚಿತ್ತಾಪುರ ತಾಲ್ಲೂಕು ಸೂಗುರನ 65 ವರ್ಷದ ವೃದ್ಧ, ನಾಲವಾರ ಸ್ಟೇಶನ್‌ ತಾಂಡಾದ 45 ವರ್ಷದ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ.

ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್‍ಗಳ ನೇಮಕ: ಕೊರೊನಾ ವೈರಸ್ ಹರಡದಂತೆ ತೀವ್ರ ತರಹದ ಕ್ರಮಗಳನ್ನು ಅನುಷ್ಠಾನಗೊಳಿಸಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯ 27 ಕಂಟೇನ್ಮೆಂಟ್ ಝೋನ್‍ಗಳಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್, ಘಟನಾ ನಿಯಂತ್ರಕ (ಇನ್ಸಿಡೆಂಟ್ ಕಮಾಂಡರ್) ರನ್ನಾಗಿ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ. ಶರತ್ ಆದೇಶ ಹೊರಡಿಸಿದ್ದಾರೆ.

ಕಲಬುರ್ಗಿ ತಾಲ್ಲೂಕಿನ ಪಾಣೆಗಾಂವ, ಶಕ್ತಿನಗರ, ಜಿ.ಡಿ.ಎ. ಕಾಲೊನಿ (ಶಹಾಬಜಾರ), ಎಂ.ಎಸ್.ಕೆ. ಮಿಲ್, ಸ್ವಸ್ತಿಕ ನಗರ, ಖಾನ್ ಕಾಲೊನಿ, ಸಬ್ರಿಮನ್ ಮಜೀದ್ ಏರಿಯಾ, ಗಣೇಶ ನಗರ, ಚಿಂಚೋಳಿ ತಾಲೂಕಿನ ಕಾನು ನಾಯಕ ತಾಂಡಾ ಮತ್ತು ಕೆರೋಳ್ಳಿ, ಅಫಜಲಪುರ ತಾಲ್ಲೂಕಿನ ಸ್ಟೇಶನ್ ಗಾಣಗಾಪುರ, ಬೋಗನಳ್ಳಿ, ಹೊಸೂರ, ಅಫಜಲಪುರ (ನಿಂಬಿತೋಟ), ಗೊಬ್ಬೂರ (ಬಿ), ಚಿತ್ತಾಪುರ ತಾಲ್ಲೂಕಿನ ದಂಡೋತಿ, ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಮತ್ತು ಮಳ್ಳಿ, ಆಳಂದ ತಾಲ್ಲೂಕಿನ ಹಿರೋಳ್ಳಿ ಬಸ್‍ಸ್ಟ್ಯಾಂಡ್ ಏರಿಯಾ, ಆಳಂದ ಬ್ರಾಹ್ಮಣ ಗಲ್ಲಿ, ಸುಲ್ತಾನಪುರ ಗಲ್ಲಿ, ಖಾನಬೋಡಿ, ಬಿಲಗುಂದಾ, ಬೋದನಾ, ಚಿತಲಿ ಹಾಗೂ ಸೇಡಂ ತಾಲ್ಲೂಕಿನ ಸುರವಾರ ಮತ್ತು ಗಾಡದನ್ನಾ ಕಂಟೇನ್ಮೆಂಟ್ ಝೋನ್‌ಗಳಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್‌ಗಳನ್ನಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು