ಗುರುವಾರ , ಮೇ 26, 2022
31 °C

ಕಲಬುರಗಿ: ಸೇಂದಿ ಮಾರಾಟಕ್ಕೆ ಅನುಮತಿಗೆ ಒತ್ತಾಯಿಸಿ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸೇಂದಿ ಇಳಿಸಿ ಮಾರಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಸಮಾಜವು ಮೇ 5ರಂದು ಚಿಂಚೋಳಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.

ಸೋಮವಾರ ಈ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಡಾ.ಪ್ರಣವಾನಂದ ಸ್ವಾಮೀಜಿ, ‘ಈಗಾಗಲೇ ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ಸೇಂದಿ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಅದೇ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಸೇಂದಿ ಇಳಿಸುವ ವೃತ್ತಿಯನ್ನೇ ಮಾಡಿಕೊಂಡಿದ್ದ ಕುಟುಂಬಗಳಿಗೆ ಸೇಂದಿ ಮಾರಾಟ ನಿಷೇಧಿಸಿದ 2004ರಿಂದ ಇಲ್ಲಿಯವರೆಗಿನ ಅವಧಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ಪಾದಯಾತ್ರೆ ಆಯೋಜಿಸಲಾಗಿದೆ’ ಎಂದರು.

‘ಕಂದಾಯ, ಅಬಕಾರಿ ಹಾಗೂ ಅರಣ್ಯ ಇಲಾಖೆಗಳು ನಡೆಸಿದ ಸಮೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 32 ಲಕ್ಷ ಈಚಲು ಮರಗಳು ಇರುವುದು ಗೊತ್ತಾಗಿದೆ. ಸಾವಿರಾರು ಮೂರ್ತೆದಾರ (ಸೇಂದಿ ಇಳಿಸುವ ವೃತ್ತಿಯವರು) ಕುಟುಂಬಗಳು ಸೇಂದಿ ಮಾರಾಟ ನಿಷೇಧದಿಂದಾಗಿ ಬೀದಿಪಾಲಾಗಿ ಚಿಂತಾಕ್ರಾಂತವಾಗಿವೆ. ಅವರಿಗೆ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಈಡಿಗ ಸಮುದಾಯದವರು ತಮ್ಮ ಉಪಜೀವನ ಸಾಗಿಸಲು ದೂರದ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ’ ಎಂದು ಹೇಳಿದರು.

‘ಹೊಸದಾಗಿ ವೈನ್‌ಶಾಪ್‌ಗಳ ಲೈಸೆನ್ಸ್‌ ಕೊಡುವಾಗ ಈಡಿಗ ಸಮಾಜಕ್ಕೆ ಹೆಚ್ಚಿನ ಮೀಸಲಾತಿ ನೀಡಬೇಕು. ಎಂಎಸ್‌ಐಎಲ್ ಮಳಿಗೆಗಳಲ್ಲಿ ಈಡಿಗ ಯುವಕರನ್ನು ನೇಮಕ ಮಾಡಿಕೊಳ್ಳಬೇಕು. ಈಡಿಗ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಆರಂಭಿಸಿ ₹ 500 ಕೋಟಿ ಹಣ ಮೀಸಲಿಡಬೇಕು’ ಎಂದು ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.