ಮಂಗಳವಾರ, ನವೆಂಬರ್ 30, 2021
20 °C

ಮನೆಗಳಿಗೆ ನುಗ್ಗಿದ ಬೆಣ್ಣೆತೊರಾ ಹಿನ್ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಬೆಣ್ಣೆತೋರಾ ಹಿನ್ನೀರಿನ ಪ್ರವಾಹ ಹೆಚ್ಚಾಗಿ ಕುರಿಕೋಟಾ, ಸಿರಗಾಪುರ, ಅಂಕಲಗಾ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.

ದವಸ ಧಾನ್ಯಗಳು ತೊಯ್ದು ತೊಪ್ಪೆಯಾಗಿವೆ. ಮೊಣಕಾಲಿನವರೆಗೆ ನೀರು ನಿಂತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

‘ಪ್ರತಿ ವರ್ಷ ಪ್ರವಾಹ ಉಂಟಾಗಿ ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಕೂಡಲೇ ಹಕ್ಕುಪತ್ರ ಒದಗಿಸಬೇಕು’ ಎಂದು ನದಿ ಪಕ್ಕದಲ್ಲಿರುವ ಮನೆಯ ಫರಜಾನಾ ಬೇಗಂ, ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಮಹೆಬೂಬ ಷಾ ಅವರು ತಹಶೀಲ್ದಾರ ಅಂಜುಮ್ ತಬಸುಮ್ ಅವರಿಗೆ ಒತ್ತಾಯಿಸಿದರು.

‘ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನೀವೇಶನ ಹಂಚಿಕೆಗೆ ಸಿದ್ಧತೆ ಮಾಡಿಕೊಳ್ಳಬೇಕು. ನಿವೇಶನ ಚಿಕ್ಕದು, ದೊಡ್ಡದು ಎಂದು ಗ್ರಾಮದ ಮೇಲ್ಭಾಗದಲ್ಲಿರುವವರು ತಗಾದೆ ತೆಗೆಯುತ್ತಿದ್ದಾರೆ. ಲಾಟರಿ ಮೂಲಕ ಹಂಚಿಕೆಗೂ ಅವರೇ ವಿರೋಧಿಸುತ್ತಿದ್ದಾರೆ. ಅವರಿಗೆ ಪ್ರವಾಹದ ಸಂಕಷ್ಟ ಇಲ್ಲ. ಇಲ್ಲಿ ನಾವು ತೊಂದರೆಗೆ ಒಳಗಾಗುತ್ತಿದ್ದೇವೆ. ಸರ್ಕಾರ ಶೀಘ್ರವಾಗಿ ನಿರ್ಣಯಕ್ಕೆ ಬರಬೇಕು’ ಎಂದು ಆಗ್ರಹಿಸಿದರು.

ಸಿರಗಾಪುರದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಸುಮಾರು 350 ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಎಂದು ತಹಶೀಲ್ದಾರ್ ಅಂಜುಮ್ ತಬಸುಮ್ ತಿಳಿಸಿದರು.

ಹಾನಿ ವರದಿ ಸಲ್ಲಿಸಿ; ಶಾಸಕ ತಾಕೀತು

ಸೋಮವಾರದ ರಾತ್ರಿ ಸುರಿದ ಧಾರಾಕಾರ ಮಳಗೆ ತಾಲ್ಲೂಕಿನಾದ್ಯಂತ ಹಾನಿ ಸಂಭವಿಸಿದ್ದು, ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಬೇಟಿ ನೀಡಿ ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ. ಕುರಿಕೋಟಾ ನಿವೇಶನ ಹಂಚಿಕೆ ಸಮಸ್ಯೆ ಬಗೆಹರಿಸಿ ಹಕ್ಕು ಪತ್ರ ವಿತರಿಸಲು ತಿಳಿಸಿದ್ದೇನೆ.

ಪ್ರವಾಹದಿಂದ ಬೆಳೆ ಹಾನಿ, ಮನೆ ಕುಸಿತ, ರಸ್ತೆ, ಸೇತುವೆ ಕೊಚ್ಚಿ ಹೋಗಿರುವುದರ ಬಗ್ಗೆ ಮಾಹಿತಿ ಪಡೆದಿದ್ದು ಶೀಘ್ರ ಪರಿಹಾರ ಕಂಡುಕೊಳ್ಳಲು ಕಂದಾಯ, ಕೃಷಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಬಸವರಾಜ ಮತ್ತಿಮುಡ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.