ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | 37 ಕುಷ್ಠರೋಗ ಪ್ರಕರಣ ಪತ್ತೆ: ಸೇಡಂನಲ್ಲಿ ಹೆಚ್ಚು, ಅಫಜಲಪುರ ಶೂನ್ಯ

Published 27 ಆಗಸ್ಟ್ 2023, 6:12 IST
Last Updated 27 ಆಗಸ್ಟ್ 2023, 6:12 IST
ಅಕ್ಷರ ಗಾತ್ರ

ವಿಶ್ವರಾಧ್ಯ ಎಸ್‌.ಹಂಗನಳ್ಳಿ

ಕಲಬುರಗಿ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಕುಷ್ಠರೋಗ ಪತ್ತೆ ಅಭಿಯಾನದಲ್ಲಿ ಒಟ್ಟು 37 ಪ್ರಕರಣಗಳು ಪತ್ತೆಯಾಗಿವೆ. ಸೇಡಂ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾದರೆ, ಅಫಜಲಪುರ ತಾಲ್ಲೂಕಿನಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ.

ಕುಷ್ಠರೋಗ ಪತ್ತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2,184 ತಂಡಗಳನ್ನು ರಚಿಸಿತ್ತು. ಈ ತಂಡದಲ್ಲಿ ಆಶಾ ಕಾರ್ಯರ್ತೆ ಮತ್ತು ಸ್ವಯಂ ಸೇವಕರು ಇದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ಮನೆಮನೆಗೆ ಭೇಟಿ ನೀಡಲಾಗಿದೆ. ಜೂನ್‌ 19ರಿಂದ ಜುಲೈ 6ರವರೆಗೆ ನಡೆದ ಅಭಿಯಾನದಲ್ಲಿ ಜಿಲ್ಲೆಯ 22.61 ಲಕ್ಷ ಜನರನ್ನು ಭೇಟಿ ಮಾಡಿದ ತಂಡಗಳು 10,851 ಸಂಶಯಾಸ್ಪದ ಪ್ರಕರಣಗಳೆಂದು ಗುರುತಿಸಿದ್ದವು. ಅವರಿಗೆ ಸ್ಕ್ರೀನಿಂಗ್‌ ಮಾಡಿದಾಗ 37 ಪ್ರಕರಣಗಳು ದೃಢಪಟ್ಟಿವೆ. ಕಳೆದ ಬಾರಿ 28 ಪ್ರಕರಣ ಪತ್ತೆಯಾಗಿದ್ದವು.

ಅಭಿಯಾನದಲ್ಲಿ ಆಳಂದ–4, ಚಿಂಚೋಳಿ–7, ಚಿತ್ತಾಪುರ–7, ಜೇವರ್ಗಿ–2, ಕಲಬುರಗಿ ನಗರ–1, ಕಲಬುರಗಿ ಗ್ರಾಮೀಣ–7, ಸೇಡಂ–9 ಪ್ರಕರಣಗಳು ಕಂಡುಬಂದಿವೆ. ಈ ಪೈಕಿ ಆಳಂದ–2 ಮತ್ತು ಚಿಂಚೋಳಿ–2 ಮಕ್ಕಳಲ್ಲಿಯೂ ಕುಷ್ಠರೋಗ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟಾರೆ ಪಿಬಿ–13 ಮತ್ತು 120 ಎಂಬಿ ಪ್ರಕರಣಗಳು ಸೇರಿ 133 ಕುಷ್ಠರೋಗಿಗಳು ಇದ್ದಾರೆ.

ರೋಗ ಲಕ್ಷಣ: ಕುಷ್ಠರೋಗಿಯು ಸೀನುವುದು ಮತ್ತು ಕೆಮ್ಮುವುದರಿಂದ ಗಾಳಿಯ ಮೂಲಕ ‘ಮೈಕೊಬ್ಯಾಕ್ಟೇರಿಯಂ ಲೆಪ್ರೆ’ ಎಂಬ ರೋಗಾಣುವಿನಿಂದ ಕುಷ್ಠರೋಗ ಹರಡುತ್ತದೆ. ಚರ್ಮ ಮತ್ತು ನರಗಳಿಗೆ ಹಾನಿ ಉಂಟು ಮಾಡುತ್ತದೆ. ಚರ್ಮದಲ್ಲಿ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ಚರ್ಮ ದಪ್ಪ ಆಗುವುದು, ಗಂಟುಗಳಾಗುವುದು, ಎಣ್ಣೆ ಹಚ್ಚಿದಂತೆ ಕಂಡುಬರುವುದು ರೋಗದ ಲಕ್ಷಣಗಳಾಗಿವೆ.

‘ಒಂದರಿಂದ 5 ಮಚ್ಚೆವುಳ್ಳ ರೋಗಿಗೆ ಪಿಬಿ (ಪಾಸಿಬೆಸಿಲ್ಲರಿ) ಎಂದು ಗುರುತಿಸಿ 6 ತಿಂಗಳು ಚಿಕಿತ್ಸೆ ನೀಡಲಾಗುವುದು. 5ಕ್ಕಿಂತ ಮೇಲ್ಪಟ್ಟು ಮಚ್ಚೆವುಳ್ಳ ರೋಗಿಗೆ ಎಂಬಿ (ಮಲ್ಟಿಬೆಸಿಲ್ಲರಿ) ಎಂದು ಗುರುತಿಸಿ 12 ತಿಂಗಳು ಚಿಕಿತ್ಸೆ ನೀಡಲಾಗುವುದು’ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ರಾಜಕುಮಾರ ಕುಲಕರ್ಣಿ ತಿಳಿಸಿದ್ದಾರೆ.

ಸಂಪೂರ್ಣ ಗುಣಮುಖ ಸಾಧ್ಯ: ‘ಕುಷ್ಠರೋಗ ಶಾಪ ಅಥವಾ ಪಾಪದಿಂದ ಬರುವುದಿಲ್ಲ. ರೋಗಲಕ್ಷಣ ಕಂಡುಬಂದರೆ ಅದನ್ನು ಮುಚ್ಚಿಡದೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಗೆ ತೋರಿಸಬೇಕು. ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗುತ್ತಾರೆ. ನಿರ್ಲಕ್ಷ್ಯ ತೋರಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಅಂಗವಿಕಲತೆ ಉಂಟಾಗುತ್ತದೆ’ ಎಂದು ಎಚ್ಚರಿಸುತ್ತಾರೆ ಅವರು.

ಕಲಬುರಗಿ ಜಿಲ್ಲೆಯ ಗ್ರಾಮವೊಂದರಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ನಡೆಯಿತು
ಕಲಬುರಗಿ ಜಿಲ್ಲೆಯ ಗ್ರಾಮವೊಂದರಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ನಡೆಯಿತು
ಡಾ.ರಾಜಶೇಖರ ಮಾಲಿ
ಡಾ.ರಾಜಶೇಖರ ಮಾಲಿ
ಡಾ.ರಾಜಕುಮಾರ ಕುಲಕರ್ಣಿ
ಡಾ.ರಾಜಕುಮಾರ ಕುಲಕರ್ಣಿ
ಹೊಸದಾಗಿ ಕಂಡುಬಂದ ಕುಷ್ಠರೋಗಿಗಳಿಗೆ ಬೆನ್ನಲ್ಲೇ ಚಿಕಿತ್ಸೆ ಆರಂಭಿಸಲಾಗಿದೆ. ರೋಗಿಗಳನ್ನು ಗುಣಪಡಿಸುವ ಜೊತೆಗೆ ಕುಷ್ಠರೋಗ ಮುಕ್ತ ಜಿಲ್ಲೆಗೆ ಶ್ರಮಿಸಲಾಗುತ್ತಿದೆ. ಇದಕ್ಕೆ ಜನರೂ ಸಹಕಾರ ನೀಡಬೇಕು.
ಡಾ.ರಾಜಶೇಖರ ಮಾಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ರೋಗಲಕ್ಷಣ ಕಂಡುಬಂದರೂ ಬಹುತೇಕ ಜನ 6 ತಿಂಗಳಿಂದ 1 ವರ್ಷದವರೆಗೆ ಮುಚ್ಚಿಡುತ್ತಾರೆ. ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಇದು ರೋಗ ವ್ಯಾಪಿಸಲು ಪ್ರಮುಖ ಕಾರಣ.
ಡಾ.ರಾಜಕುಮಾರ ಕುಲಕರ್ಣಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ
‘ತಿಳಿವಳಿಕೆ ಜೊತೆಗೆ ರೋಗ ಪತ್ತೆ’
‘ಈ ಮೊದಲು ಕುಷ್ಠರೋಗ ಪ್ರಕರಣಗಳು ಕಂಡುಬಂದ ಪ್ರದೇಶದಲ್ಲಿ ಮಾತ್ರ ಅಭಿಯಾನ ನಡೆಸಲಾಗುತ್ತಿತ್ತು. ಕೋವಿಡ್‌ ಕಾರಣ ಕಳೆದೆರಡು ವರ್ಷಗಳಲ್ಲಿ ಹೆಚ್ಚಾಗಿ ಗಮನಹರಿಸಲಿಲ್ಲ. ಹಾಗಾಗಿ ಈ ಬಾರಿ ಜಿಲ್ಲೆಯ ಎಲ್ಲ ಮನೆಮನೆಗೆ ಭೇಟಿ ನೀಡಿ ಜನರಿಗೆ ತಿಳಿವಳಿಕೆ ಮೂಡಿಸುವ ಜೊತೆಗೆ ರೋಗ ಪತ್ತೆ ಕಾರ್ಯ ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದರು. ‘ಕುಷ್ಠರೋಗಿಗಳಲ್ಲಿ ನರಗಳ ಹಾನಿಯಿಂದಾಗಿ ಸ್ಪರ್ಶ ಜ್ಞಾನ ಕಳೆದುಕೊಳ್ಳುತ್ತದೆ. ಕೈಕಾಲುಗಳಲ್ಲಿ ಪಾರ್ಶ್ವವಾಯು ಉಂಟಾಗುತ್ತದೆ. ಬೇಗ ಚಿಕಿತ್ಸೆ ಪಡೆದರೆ ಅಂಗವಿಕಲತೆ ತಡೆಯಬಹುದು. ಹಾಗಾಗಿ ಆಶಾ ಕಾರ್ಯಕರ್ತೆಯರ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಒಂದೊಂದು ತಿಂಗಳ ಮಾತ್ರೆ ನೀಡಲಾಗುವುದು. ಮಾತ್ರೆ ಸೇವಿಸಿದ ಬಗ್ಗೆ ದೃಢಪಡಿಸಿಕೊಳ್ಳಲು ಮಾತ್ರೆಗಳ ಖಾಲಿಸ್ಟ್ರಿಪ್‌ ಪಡೆದು ಮತ್ತೆ ಔಷಧ ವಿತರಿಸಲಾಗುವುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT