ಶನಿವಾರ, ಜನವರಿ 23, 2021
19 °C
ಎಐಟಿಯುಸಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ ಅಭಿಮತ

ಕೋಮುವಾದದ ವಿರುದ್ಧ ಆಂದೋಲನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೋಮುವಾದಿ ಶಕ್ತಿಗಳು ಧಾರ್ಮಿಕ ದ್ವೇಷದ ಮೂಲಕ ದೇಶದ ದುಡಿಯುವ ಜನರ ಒಗ್ಗಟ್ಟನ್ನು ಮುರಿಯಲು ಯತ್ನಿಸುತ್ತಿವೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ರಾಜ್ಯ ಮತ್ತು ದೇಶವ್ಯಾಪಿ ಜನಾಂದೋಲನ ರೂಪಿಸಬೇಕಿದೆ’ ಎಂದು ಎಐಟಿಯುಸಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ ತಿಳಿಸಿದರು.‌

ನಗರದ ವಿಶ್ವೇಶ್ವರಯ್ಯ ಎಂಜಿನಿಯರ್ ಭವನದಲ್ಲಿ ಭಾನುವಾರ ನಡೆದ ಎಐಟಿಯುಸಿ 7ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ನಿರಂತರ ಹೋರಾಟ ಮತ್ತು ಬಲವಾದ ಒಗ್ಗಟ್ಟಿನಿಂದ ಕೋಮುವಾದ ಮತ್ತು ಫ್ಯಾಸಿಸಂ ವಿರುದ್ಧ ಹೋರಾಟ ಮಾಡುವುದು ಇಂದಿನ ಅಗತ್ಯವಾಗಿದೆ. ಕೋಮುವಾದಿಗಳು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತಂದು ನೈಜ ಸಮಸ್ಯೆಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಕೋಮುವಾದಿ ಶಕ್ತಿಗಳಿಗೆ ತಕ್ಕ ಉತ್ತರ ನೀಡಲು ಜಾತಿ, ಧರ್ಮ, ಸಿದ್ಧಾಂತ ಎಲ್ಲವನ್ನೂ ಮೀರಿ ಒಂದಾಗಬೇಕಿದೆ. ಭಿನ್ನಾಭಿಪ್ರಾಯಗಳನ್ನು ಮರೆತು ದೇಶ ಮತ್ತು ಸಂವಿಧಾನದ ಹಿತದೃಷ್ಟಿಯಿಂದ ಮುನ್ನಡೆಯಬೇಕಿದೆ’ ಎಂದರು.

ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಮಾತನಾಡಿ, ‘ಕಾರ್ಮಿಕರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಿದ್ಧಾಂತದಡಿ ಸಂಘಟಿತರಾಗಿ ರಾಜಕೀಯ ಅಧಿಕಾರ ಪಡೆದುಕೊಂಡಾಗ ಮಾತ್ರ ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯ. ದುಡಿಯುವ ವರ್ಗ ಎಚ್ಚೆತ್ತುಕೊಂಡು ನಾವೆಲ್ಲ ಒಂದು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

‘ಕೇಂದ್ರ ಸರ್ಕಾರ ತನ್ನ ಸ್ವಾಯತ್ತ ಸಂಸ್ಥೆಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸುತ್ತಿದೆ. ಖಾಸಗೀಕರಣ ಹೆಚ್ಚಾದಂತೆ ಕಾರ್ಮಿಕ ಹಕ್ಕುಗಳು ಉಳಿಯುದಿಲ್ಲ. ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಕನಿಷ್ಠ ಸೌಲಭ್ಯಗಳು ಕೂಡ ಇರುವುದಿಲ್ಲ. ಇದರ ವಿರುದ್ಧ ನಾವು ಸಂಘಟಿತರಾಗಿ ಹೋರಾಟಬೇಕು’ ಎಂದರು.

ಎಐಟಿಯುಸಿ ಮುಖಂಡ ಬಾಬು ರಾವ ಹೊನ್ನಾ, ಸಿಪಿಐ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ಎಐಟಿಯುಸಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಎಂ.ಪತ್ತಾರ, ಎಲ್‌ಐಸಿ ಯೂನಿಯನ್ ಮುಖಂಡ ಸಿ.ಕೆ.ವಿಜೇಂದ್ರ, ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ಅಧ್ಯಕ್ಷ ಹಣಮಂತರಾಯ ಅಟ್ಟೂರ ಮಾತನಾಡಿದರು. ಎಐಟಿಯುಸಿ ಜಿಲ್ಲಾ ಸಮಿತಿ ಪ್ರಭುದೇವ ಯಳಸಂಗಿ
ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.