ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ವರ್ಷಾಂತ್ಯದ ಮಧ್ಯರಾತ್ರಿ ರೈಲಿಗೆ ಕಾಯುತ್ತ....

ಮಧ್ಯರಾತ್ರಿ 2ಕ್ಕೆ ಬರಬೇಕಿದ್ದ ಕೆಕೆ ಎಕ್ಸ್‌ಪ್ರೆಸ್‌ ಬಂದಿದ್ದು ಬೆಳಿಗ್ಗೆ 6ಕ್ಕೆ
Last Updated 26 ಡಿಸೆಂಬರ್ 2020, 2:10 IST
ಅಕ್ಷರ ಗಾತ್ರ

2016 ಡಿಸೆಂಬರ್ 30. ಶುಕ್ರವಾರ ನಸುಕಿನ 2ರ ಹೊತ್ತು. ನಾನು ಇದ್ದದ್ದು ಕಲಬುರ್ಗಿ ರೈಲು ನಿಲ್ದಾಣದಲ್ಲಿ. ಶುಕ್ರವಾರ ಸಂಜೆ 4 ರೊಳಗೆ ಬೆಂಗಳೂರಿಗೆ ತಲುಪಬೇಕಿತ್ತು. 700 ಕಿ.ಮೀ. ದೂರದ ಬೆಂಗಳೂರಿಗೆ 12 ಗಂಟೆ ಅವಧಿಯಲ್ಲಿ ತಲುಪಲು ಇದ್ದ ಏಕೈಕ ಆಶಾಕಿರಣ: ಕೆಕೆ ಎಕ್ಸ್‌ಪ್ರೆಸ್‌ (ಕರ್ನಾಟಕ ಎಕ್ಸ್‌ಪ್ರೆಸ್‌) ರೈಲು. ಇದು ಹೊರತುಪಡಿಸಿದರೆ ಬೇರೆ ಯಾವ ಮಾರ್ಗವೂ ಇರಲಿಲ್ಲ. ನಿಗದಿತ ಸಮಯದಂತೆ ಕೆಕೆ ಎಕ್ಸ್‌ಪ್ರೆಸ್‌ ಮಧ್ಯರಾತ್ರಿ 2ಕ್ಕೆ ಕಲಬುರ್ಗಿಗೆ ಬಂದು, ಮಧ್ಯಾಹ್ನ 2ಕ್ಕೆ ಬೆಂಗಳೂರು ತಲುಪಬೇಕು.

ಕಚೇರಿ ಕೆಲಸ ಮುಗಿಸಿ ಮಧ್ಯರಾತ್ರಿ 12ಕ್ಕೆ ನಿಲ್ದಾಣ ಪ್ರವೇಶಿಸಿ, ಬೆಂಗಳೂರಿಗೆ ಒಂದು ಟಿಕೆಟ್‌ ಕೊಡುವಂತೆ ಕೌಂಟರ್‌ನಲ್ಲಿ ಸಿಬ್ಬಂದಿಗೆ ಕೇಳಿದ್ದೆ ತಡ, ‘ಸದ್ಯಕ್ಕೆ ಕೊಡಲ್ಲ’ ಎಂಬ ಉತ್ತರ ಬಂತು. ಮೂರು ದಿನ ಮುನ್ನವೇ ಸಾಮಾನ್ಯ ಪ್ರಯಾಣ ಟಿಕೆಟ್ ಪಡೆಯಲು ಅವಕಾಶ ಇರುವಾಗ, ನೀವು ಏಕೆ ಟಿಕೆಟ್ ನೀಡುತ್ತಿಲ್ಲ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, ‘ರೈಲು ಬರೋದು ತುಂಬಾ ವಿಳಂಬ. 2ಕ್ಕೆ ಬರಬೇಕಿದ್ದ ರೈಲು 3.30ಕ್ಕೆ ಬರಬಹುದು. ಅದು ಬರುವ ಅರ್ಧ ಅಥವಾ ಒಂದು ಗಂಟೆ ಮುಂಚಿತವಾಗಿ ಟಿಕೆಟ್ ನೀಡುವೆ’ ಎಂದು ಉತ್ತರಿಸಿದರು.

ನನಗೆ ಇದ್ದದ್ದು ಮೂರೇ ಆಯ್ಕೆ 1. ವಾಪಸ್ ಮನೆಗೆ ಹೋಗಿ, 3 ಗಂಟೆಗೆ ನಿಲ್ದಾಣಕ್ಕೆ ಹಿಂದಿರುಗುವುದು. 2. ರೈಲು ನಿಲ್ದಾಣದಲ್ಲೇ ಉಳಿಯುವುದು. 3. ಪ್ರಯಾಣ ರದ್ದುಪಡಿಸಿ ನೆಮ್ಮದಿಯಾಗಿ ನಿದ್ದೆ ಮಾಡುವುದು. ಮೂರನೇ ಆಯ್ಕೆ ಮನಸ್ಸಿನಿಂದ ತೆಗೆದು ಹಾಕಿದೆ. ಮೊದಲನೇ ಆಯ್ಕೆ ಪ್ರಯತ್ನಿಸಬಹುದಿತ್ತು. ಆದರೆ ನನ್ನ ಬಳಿ ಬೈಕ್ ಇರಲಿಲ್ಲ. ನಡೆದು ಹೋಗುವಷ್ಟು ಚೈತನ್ಯವಿತ್ತು, ಆದರೆ ಮಾರ್ಗಮಧ್ಯೆ ಅಪರಿಚಿತರು... ಏನಾದರೂ ಅವಘಡ ಸಂಭವಿಸೀತು ಎಂಬ ಭಯ. ಎರಡನೇ ಆಯ್ಕೆಗೆ ಬದ್ಧನಾಗಿ ಅಲ್ಲೇ ಕೂತುಬಿಟ್ಟೆ.

ನಿಲ್ದಾಣದ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ಎರಡು ಬಾರಿ ಸುತ್ತಿದೆ. ಅಲ್ಲಿದ್ದ ಬಹುತೇಕ ಮಂದಿಗೆ ಅದು ಮಧ್ಯರಾತ್ರಿಯೇ ಆಗಿರಲಿಲ್ಲ. ಕೆಲವರಿಗೆ ಗಾಢ ನಿದ್ರೆ, ಇನ್ನೂ ಕೆಲವರಿಗೆ ತಿಂಡಿ–ಚಹಾ ಸಮಯ. ಅಲ್ಲಲ್ಲಿ ಅಂತಹ ಮೂರು-ನಾಲ್ಕು ಜನರ ಗುಂಪು ಕಾಣಿಸಿತು. ಎಷ್ಟೇ ಅಬ್ಬರವಿದ್ದರೂ, ನಿದ್ದೆಗೆ ಜಾರಿದವರು ಸ್ವಲ್ಪವೂ ಮಿಸುಕಾಡಲಿಲ್ಲ. ಎಲ್ಲೆಲ್ಲಿ ಜಾಗ ಸಿಗುತ್ತೋ, ಅಲ್ಲಲ್ಲಿ ಹೊದಿಕೆ ಹಾಸಿಕೊಂಡು ಪ್ರಯಾಣಿಕರು ಸೇರಿದಂತೆ ಸಮಾಜದ ವಿವಿಧ ಸ್ತರದವರು ಅಲ್ಲಿ ಮಲಗಿದ್ದರು. ಬಡವರು, ವಸತಿರಹಿತರು ಮತ್ತು ಇತರರಿಗೆ ರೈಲ್ವೆ ನಿಲ್ದಾಣ ಸುರಕ್ಷಿತ ತಾಣ.

ನಾನೂ ಕೂಡ ಚಹಾ ತೆಗೆದುಕೊಂಡೆ. ಗಾಜಿನ ಬಟ್ಟಲು ಪೂರ್ತಿಯಾಗಿ ಸಿಕ್ಕ ಚಹಾ ಮೈಮನ ಬೆಚ್ಚಗಾಗಿಸಿತು. ಕಟ್ಟೆ ಮೇಲೆ ಕೂತು ಒಮ್ಮೆ ಗಡಿಯಾರದತ್ತ, ಮಗದೊಮ್ಮೆ ಚಹಾ ಬಟ್ಟಲಿನತ್ತ ನೋಡಿದೆ. ರೈಲು ಬರುವವರೆಗೆ ಚಹಾ ಹೀಗೆ ಬಿಸಿ ಇರಬಾರದೇ ಎಂಬ ಹುಚ್ಚು ಬಯಕೆ. ಆದರೆ ನೋಡುನೋಡುತ್ತಿದ್ದಂತೆ ಚಹಾನೇ ಖಾಲಿ. ಇಷ್ಟೆಲ್ಲ ನಡೆಯುವಷ್ಟರಲ್ಲಿ ಸಮಯ 2 ಗಂಟೆ ಮೀರಿತ್ತು. ಕೌಂಟರ್‌ಗೆ ಹೋಗಿ ಟಿಕೆಟ್‌ಗೆ ಮೊರೆಯಿಟ್ಟೆ. ಆಗಲೂ ಬಂದ ಉತ್ತರ: ಟಿಕೆಟ್ ಈಗಲೇ ಕೊಡಲ್ಲ. ರೈಲು 4 ಅಥವಾ 4.30ಕ್ಕೆ ಬರಬಹುದು. ಅಲ್ಲಿವರೆಗೆ ನೀವು ಕಾಯಬೇಕು.

ಹೆಜ್ಜೆಯಿಡಲು ಆಗದಷ್ಟು ಇಕ್ಕಟ್ಟು

ನಾನು ಯೋಚನೆಗೆ ಬಿದ್ದೆ. ರೈಲು 4.30ಕ್ಕೆ ಬಂದ್ರೆ, ಬೆಂಗಳೂರು ತಲುಪುವುದು ಯಾವಾಗ? ಅಲ್ಲಿನ ಸಂಚಾರ ದಟ್ಟಣೆ ದಾಟಿ ನಿಗದಿತ ಸ್ಥಳ ತಲುಪುವುದು ಯಾವಾಗ ಎಂಬ ಪ್ರಶ್ನೆಗಳು ಕಾಡತೊಡಗಿದವು. ಆದರೆ ಕಾಯುವಿಕೆ ಅನಿವಾರ್ಯವಾಗಿತ್ತು. ರೈಲಿಗಾಗಿ ತಪಸ್ಸು ಮಾಡುತ್ತ ನಿಲ್ದಾಣದ ಒಳ ಮತ್ತು ಹೊರ ಆವರಣದಲ್ಲಿ ಸುತ್ತಾಡಿದೆ. ಎಲ್ಲಾ ಕಡೆಯು ಜನರು ಮಲಗಿದ್ದರು. ಒಂದೊಂದು ಹೆಜ್ಜೆಯಿಡಲು ಸಹ ಇಕ್ಕಟ್ಟು.

ಕಂಬಕ್ಕೆ ಒರಗಿ ಮಲಗಿದ್ದ ತಂದೆಯನ್ನು ಮಗಳ ಅಳು ಎಬ್ಬಿಸಿದರೆ, ಪ್ರಯಾಣಿಕನೊಬ್ಬ ತನ್ನ ಬ್ಯಾಗನ್ನು ಯಾರಾದರೂ ಕದ್ದಾರು ಎಂಬ ಆತಂಕದಲ್ಲೇ ಕಣ್ಣು ಬಿಟ್ಟುಕೊಂಡು ಕೂತಿದ್ದ. ಬರೀ ನೆಲದ ಮೇಲೆ ಮಲಗಿ‌ದ್ದ ಒಬ್ಬಾತ ಹೊರಳಾಡುತ್ತಿದ್ದರೆ, ಮತ್ತೊಬ್ಬ ಎರಡು ಹೊದಿಕೆ ನೆಲದ ಮೇಲೆ ಹಾಸಿ ಮಲಗಿದ್ದ. ಇನ್ನೊಬ್ಬಾತ ಮೈಮೇಲೆ ಹೊದಿಕೆ ಹೊದ್ದು ಮೊಬೈಲ್‌ಫೋನ್‌ನಲ್ಲಿ ಚ್ಯಾಟ್ ಮಾಡುತ್ತಿದ್ದ. ಇದ್ಯಾವೂದರ ಪರಿವೆ ಇಲ್ಲದೇ ಮಾನಸಿಕ ಅಸ್ವಸ್ಥನೊಬ್ಬ ಅಲ್ಲಿ ಇಲ್ಲಿ ಓಡಾಡುತ್ತಿದ್ದರೆ, ಜಗತ್ತಿನ ಗೊಡವೆಗೂ ಮತ್ತು ತನಗೂ ಏನೂ ಸಂಬಂಧ ಇಲ್ಲ ಎಂಬಂತೆ ಭಿಕ್ಷುಕನೊಬ್ಬ ಬರಿಮೈಯಲ್ಲಿ ನೆಲದ ಮೇಲೆ ಮಲಗಿದ್ದ.

ಯಾರಾದರೂ ತನ್ನ ಮೈಯನ್ನು ನೋಡಿಬಿಟ್ಟಾರೂ ಎಂಬ ಭಯದಲ್ಲಿ ಮಹಿಳೆಯೊಬ್ಬರು ಸೀರೆಯನ್ನು ಮೈಪೂರ್ತಿ ಎಳೆದುಕೊಂಡರೆ, ತಾಯಿಯೊಬ್ಬರು ಪುಟ್ಟ ಮಗುವನ್ನು ಮಡಿಲಲ್ಲಿ ಹಾಕಿಕೊಂಡು ನಿದ್ದೆಗೆ ಜಾರಿದ್ದರು. ಇಬ್ಬರೂ ಮಕ್ಕಳನ್ನು ಅಕ್ಕಪಕ್ಕ ಮಲಗಿಸಿಕೊಂಡು ಇನ್ನೊಬ್ಬ ತಾಯಿ ಮಲಗಿದ್ದರು. ಬಹುಶಃ ಬೆಂಗಳೂರಿಗೆ ಹೋಗಬೇಕಿದ್ದ ಜೀನ್ಸ್ ಪ್ಯಾಂಟು ತೊಟ್ಟ ಯುವತಿಯೊಬ್ಬಳು ಕಿವಿಗೆ ಇಯರ್ ಫೋನ್‌ನಲ್ಲಿ ಹಾಡು ಕೇಳುತ್ತ, ನಿದ್ದೆಯನ್ನೇ ಮರೆತಿದ್ದಳು. ಇವೆಲ್ಲದರ ಮಧ್ಯೆ ಅಲ್ಲಲ್ಲಿ ಮಲಗಿದ್ದ ವೃದ್ಧರು ಆಗಾಗ್ಗೆ ಎಚ್ಚರಗೊಂಡು, ಕೈಯಲ್ಲಿನ ಗಡಿಯಾರ ಮತ್ತೆ ಮತ್ತೆ ನೋಡುತ್ತಿದ್ದರು.

ಸಕಾಲಕ್ಕೆ ತಲುಪುವ ಕನಸು

ಸಮಯ 3 ಗಂಟೆ. ಮತ್ತೆ ಕೌಂಟರ್‌ಗೆ ತೆರಳಿದೆ. ಏನೂ ಕೇಳಿರಲಿಲ್ಲ. ನನ್ನ ಪರಿಸ್ಥಿತಿ ಅರಿತ ಸಿಬ್ಬಂದಿ, ’ಬೆಂಗಳೂರು ತಾನೇ‘ ಅಂತ ಎರಡೆರಡು ಸಲ ಕೇಳಿದರು. ಹೌದೆಂದು ತಲೆಯಾಡಿಸಿದೆ. ಕೇಳಿದಷ್ಟು ಹಣ ಕೊಟ್ಟು, ಟಿಕೆಟ್ ತೆಗೆದುಕೊಂಡೆ. ಇನ್ನೇನೂ ಅಲ್ಲಿಂದ ಸರಿಯಬೇಕು, ಅವರು ಮತ್ತೆ ಹೇಳಿದರು . ‘ರೈಲು 5 ಗಂಟೆಗೆ ಬರಬಹುದು ಅಥವಾ ಇನ್ನೂ ವಿಳಂಬವಾಗಬಹುದು’ ಎಂದರು. ‘ಆ ಸಮಯಕ್ಕಾದರೂ ಸರಿಯಾಗಿ ಬರುತ್ತಾ’ ಎಂದು ಮನದೊಳಗೆ ಎರಡೆರಡು ಸಲ ಕೇಳಿದೆ.

4.30 ಆಯಿತು. ರೈಲು ಬರುವ ಅಥವಾ ಬಾರದಿರುವ ಮುನ್ಸೂಚನೆಯೇ ಇಲ್ಲ. ರೈಲು ಕುರಿತು ಮಾಹಿತಿ ನೀಡುವ ಇಂಪಾದ ಧ್ವನಿಯು ಕಾಣೆಯಾಗಿತ್ತು. ರೈಲು ಬರುವುದೇ ಅಥವಾ ಇಲ್ಲವೇ ಎಂಬ ಆತಂಕ. ಕನಿಷ್ಠ 4 ಗಂಟೆ ಬದಲು 6 ಗಂಟೆಯೊಳಗೆ ಬೆಂಗಳೂರಿಗೆ ತಲುಪುತ್ತೇನೆಯೇ ಎಂಬ ಆತಂಕ. ಏನೂ ಮಾಡಬೇಕು ಏನೂ ಮಾಡಬಾರದು ಎಂಬ ಚಡಪಡಿಕೆ. ಬೆಂಗಳೂರಿಗೆ ಸಕಾಲಕ್ಕೆ ತಲುಪುವ ಕನಸು ಚೂರಾಗತೊಡಗಿತು. ಸುತ್ತಮುತ್ತ ಮಲಗಿದವರೆಲ್ಲ ಒಬ್ಬೊಬ್ಬರೇ ಲಟಿಗೆ ಮುರಿಯುತ್ತ ಏಳತೊಡಗಿದರು.

ರೈಲು ಬರುವ ಸುಳಿವು ಸಿಗದ ಕಾರಣ ಮತ್ತೆ ಟಿಕೆಟ್ ಕೌಂಟರ್‌ನತ್ತ ಹೋದೆ. ಇನ್ನೇನೂ ಮಾಹಿತಿ ಕೇಳಬೇಕು ಎನ್ನುವಷ್ಟರಲ್ಲಿ, ‘KK express arrival expected at 6am’ ಅಂತ ಬರೆದಿತ್ತು. ಅದನ್ನು ನೋಡಿದ ಬಳಿಕ, ಮತ್ತೇನನ್ನೂ ಕೇಳಬೇಕು ಅನ್ನಿಸಲಿಲ್ಲ.

ಕಣಿವೆ ಕೊನೆಯಲ್ಲಿ ಬೆಳಕು

ಧ್ಯಾನಸ್ಥ ಸ್ಥಿತಿಯಲ್ಲಿದ್ದ ನಿಲ್ದಾಣವನ್ನು ಯಾರೋ ಎಬ್ಬಿಸಿದಂತಾಯಿತು. ಮಲಗಿದವರೆಲ್ಲ, ಒಬ್ಬೊಬ್ಬರೇ ಎದ್ದು ಕೂತು ಪಕ್ಕದವರನ್ನು ಎಬ್ಬಿಸಿತೊಡಗಿದರು. ಹೋಟೆಲ್‌ನಲ್ಲಿ ಮಾತ್ರ ಲಭ್ಯವಿದ್ದ ಚಹಾ ಎಲ್ಲ ಕಡೆ ಸಿಗತೊಡಗಿತು. ನಾನೂ ಮತ್ತೊಮ್ಮೆ ಚಹಾ ಕುಡಿದೆ. ಕೆಕೆ ಎಕ್ಸ್‌ಪ್ರೆಸ್‌ 6 ಗಂಟೆಗೆ ಬರುವ ಸಾಧ್ಯತೆ ಎಂಬ ಧ್ವನಿ ಕೇಳಿದಾಗ, ಸಂತಸಕ್ಕೆ ಪಾರವೇ ಇರಲಿಲ್ಲ. ಒಂದರ ಬದಲು ಎರಡನೇ ಪ್ಲಾಟ್‌ಫಾರಂಗೆ ಬರಲಿದೆ ಎಂದಾಗ, ಆ ಕ್ಷಣವೇ ದಡಬಡಾಯಿಸಿ ಅಲ್ಲಿ ಓಡಿದೆ.

ಕತ್ತಲನ್ನು ಪಕ್ಕಕ್ಕೆ ಸರಿಸಿ, ಸೂರ್ಯ ನಿಧಾನಕ್ಕೆ ಉದಯಿಸಿತೊಡಗಿದ. ಕಣಿವೆಯ ಕೊನೆಯಲ್ಲಿ ಬೆಳಕು ಇದೆ ಎಂಬಂತೆ ರೈಲು ದೊಡ್ಡದಾದ ಹೆಡ್‌ಲೈಟ್‌ ಬೆಳಗಿಕೊಂಡು ನಿಲ್ದಾಣ ಪ್ರವೇಶಿಸಿತು. ಆದರೆ, ರೈಲಿನ ಯಾವ ಬೋಗಿಯ ಬಾಗಿಲು‌ ತೆರೆದಿರಲಿಲ್ಲ. ರಿಸರ್ವೇಶನ್ ಅಲ್ಲದೇ ಸಾಮಾನ್ಯ ಬೋಗಿಗಳು ಸಂಪೂರ್ಣ ಲಾಕ್. ರಿಸರ್ವೇಶನ್ ಬೋಗಿಯಲ್ಲಿ ಸೀಟು ಕಾಯ್ದಿರಿಸಿದವರು ಹತ್ತಿಕೊಂಡರು. ಸಾಮಾನ್ಯ ಪ್ರಯಾಣ ಟಿಕೆಟ್ ಪಡೆದಿದ್ದ ನನಗೆ ಸಾಮಾನ್ಯ ಬೋಗಿಯೊಳಗೆ ಪ್ರವೇಶಿಸಲು ಅವಕಾಶ ಇರಲಿಲ್ಲ. ಕಾರಣ, ಕೂರಲು-ನಿಲ್ಲಲು ಜಾಗವಿಲ್ಲದೇ ಬಾಗಿಲು ಮುಚ್ಚಿಕೊಂಡು ಪ್ರಯಾಣಿಕರು ಅಲ್ಲಲ್ಲೇ ಹೊಂದಾಣಿಕೆ ಮಾಡಿಕೊಂಡಿದ್ದರು.

ನಾನು ಹೇಗೋ ಧೈರ್ಯ ಮಾಡಿಕೊಂಡು ರಿಸರ್ವೇಶನ್ ಬೋಗಿ ಹತ್ತಿಬಿಟ್ಟೆ. ಎಲ್ಲರೂ ನಿದ್ರಾವಸ್ಥೆಯಲ್ಲಿದ್ದರು. ಎಡಭಾಗದಲ್ಲಿ ನಾಲ್ಕು ಮತ್ತು ಬಲಭಾಗದಲ್ಲಿ ಎರಡು ಬೋಗಿಗಳನ್ನು ಸುತ್ತಾಡಿಕೊಂಡು ಬಂದೆ. ಒಂದು ಸೀಟು ಕೂಡ ಖಾಲಿ ಇಲ್ಲ. ಟಿಟಿಇ ಕಾಣಿಸಿಕೊಂಡರೆ, ಒಂದು ಸೀಟಿಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದೆ. ಆದರೆ ನನ್ನ ದುರಾದೃಷ್ಟಕ್ಕೆ ಬೆಂಗಳೂರು ತಲುಪುವರರೆಗೆ ಆತ ಕಾಣಿಸಲೇ ಇಲ್ಲ. ರೈಲಂತೂ ಹತ್ತಿ ಆಗಿದೆ. ಬಂದದ್ದು ಬರಲಿ. ನೋಡಿಕೊಳ್ಳೋಣ ಎಂದು ಮುಚ್ಚಿದ ಬಾಗಿಲು ಬಳಿ ನಿಂತುಕೊಂಡೆ. ನನ್ನಂತೆಯೇ ಮೂವರು ಅಲ್ಲಿ ಮುದುಡಿಕೊಂಡು ಕೂತಿದ್ದರು. ಅವರೊಂದಿಗೆ ಮಾತುಕತೆ ಶುರುವಾಯಿತು. ಪ್ರಯಾಣ ಮುಂದುವರೆಯಿತು.

ರೈಲು ಬೇಗ ಬಂದಿದ್ದು ನಿಮ್ಮ ಪುಣ್ಯ!

ನಿಂತು ಸುಸ್ತಾದ ನನಗೆ ಬೆಳಿಗ್ಗೆ 11ರ ಸುಮಾರಿಗೆ ಮೂಲೆಯಲ್ಲಿ ಸೀಟು ಸಿಕ್ಕಿತು. ನಂತರದ ನಿಲ್ದಾಣಗಳಲ್ಲಿ ರಿಸರ್ವೇಶನ್ ಮಾಡಿಸದ ಸಾಮಾನ್ಯ ಪ್ರಯಾಣಿಕರು ಸಹ ಅದೇ ಬೋಗಿಯನ್ನೇರಿ ಬರತೊಡಗಿದರು. ಕೊಂಚ ಮುಜುಗರವಾಗಿದ್ದ ನನಗೆ ಧೈರ್ಯ ಬಂತು. ನಾನೂ ಸಹ ರಿಸರ್ವೇಶನ್ ಬೋಗಿ ಪ್ರಯಾಣಿಕ ಎಂದು ಪೋಸು ಕೊಟ್ಟೆ. ಖಾಲಿಯಾಗಿದ್ದ upper berth ಏರಿ ಕೂತೆ. ಅಲ್ಲಿ ಕೂತುಕೊಂಡೆ ಚಹಾ, ತಿಂಡಿ ಸವಿದೆ. ಪ್ರಯಾಣ ಸುಖಕರವಾಗಿ ಸಾಗಿತು. ನಿದ್ದೆಯಿಲ್ಲದೇ ರಾತ್ರಿ ಕಳೆದಿದ್ದರ ಪರಿಣಾಮ ಕಣ್ಣುಗಳು ಎಳೆಯತೊಡಗಿದವು. ನಿದ್ದೆಗೆ ಜಾರಿದೆ.

ಕೊನೆಗೆ ರೈಲು ಬೆಂಗಳೂರು ನಿಲ್ದಾಣ ತಲುಪಿದಾಗ, ಸಮಯ ಸಂಜೆ 6. ಅಲ್ಲಿಂದ ನಾನು ಕನ್ನಡ ಭವನಕ್ಕೆ ಹೋಗಬೇಕಿತ್ತು. ಅತಿಯಾದ ಸಂಚಾರ ದಟ್ಟಣೆ ಮಧ್ಯೆಯೇ ಆಟೊದಲ್ಲಿ ಹೋಗಿ ಕನ್ನಡ ಭವನ ತಲುಪಿದಾಗ, ಸಂಜೆ 6.45. ನಾನು ಅಪಾರ ನಿರೀಕ್ಷೆಯೊಂದಿಗೆ ಭಾಗವಹಿಸಲು ಇಚ್ಛಿಸಿದ್ದ ಕಾರ್ಯಕ್ರಮ ಮುಕ್ತಾಯದ ಹಂತದಲ್ಲಿತ್ತು. ನಾನು ಇನ್ನೇನೂ ಕನ್ನಡ ಭವನದ ಸಭಾಂಗಣ ಪ್ರವೇಶಿಸಬೇಕು. ವಂದನಾರ್ಪಣೆ ಮುಗಿಸಿದ ನಿರೂಪಕರು, ತಿಂಡಿ ಸವಿಯುವಂತೆ ಕೋರುತ್ತಿದ್ದರು.‌

ಪುನಃ ಬೆಂಗಳೂರಿನಿಂದ ಕಲಬುರ್ಗಿಗೆ ಬಂದಾಗ, ಗೆಳೆಯರೊಬ್ಬರು ಹೇಳಿದರು: ’ನಿಮ್ಮ ಪುಣ್ಯಕ್ಕೆ ರೈಲು ಬೆಳಗಿನ 6ಕ್ಕೆ ಬಂದಿದೆ. ಇಲ್ಲದಿದ್ದರೆ ಅದು ಬೆಳಗಿನ 8 ಅಥವಾ 9ಕ್ಕೆ ಬರುತ್ತದೆ. ಇದು ಸತ್ಯ‘.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT