ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 1.68 ಲಕ್ಷ ಸಾವು: ಎಡಿಜಿಪಿ ಅಲೋಕ್ ಕುಮಾರ್ ಕಳವಳ

Published 17 ಡಿಸೆಂಬರ್ 2023, 4:13 IST
Last Updated 17 ಡಿಸೆಂಬರ್ 2023, 4:13 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರತಿ ವರ್ಷ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ 1.68 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಸರಾಸರಿ ಪ್ರತಿ ಮೂರು ನಿಮಿಷಗಳಿಗೆ ಒಬ್ಬರು ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ’ ಎಂದು ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಪೊಲೀಸ್ ತರಬೇತಿ ಕಾಲೇಜು, ಪೊಲೀಸ್ ಕಮಿಷನರೇಟ್, ಜಿಲ್ಲಾ ಪೊಲೀಸ್ ಹಾಗೂ ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ‘ರಸ್ತೆ ಸುರಕ್ಷತಾ ಜಾಗೃತಿ ಓಟ’ದ ಸಮಾರೋಪದಲ್ಲಿ ಮಾತನಾಡಿದ ಅವರು, ‘ದಿನವೊಂದಕ್ಕೆ 469 ಜನರು ರಸ್ತೆ ನಿಯಮ ಪಾಲನೆ ಮಾಡದ್ದಕ್ಕೆ ಬಲಿಯಾಗುತ್ತಿದ್ದು, ಇವರನ್ನು ನಂಬಿದ ಕುಟುಂಬಗಳು ದಿಕ್ಕು ತೋಚದಂತಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬೈಕ್ ನಡೆಸುವಾಗ ಹೆಲ್ಮೆಟ್, ಕಾರು ನಡೆಸುವಾಗ ಸೀಟ್ ಬೆಲ್ಟ್ ಸಂಚಾರ ನಿಯಮ ಪಾಲನೆಗೆಂದು ಹಾಕಿಕೊಳ್ಳುವ ಬದಲು ನಮ್ಮ ಸುರಕ್ಷತೆಗಾಗಿ ಎಂದುಕೊಂಡರೆ ಯಾವತ್ತಿಗೂ ಭಾರವಾಗುವುದಿಲ್ಲ’ ಎಂದು ಹೇಳಿದರು.

ಪೊಲೀಸ್ ಕಮಿಷನರ್ ಚೇತನ್ ಆರ್. ಮಾತನಾಡಿ, ‘ಅಪಘಾತದಿಂದ ಹಲವು ಕುಟುಂಬಗಳು ತೊಂದರೆಗೆ ಒಳಗಾಗುತ್ತವೆ. ಸಿಗ್ನಲ್‌ನಲ್ಲಿ ಸಿಕ್ಕಿಬೀಳುವೆ, ತಡವಾಗುತ್ತದೆ ಎಂಬ ಭಯವಿದ್ದರೆ ಹತ್ತು ನಿಮಿಷ ಮುಂಚಿತವಾಗಿ ಮನೆಯಿಂದ ಹೊರಡಬೇಕು. ವಿದ್ಯಾರ್ಥಿಗಳು ಮನಸ್ಸಿಗೆ ಬಂದಂತೆ ವಾಹನ ಚಲಾಯಿಸುತ್ತಾರೆ. ಆದರೆ ತಾವು ತಲುಪುವ ಸ್ಥಳದಲ್ಲಿ ಏನು ಮಾಡುತ್ತಾರೆ ಎಂಬುದಕ್ಕೆ ಉತ್ತರವಿಲ್ಲ. ವಾಹನ ಚಾಲನೆ ಮಾಡುವಾಗ ತಮಗೂ ತಂದೆ, ತಾಯಿ, ಹೆಂಡತಿ, ಮಕ್ಕಳಿದ್ದಾರೆ ಎಂಬುದು ನೆನಪಿಗೆ ಬಂದರೆ ರಸ್ತೆ ನಿಯಗಳನ್ನು ಮರೆಯುವುದಿಲ್ಲ’ ಎಂದು ಹೇಳಿದರು.

ನಾಗನಳ್ಳಿ ಪೊಲೀಸ್ ತರಬೇತಿ ಕಾಲೇಜಿನ ಪ್ರಾಚಾರ್ಯ ಡಿ. ಕಿಶೋರಬಾಬು ಮಾತನಾಡಿ, ‘ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು. ಜೀವನದಲ್ಲೂ ಎಲ್ಲ ನಿಯಮಗಳ ಪಾಲನೆ ಅಗತ್ಯ’ ಎಂದರು.

ಯುನೈಟೆಡ್ ಆಸ್ಪತ್ರೆಗಳ ಸಮೂಹದ ಚೇರಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ್ ಸಿದ್ದಾರೆಡ್ಡಿ ಮಾತನಾಡಿದರು.

ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಹಲವು ಪೊಲೀಸ್ ಅಧಿಕಾರಿಗಳು, ತರಬೇತಿ ಪಡೆಯುವವರು ಜಗತ್ ವೃತ್ತದಿಂದ ಎಸ್‌ವಿಪಿ ವೃತ್ತದವರೆಗೆ ಓಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಾ. ವೀಣಾ ಸಿದ್ದಾರೆಡ್ಡಿ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

ಕಲಬುರಗಿಯಲ್ಲಿ ಶನಿವಾರ ಆಯೋಜಿಸಿದ್ದ‘ರಸ್ತೆ ಸುರಕ್ಷತಾ ಜಾಗೃತಿ ಓಟ’ದ ಅಂಗವಾಗಿ ಸ್ಪರ್ಧಿಗಳು ಓಟದಲ್ಲಿ ಪಾಲ್ಗೊಂಡಿದ್ದರು
ಕಲಬುರಗಿಯಲ್ಲಿ ಶನಿವಾರ ಆಯೋಜಿಸಿದ್ದ‘ರಸ್ತೆ ಸುರಕ್ಷತಾ ಜಾಗೃತಿ ಓಟ’ದ ಅಂಗವಾಗಿ ಸ್ಪರ್ಧಿಗಳು ಓಟದಲ್ಲಿ ಪಾಲ್ಗೊಂಡಿದ್ದರು
ಹೆಲ್ಮೆಟ್ ಧರಿಸದೆ ಇರುವುದರಿಂದ ಸಾವುಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಕಳೆದ ವರ್ಷ ಬೈಕ್ ಅಪಘಾತದಲ್ಲಿ ಮೃತಪಟ್ಟ 70 ಸಾವಿರ ಜನರಲ್ಲಿ 50 ಸಾವಿರ ಜನರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಆತಂಕಕಾರಿ ವಿಷಯ
ಅಲೋಕ್ ಕುಮಾರ್ ಎಡಿಜಿಪಿ (ತರಬೇತಿ)
ಯುನೈಟೆಡ್ ಆಸ್ಪತ್ರೆಗಳ ಸಮೂಹದಿಂದ ನಿರಂತರ ಅಪಘಾತ ಹೃದಯ ರೋಗ ಸೇರಿ ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮುಂದೆಯೂ ಜಾಗೃತಿ ಕಾರ್ಯಕ್ರಮಕ್ಕೆ ಕೈ ಜೋಡಿಸಲಿದ್ದೇವೆ
ಡಾ.ವಿಕ್ರಮ್ ಸಿದ್ದಾರೆಡ್ಡಿ ಅಧ್ಯಕ್ಷ ಹಾಗೂ ಎಂ.ಡಿ. ಯುನೈಟೆಡ್ ಆಸ್ಪತ್ರೆಗಳ ಸಮೂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT