ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲಾಧಿಕಾರಿ ಖಾತೆಗಳಲ್ಲಿ ₹ 190 ಕೋಟಿ ತುರ್ತು ನಿಧಿ’

ಮನೆ, ಬೆಳೆ ಹಾನಿಗೀಡಾದವರಿಗೆ ಪರಿಹಾರ ನೀಡಲು ಅಗತ್ಯ ಹಣ: ಸಚಿವ ಕೃಷ್ಣ ಬೈರೇಗೌಡ
Published 31 ಜುಲೈ 2023, 15:38 IST
Last Updated 31 ಜುಲೈ 2023, 15:38 IST
ಅಕ್ಷರ ಗಾತ್ರ

ಕಲಬುರಗಿ: ಮಳೆಯಿಂದಾಗಿ ಮನೆ, ಬೆಳೆ ಹಾನಿಗೀಡಾದ ಪ್ರಕರಣಗಳಲ್ಲಿ ತುರ್ತು ಪರಿಹಾರ ನೀಡಲು ಒಟ್ಟಾರೆ ₹ 190 ಕೋಟಿ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಜಮಾ ಮಾಡಲಾಗಿದೆ. ₹ 141 ಕೋಟಿಯನ್ನು ಬರೀ ಪರಿಹಾರ ನೀಡಲೆಂದೇ ಮೀಸಲಿಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಲಬುರಗಿ ವಿಭಾಗ ಮಟ್ಟದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ‘₹ 141 ಕೋಟಿ ಜೊತೆಗೆ ₹ 39 ಕೋಟಿ ಪ್ರಕೃತಿ ವಿಕೋಪ ಪರಿಹಾರಕ್ಕೆ ಹಾಗೂ ₹ 13 ಕೋಟಿ ಅತ್ಯವಶ್ಯಕ ಖರ್ಚುಗಳನ್ನು ನಿಭಾಯಿಸಲು ತೆಗೆದಿರಿಸಲಾಗಿದೆ. ಮನೆಗಳು, ಬೆಳೆಗಳು ಹಾಳಾದ ಬಗ್ಗೆ ಸರ್ವೆ ನಡೆಸಿದ ತಕ್ಷಣ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಮಳೆ ಹಾನಿಯ ಬಗ್ಗೆ ಪ್ರಾಥಮಿಕ ಹಂತದ ಸರ್ವೆ ಮಾತ್ರ ಇದೆ. ಹೀಗಾಗಿ, ಅದರ ಆಧಾರದ ಮೇಲೆ ಪರಿಹಾರ ನೀಡುವ ಬದಲು ಹೊಸದಾಗಿ ಸರ್ವೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಮಳೆ ಬಂದು ಇನ್ನೂ ನೆಲ ಆರಿಲ್ಲ. ಹೀಗಾಗಿ, ಸರ್ವೆಗೆ ಹೆಚ್ಚು ಸಮಯ ನೀಡುವಂತೆ ಅಧಿಕಾರಿಗಳು ಕೋರಿಕೆ ಸಲ್ಲಿಸಿದ್ದರಿಂದ ಆಗಸ್ಟ್ 3ರಿಂದ ಸರ್ವೆ ಕಾರ್ಯ ಶುರುವಾಗಲಿದ್ದು, ಆ 7ಕ್ಕೆ ಮುಗಿಸುವಂತೆ ತಿಳಿಸಿದ್ದೇನೆ’ ಎಂದು ಹೇಳಿದರು.

ಯಾವುದೇ ನಗರದ ಮಾಸ್ಟರ್ ಪ್ಲಾನ್‌ ವ್ಯಾಪ್ತಿಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳು ಅನುಮತಿ ನೀಡಲು ಐದಾರು ತಿಂಗಳು ತೆಗೆದುಕೊಳ್ಳುತ್ತಿದ್ದರು. ಕರ್ನಾಟಕ ಭೂ ಕಂದಾಯ (ತಿದ್ದುಪಡಿ)ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದು, ಈ ಕಾಯ್ದೆಯಿಂದಾಗಿ ಅರ್ಜಿದಾರ ಸ್ವಯಂ ಘೋಷಣೆಯ ಮೂಲಕವೇ ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಪರಿವರ್ತಿಸಲು ಅವಕಾಶ ನೀಡಲಾಗಿದೆ. ಹೀಗಾಗಿ, ಅನುಮತಿಗೆ ಕಾಯುವ ಬದಲು ನೇರವಾಗಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯೋಜನೆಗೆ ಅನುಮೋದನೆಗಾಗಿ ಅರ್ಜಿ ಸಲ್ಲಿಸಬಹುದು ಎಂದರು.

ಮೊದಲಿದ್ದ 175 ತಾಲ್ಲೂಕುಗಳ ಜೊತೆಗೆ ಹೊಸದಾಗಿ 63 ತಾಲ್ಲೂಕುಗಳನ್ನು ರಚಿಸಲಾಗಿದೆ. ಕೆಲ ತಾಲ್ಲೂಕುಗಳನ್ನು ಅನಗತ್ಯವಾಗಿ ರಚಿಸಲಾಗಿದೆ. ಹಂತ ಹಂತವಾಗಿ ಅವುಗಳಿಗೆ ಕಚೇರಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯಲಿದೆ. ಕೊಂಚ ವಿಳಂಬವಾದರೂ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ನಾಲ್ಕು ಗಂಟೆ ಹಿಡಿಯುತ್ತಿದ್ದ ಆಸ್ತಿ ನೋಂದಣಿಯನ್ನು ಕಾವೇರಿ 2 ತಂತ್ರಾಂಶದ ಮೂಲಕ ಸರಳಗೊಳಿಸಲಾಗಿದ್ದು ಆನ್‌ಲೈನ್‌ ಮೂಲಕವೇ ಉಪನೋಂದಣಾಧಿಕಾರಿ ಅನುಮೋದನೆ ನೀಡುತ್ತಾರೆ. 15 ನಿಮಿಷಗಳಲ್ಲಿ ಪ್ರಕ್ರಿಯೆ ಮುಗಿಯುತ್ತಿದೆ

ಕೃಷ್ಣ ಬೈರೇಗೌಡ ಕಂದಾಯ ಸಚಿವ

‘ಸ್ಮಶಾನ ಭೂಮಿ ಖರೀದಿಗೆ ₹ 14.50 ಕೋಟಿ’

ರಾಜ್ಯದಲ್ಲಿ ಸ್ಮಶಾನ ಭೂಮಿ ಇಲ್ಲದ ಊರುಗಳ ಮಾಹಿತಿ ಪಡೆದು ಅಲ್ಲಿ ಸರ್ಕಾರಿ ಜಾಗ ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ಖಾಸಗಿಯವರಿಂದ ಭೂಮಿ ಖರೀದಿಸಲು ₹ 14.50 ಕೋಟಿ ಖರ್ಚು ಮಾಡಲಾಗಿದೆ. ಇನ್ನಷ್ಟು ಭೂಮಿ ಅಗತ್ಯವಿದ್ದು ಅದನ್ನೂ ಖರೀದಿಸಲು ತೀರ್ಮಾನಿಸಲಾಗಿದೆ. ಯಾವುದೇ ಊರಿನಲ್ಲಿ ಸ್ಮಶಾನ ಭೂಮಿ ಇಲ್ಲದೇ ಜನರು ತೊಂದರೆ ಅನುಭವಿಸಬಾರದು. ಹೀಗಾಗಿ ಎಲ್ಲೆಲ್ಲಿ ಸ್ಮಶಾನ ಭೂಮಿ ಇಲ್ಲವೋ ಅಲ್ಲಿ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲು ಸೂಚನೆ ನೀಡಲಾಗಿದೆ. ಸರ್ಕಾರಿ ಭೂಮಿ ಇಲ್ಲದ ಸಂದರ್ಭದಲ್ಲಿ ಖಾಸಗಿಯವರಿಂದಲೂ ಖರೀದಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಾಟಲಿ ಬದಲು ಸ್ಟೀಲ್ ಗ್ಲಾಸ್

ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೃಷ್ಣ ಬೈರೇಗೌಡ ಅವರು ಇಲಾಖೆಯ ಸಭೆಗಳಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಬಾರದು ಎಂದು ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿ ಸುತ್ತೋಲೆ ಹೊರಡಿಸಿದ್ದರು. ಅದರಂತೆ ಸೋಮವಾರ ಕಲಬುರಗಿಯಲ್ಲಿ ನಡೆದ ಸಭೆಯಲ್ಲಿ ಯಾವುದೇ ಪ್ಲಾಸ್ಟಿಕ್ ಮಿನರಲ್ ಬಾಟಲಿಗಳು ಕಾಣಲಿಲ್ಲ. ಅದರ ಬದಲಾಗಿ ಸ್ಟಿಲ್ ಗ್ಲಾಸ್‌ಗಳಲ್ಲಿ ನೀರು ಇಡಲಾಗಿತ್ತು. ಮಧ್ಯಾಹ್ನದ ಊಟಕ್ಕೂ ಪರಿಸರ ಸ್ನೇಹಿ ಊಟದ ತಟ್ಟೆಗಳನ್ನು ಬಳಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT