ಬುಧವಾರ, ಆಗಸ್ಟ್ 4, 2021
23 °C

ಕೋವಿಡ್‌ನಿಂದ ಮತ್ತೆ 6 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೋವಿಡ್‌ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ ಆರು ಜನ ಮೃತಪಟ್ಟಿದ್ದು, ಶುಕ್ರವಾರ ದೃಢವಾಗಿದೆ. ಇವರಲ್ಲಿ ಒಬ್ಬ ಗರ್ಭಿಣಿಯೂ ಇದ್ದಾರೆ. ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಇದೂವರೆಗೆ ಮೃತರಾದವರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸೋಂಕಿನಿಂದ ಗರ್ಭಿಣಿಯ ಸಾವಾಗಿದೆ. 52 ವರ್ಷ ವಯಸ್ಸಿನವರಾದ ಈ ಗರ್ಭಿಣಿ ಇಲ್ಲಿನ ಭವಾನಿ ನಗರದ ನಿವಾಸಿ ಆಗಿದ್ದರು. ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರನ್ನು ಜುಲೈ 22ರಂದು ಆಸ್ಪತ್ರೆಗೆ ದಾಖಲಾಗಿತ್ತು. ಜುಲೈ 29ರಂದು ನಿಧನ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.

ಅದೇ ರೀತಿ, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ 59 ವರ್ಷದ ಪುರುಷ ಜುಲೈ 16ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದು, ಶುಕ್ರವಾರ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇದ್ದ, ಕಲಬುರ್ಗಿಯ ಓಂ ನಗರದ 76 ವರ್ಷದ ವೃದ್ಧ ಜುಲೈ 26ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ 27ರಂದು ನಿಧನ ಹೊಂದಿದ್ದಾರೆ. ಶಹಾಬಾದ್‌ ಪಟ್ಟಣದ 85 ವರ್ಷದ ವೃದ್ಧ ಕೂಡ ಇದೇ ಸಮಸ್ಯೆಯಿಂದಾಗಿ ಜುಲೈ 26ರಂದು ಆಸ್ಪತ್ರೆಗೆ ದಾಖಲಾಗಿ 27ರಂದು ನಿಧನ ಹೊಂದಿದ್ದಾರೆ.

ವಿಷಮಶೀತ ಜ್ವರದಿಂದ ಬಳಲುತ್ತಿದ್ದ ನಗರದ ಪೂಜಾ ಕಾಲೊನಿಯ 64 ವರ್ಷದ ವೃದ್ಧ ಜುಲೈ 26ರಂದು ಆಸ್ಪತ್ರೆಗೆ ದಾಖಲಾಗಿ ಅದೇ ದಿನ ನಿಧನ ಹೊಂದಿದ್ದಾರೆ.

ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ನಗರದ ಸಿ.ಐ.ಬಿ ಕಾಲೊನಿಯ 69 ವರ್ಷದ ವೃದ್ಧ ಕೂಡ ಜುಲೈ 27ರಂದು ಕೊನೆಯುಸಿರೆಳೆದಿದ್ದಾರೆ.

144 ಪಾಸಿಟಿವ್‌, 148 ಗುಣಮುಖ:

ಜಿಲ್ಲೆಯಲ್ಲಿ ಮತ್ತೆ 144 ಮಂದಿಗೆ ಕೊರೊನಾ ವೈರಾಣು ಅಂಟಿಕೊಂಡಿದ್ದು, ಶುಕ್ರವಾರ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,310ಕ್ಕೆ ಏರಿದೆ.

ಇವರಲ್ಲಿ 2,513 ಸಕ್ರಿಯ ಪ್ರಕರಣಗಳಿವೆ. 432 ಮಂದಿಯನ್ನು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ. ಉಳಿದವರೆಲ್ಲ ಕೋವಿಡ್ ಕೇರ್‌ ಕೇಂದ್ರ ಸೇರಿದ್ದಾರೆ.‌

ಇನ್ನೊಂದೆಡೆ, ಶುಕ್ರವಾರವೇ 148 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ 2702ಕ್ಕೆ ಏರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.