ಭಾನುವಾರ, ಜುಲೈ 25, 2021
22 °C
ಚಿಂಚೋಳಿಯ ಯುವಜನರಿಗೆ ವರದಾನ

ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಸಮ್ಮತಿ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಇಲ್ಲಿನವರ ಬಹುದಿನಗಳ ಕನಸು ನನಸಾಗುತ್ತಿದ್ದು, ತಾಲ್ಲೂಕಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಲು ಗುಲಬರ್ಗಾ ವಿಶ್ವವಿದ್ಯಾಲಯ ಹಸಿರು ನಿಶಾನೆ ತೋರಿಸಿದೆ ಎಂದು ತಿಳಿದುಬಂದಿದೆ.

ಚಿಂಚೋಳಿಯಲ್ಲಿ 2 ಮತ್ತು ಸುಲೇಪೇಟದಲ್ಲಿ 1 ಪದವಿ ಕಾಲೇಜು ಇದೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾಗಿತ್ತು. ತಾಲ್ಲೂಕು ಕೇಂದ್ರದಿಂದ ಬಹುದೂರದಲ್ಲಿನ ಜಿಲ್ಲಾ ಕೇಂದ್ರಕ್ಕೆ ತೆರಳಲು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಪಟ್ಟಣದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯುವಂತೆ ಶಿಕ್ಷಣ ಪ್ರೇಮಿಗಳು, ಸಂಘ–ಸಂಸ್ಥೆಗಳು, ಜನಪ್ರತಿನಿಧಿಗಳು ಒತ್ತಾಯಿಸಿದ್ದರು.

ಈ ಹಿಂದೆ ಉಮೇಶ ಜಾಧವ ಅವರು ಶಾಸಕರಾಗಿದ್ದಾಗ ಅಂದಿನ ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಮತ್ತು ಜಿ.ಟಿ ದೇವೇಗೌಡ ಹಾಗೂ ವಿ.ವಿ. ಕುಲಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು. ಕೋವಿಡ್‌ನಿಂದ ಇದು ನನೆಗುದಿಗೆ ಬಿದ್ದಿತ್ತು.

2020ರ ಜ.28ರಂದು ವಿವಿಯ ಉಪಸಮಿತಿ ಅಧ್ಯಕ್ಷ ಪ್ರೊ. ಲಕ್ಷ್ಮಣ ರಾಜನಾಳಕರ್ ಅವರು ಸಮಿತಿ ಸದಸ್ಯರ ಜತೆ ಚಿಂಚೋಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆ ಬಳಿಕ ವಿ.ವಿ.ಗೆ ತಮ್ಮ ವರದಿ ಸಲ್ಲಿಸಿ, ’ಚಿಂಚೋಳಿಯಲ್ಲಿ ಕನ್ನಡ, ಅರ್ಥಶಾಸ್ತ್ರ, ಇತಿಹಾಸ, ವಾಣಿಜ್ಯ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಬಹುದು’ ಎಂದು ಅದರಲ್ಲಿ ಉಲ್ಲೇಖಿಸಿದ್ದರು.

ಶಾಸಕ ಡಾ. ಅವಿನಾಶ ಜಾಧವ ಅವರು ಅಧಿಕಾರಿಗಳ ಜೊತೆ ಚರ್ಚಿಸಿ ಅಧ್ಯಯನ ಕೇಂದ್ರ ತೆರೆಯಲು ಒತ್ತಡ ಹೇರಿದ್ದರು. ಶಿಕ್ಷಣ ಪ್ರೇಮಿಗಳಾದ ಅಶೋಕ ಪಾಟೀಲ ಮತ್ತು ರಮೇಶ ಯಾಕಾಪುರ ಅವರು ಕೂಡ ವಿ.ವಿ.ಗೆ ಮನವಿ ಸಲ್ಲಿಸಿದ್ದರು.

ಏಪ್ರಿಲ್ 30ರಂದು ನಡೆದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಸದಸ್ಯ ರಮೇಶ ಧುತ್ತರಗಿ ಅವರು ಕುಲಪತಿಗಳಿಗೆ ಮನವಿ ಸಲ್ಲಿಸಿ, ಅಧ್ಯಯನ ಕೇಂದ್ರದ ಅಗತ್ಯವನ್ನು ಮನವರಿಕೆ ಮಾಡಿದ್ದರು. ಜೂ.30ರ ಸಭೆಯಲ್ಲೂ ’ಚಿಂಚೋಳಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಪ್ರಸಕ್ತ ವರ್ಷವೇ ತೆರೆಯಬೇಕು’ ಎಂದು ವಿಷಯ ಮಂಡಿಸಿದ್ದರು. ಜುಲೈ 6ರಂದು ನಡೆದ ಸಿಂಡಿಕೇಟ್ ಸಭೆಯು ಚಿಂಚೋಳಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಲು ಅನುಮತಿ ನೀಡಿದೆ ಎಂದು ವಿ.ವಿ.ಯ ಮೂಲಗಳು ತಿಳಿಸಿವೆ.

ಜು.16ರಂದು ಮಹತ್ವದ ಸಭೆ
ಚಿಂಚೋಳಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆ ಸಂಬಂಧ ಜು.16ರಂದು (ಶುಕ್ರವಾರ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹತ್ವದ ಸಭೆ ನಡೆಯಲಿದೆ.

ಅಂದಿನ ಸಭೆಗೆ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ, ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ್, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ, ಶಾಸಕ ಡಾ. ಅವಿನಾಶ ಜಾಧವ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ರಮೇಶ ಧುತ್ತರಗಿ, ಉಪವಿಭಾಗಾಧಿಕಾರಿ ರಮೇಶ ಕೋಲಾರ, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಕಾಲೇಜು ಪ್ರಾಂಶುಪಾಲ ಡಾ. ಕೈಲಾಸಪತಿ ವಿಶ್ವಕರ್ಮ, ಇತರೆ ಅಧಿಕಾರಿಗಳು ಭಾಗವಹಿಸುವರು. ಸಭೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಎಲ್ಲಿ ಪ್ರಾರಂಭಿಸಬೇಕು. ಅಗತ್ಯ ಸೌಕರ್ಯ ಹಾಗೂ ಸಿಬ್ಬಂದಿ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

***
ಗಡಿ ಭಾಗದ ಚಿಂಚೋಳಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಬೇಕೆಂದು ನಾನು ನಿರಂತರವಾಗಿ ಶ್ರಮಿಸಿದ್ದೇನೆ.
-ರಮೇಶ ಧುತ್ತರಗಿ, ಗು.ವಿ.ವಿ. ಅಕಾಡೆಮಿಕ್ ಕೌನ್ಸಿಲ್ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.