ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 6 ಜನ ಸಾವು, 1407 ಪಾಸಿಟಿವ್‌

ಜಿಲ್ಲೆಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಹೆಚ್ಚಿದ ಸಾವಿನ ಸಂಖ್ಯೆ
Last Updated 2 ಮೇ 2021, 7:40 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ‌ 6 ಜನ ನಿಧನರಾಗಿದ್ದಾರೆ ಎಂದು ಶನಿವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.

ತೀವ್ರ ಉಸಿರಾಟದ ತೊಂದರೆ (ಸಾರಿ), ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಗ್ರಾಮದ 60 ವರ್ಷದ ವೃದ್ಧ ಏ.30ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಮೇ 1ಕ್ಕೆ ನಿಧನರಾದರು. ಸಾರಿ, ಅಧಿಕ ರಕ್ತದೊತ್ತಡದಿಂದ‌ ಬಳಲುತ್ತಿದ್ದ ಶಹಾಬಾದ್‌ ಪಟ್ಟಣದ 66 ವರ್ಷದ ವೃದ್ಧ ಏ.24ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.30ಕ್ಕೆ ಮೃತಪಟ್ಟರು. ಸಾರಿ ಹಿನ್ನೆಲೆಯಿಂದ ಅಫಜಲಪುರ ಪಟ್ಟಣದ 45 ವರ್ಷದ ಪುರುಷ ಏ.23 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.30ಕ್ಕೆ ನಿಧನರಾದರು.

ಕಲಬುರ್ಗಿಯ ಗಾಬರೆ ಲೇಔಟ್ ಪ್ರದೇಶದ 59 ವರ್ಷದ ಪುರುಷಸಾರಿ ಸಮಸ್ಯೆಯಿಂದಾಗಿ ಏ.21ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.30ಕ್ಕೆ ಮೃತಪಟ್ಟರು. ಸಾರಿ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ರಾಜಾಪುರದ 40 ವರ್ಷದ ಪುರುಷ ಏ.24ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.30ಕ್ಕೆ ಸಾವಿಗೀಡಾದರು. ಸಾರಿ ಜೊತೆಗೆ ಮಧುಮೇಹ, ಕಿಡ್ನಿ ಸಮಸ್ಯೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ರಾಮಮಂದಿರ ಬಳಿಯ 41 ವರ್ಷದ ಮಹಿಳೆ ಏ.27ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಮೇ 1ಕ್ಕೆ ನಿಧನ ಹೊಂದಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ 472 ಜನ ನಿಧನರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಮತ್ತೆ 1407 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 807 ಜನ ಗುಣಮುಖರಾಗಿದ್ದಾರೆ.

ಭೇಟಿಗೆ ಅವಕಾಶ ನಿರಾಕರಣೆ; ಜನರ ಅಳಲು
ಕಲಬುರ್ಗಿಯ ಜಿಮ್ಸ್‌ ಹಾಗೂ ಟ್ರಾಮಾ ಕೇರ್ ಸೆಂಟರ್‌ನಲ್ಲಿ ದಾಖಲಿಸಲಾದ ಕೋವಿಡ್‌ ರೋಗಿಗಳನ್ನು ಕಾಣಲು ಹಾಗೂ ಮನೆಯಿಂದ ತಂದ ಊಟವನ್ನು ಕೊಡಲು ಹಲವು ಜನರಿಗೆ ಸಾಧ್ಯವಾಗುತ್ತಿಲ್ಲ. ಕೆಲ ರೋಗಿಗಳಿಗೆ ಎರಡು ದಿನಗಳಿಂದಲೂ ನೋಡಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡ ಅವರಾದ (ಬಿ) ಗ್ರಾಮದ ಜಿಲಾನಿ, ಕಲಬುರ್ಗಿ ಜಯನಗರದ ನಿವಾಸಿ ಸುರೇಂದ್ರ, ‘ಒಳಗೆ ದೂರದಿಂದ ನಮ್ಮ ಸಂಬಂಧಿಕರನ್ನು ನೋಡುತ್ತೇವೆ ಎಂದು ಕೇಳಲು ಹೋದರೆ ಬೌನ್ಸರ್‌ಗಳು ಅವಕಾಶ ಹೊರದಬ್ಬುತ್ತಿದ್ದಾರೆ’ ಎಂದು ಆರೋಪಿಸಿದರು.

‘ನನ್ನ ಅಕ್ಕನನ್ನು ಜಿಮ್ಸ್‌ನಲ್ಲಿ ದಾಖಲಿಸಲಾಗಿದೆ. ಮಾಸ್ಕ್‌ ಕೂಡಾ ಬದಲಾಯಿಸಿಲ್ಲ. ಸರಿಯಾಗಿ ಚಿಕಿತ್ಸೆಯನ್ನೂ ನೀಡುತ್ತಿಲ್ಲ. ನಾವು ಜ್ಯೂಸ್‌, ಎಳನೀರು ಅಥವಾ ಉಪಾಹಾರ ತಂದರೆ ಇಲ್ಲಿಯೇ ಇಸಿದುಕೊಂಡು ಕೊಡುವುದಾಗಿ ಹೇಳುತ್ತಾರೆ. ಆದರೆ, ಎಷ್ಟೋ ಬಾರಿ ಅಲ್ಲಿಗೆ ತಲುಪಿರುವುದೇ ಇಲ್ಲ. ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿಯನ್ನೂ ನಮಗೆ ಕೊಡುತ್ತಿಲ್ಲ. ಇದರಿಂದ ನಮಗೆ ಗಾಬರಿಯಾಗಿದೆ’ ಎಂದು ಜಿಲಾನಿ ಆತಂಕ ವ್ಯಕ್ತಪಡಿಸಿದರು.

‘ಸಂಬಂಧಿಕರ ಭೇಟಿ ಅವಶ್ಯ’
ಕೋವಿಡ್‌ ಸೇರಿದಂತೆ ವಿವಿಧ ಕಾಯಿಲೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ದಿನಕ್ಕೆ ಒಮ್ಮೆಯಾದರೂ ಭೇಟಿ ಮಾಡಲು ಅವರ ಸಂಬಂಧಿಕರಿಗೆ ಅವಕಾಶ ಕೊಡುವುದು ಬಹಳ ಮುಖ್ಯ. ಎಷ್ಟೋ ಬಾರಿ ಔಷಧಿಯಿಂದ ಗುಣಮುಖರಾಗದವರು ತಮ್ಮ ಸಂಬಂಧಿಕರನ್ನು ಭೇಟಿ ಮಾಡಿದ ಬಳಿಕ ಚೇತರಿಸಿಕೊಂಡ ಉದಾಹರಣೆಗಳಿವೆ ಎನ್ನುತ್ತಾರೆ ನಗರದ ಹಿರಿಯ ಮನಃಶಾಸ್ತ್ರಜ್ಞರೊಬ್ಬರು.

‘ವೈದ್ಯರು ರೋಗಿಗಳನ್ನು ಮುಟ್ಟಿ ನೋಡಿ ಧೈರ್ಯ ಹೇಳುವ ಪದ್ಧತಿಯೂ ಹೊರಟು ಹೋಗಿದೆ. ಬರೀ ಯಂತ್ರಗಳ ವರದಿಯನ್ನು ಆಧರಿಸಿ ಚಿಕಿತ್ಸೆ ಪ್ರಾರಂಭಿಸುತ್ತಾರೆ. ಇಡೀ ದಿನ ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿಯ ಕೈಮುಟ್ಟಿ ನಾನಿದ್ದೀನಿ, ನಿನಗೇನೂ ಆಗುವುದಿಲ್ಲ ಎಂದು ಧೈರ್ಯ ಹೇಳಿದರೆ ಎಷ್ಟೋ ಉತ್ಸಾಹ ಮೂಡುತ್ತದೆ. ಜೊತೆಗೆ, ಹೊರಗೆ ಕಾಯುತ್ತಿರುವ ಅವರ ಸಂಬಂಧಿಗಳಿಗೂ ಭೇಟಿ ಮಾಡಲು ಅವಕಾಶ ನೀಡಿದರೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಸಾಯುವ ಕೊನೆಗಳಿಗೆಯಲ್ಲಾದರೂ ತನ್ನ ಸಂಬಂಧಿಕರನ್ನು ನೋಡಿದ ಖುಷಿ ಸಿಗುತ್ತದೆ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT