ಸೋಮವಾರ, ಮೇ 23, 2022
24 °C
ಚೈತನ್ಯಮಯಿ ಆರ್ಟ್‌ ಗ್ಯಾಲರಿಯಲ್ಲಿ ಒಂದು ವಾರ ‘ಶರಣರ ಚಿತ್ರಕಲಾ ಪ್ರದರ್ಶನ’

ಕಲಬುರಗಿ: ಕುಂಚದಲ್ಲಿ ಶರಣಲೋಕ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಚೈತನ್ಯಮಯಿ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇಲ್ಲಿನ ವಿಶ್ವೇಶ್ವರಯ್ಯ ನಗರದ ಚೈತನ್ಯಮಯಿ ಆರ್ಟ್‌ ಗ್ಯಾಲರಿಯಲ್ಲಿ ನಡೆದ ‘ಶರಣರ ಚಿತ್ರಕಲಾ ಪ್ರದರ್ಶನ’ ಪ್ರೇಕ್ಷಕರನ್ನು ಸೆಳೆಯಿತು.

ಬಸವಾದಿ ಶರಣ ಜೀವನ, ಕಾಯಕ– ಕ್ಷೇತ್ರ ಹಾಗೂ ವಚನಗಳು ಎಂಬ ಮೂರು ಆಯಾಮಗಳಲ್ಲಿ ಇಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇದಕ್ಕೆಂದೇ ಮಂತ್ರಾಲಯದಲ್ಲಿ 10 ದಿನಗಳ ಶಿಬಿರ ಆಯೋಜಿಸಿ, 15 ವಿವಿಧ ಕಲಾವಿದರಿಂದ ವಿಷಯವಾರು ಚಿತ್ರಕಲಾಕೃತಿಗಳನ್ನು ಕಲೆಹಾಕಲಾಗಿದೆ. ತೈಲವರ್ಣ, ಜಲವರ್ಣ, ಅಕ್ರೆಲಿಕ್‌, ರೇಖಾಚಿತ್ರ ಸೇರಿದಂತೆ ಬಹು ಮಾಧ್ಯಮದ ಕಲಾಕೃತಿಗಳನ್ನು ಒಂದೇ ಗ್ಯಾಲರಿಯಲ್ಲಿ ನೋಡುವುದೇ ವಿಶೇಷ.

ಕಲಾವಿದರಾದ ಎಂ.ಡಿ. ತಳವಾರ ಅವರು ಚಿತ್ರಿಸಿದ ಆಯ್ದಕ್ಕಿ ಲಕ್ಕಮ್ಮ ಹಾಗೂ ಆಯ್ದಕ್ಕಿ ಮಾರಯ್ಯ ಅವರ ಕಲಾಕೃತಿ ಗಮನ ಸೆಳೆಯುತ್ತದೆ. ವಿ.ಬಿ.ಬಿರಾದಾರ ಅವರು ಬಿಡಿಸಿದ ಸಮಗಾರ ಹರಳಯ್ಯನವರ ಚಿತ್ರಕಲೆ ಶರಣಲೋಕಕ್ಕೆ ಎಳೆದೊಯ್ಯುವಂತಿದೆ. ಹರಳಯ್ಯ ದಂಪತಿಯ ತೊಡೆ ಚರ್ಮದಿಂದ ಮಾಡಿದ ಪಾದರಕ್ಷೆ, ಅದನ್ನು ತಲೆ ಮೇಲೆ ಹೊತ್ತ ಬಸವಣ್ಣ, ಆ ಕ್ಷಣ ಶರಣರಲ್ಲಿ ಮೂಡಿದ ರೋಮಾಂಚನ ಎಲ್ಲವೂ ವರ್ಣಮಯವಾಗಿದೆ.

ಎಸ್‌.ಎಸ್‌.ಸಿಂಪಿ ಅವರು ಬಿಡಿಸಿದ ಮಾದಾರ ಚನ್ನಯ್ಯನ ಪಾದಕ್ಕೆ ನಮಸ್ಕರಿಸುವ ಚೇಳರ ದೊರೆಯ ಪ್ರಸಂಗ, ಹುತ್ತವ ಬಡಿದಡೆ ಹಾವು ಸಾಯಬಲ್ಲದೇ ಎನ್ನುವ ವಚನಾಧರಿಸಿ ಶಾಹೀದ್‌ಪಾಶಾ ಅವರು ಮೂಡಿಸಿದ ಪೇಂಟಿಂಗ್, ಕುಂಬಾರ ಕುಂಡಯ್ಯನ ನಾಟ್ಯದ ಸೊಬಗು ಕಟ್ಟಿಕೊಟ್ಟ ವಿ.ಎಸ್‌. ಕೊಪ್ಪದ ಅವರ ಕಲಾಶಕ್ತಿ, ಅಕ್ಕಮಹಾದೇವಿಯನ್ನು ವರ್ಣಿಸಿದ ಪ್ರೊ.ವಿಶ್ವೇಶ್ವರಿ ತಿವಾರಿ ಅವರ ಕೈಚಳಕ, ಅಫ್ಗಾನಿಸ್ತಾನದ ಶರಣ ಮರುಳಶಂಕರ ದೇವನ ಕಾಯಕ ಸೆರೆಹಿಡಿದ ಕಲಾವಿದ ಶಿವರಾಜ ಎಸ್‌. ಇಂಡಿ ಅವರ ಕುಂಚ ಚತುರತೆ ಮನಸ್ಸಿಗೆ ಮುದ ನೀಡುತ್ತವೆ.

ಅಲ್ಲದೇ, ಚಂದ್ರಶೇಖರ ಸೋಮಶೆಟ್ಟಿ, ಶ್ರೀಶೈಲ್ ಗುಡೇದ, ಎ.ಎಸ್. ಪಾಟೀಲ, ಬಸವರಾಜ ಮುಗಳಿ ಅವರ ರೇಖಾಚಿತ್ರಗಳೂ ಗಮನ ಸೆಳೆಯುವಂತಿವೆ.

ಉದ್ಘಾಟನೆ: ಬೀದರ್‌ನ ಚಿತ್ರಕಲಾವಿದ ಚಂದ್ರಶೇಖರ ಸೋಮಶೆಟ್ಟಿ ಪ್ರದರ್ಶನ ಉದ್ಘಾಟಿಸಿದರು. ಟ್ರಸ್ಟ್‌ ಅಧ್ಯಕ್ಷ ಡಾ.ಎ.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಬಸವರಾಜ ಶಿವಪುತ್ರಪ್ಪ ಅನಗವಾಡಿ ಅವರಿಗೆ ಈ ಸಾಲಿನ ‘ಚೈತನ್ಯಶ್ರೀ’ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷ ಅಪ್ಪಾರಾವ್‌ ಅಕ್ಕೋಣೆ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್‌–ಕಲಬುರಗಿ ಅಧ್ಯಕ್ಷ ಕುಪೇಂದ್ರ ಪಾಟೀಲ ಉಪನ್ಯಾಸ ನೀಡಿದರು. ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನವೆಂಬರ್‌ 21ರವರೆಗೂ ಪ್ರತಿದಿನ ಸಂಜೆ 4ರಿಂದ 8ರವರೆಗೆ ಈ ಪ್ರದರ್ಶನ ತೆರೆದಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು