ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರೊಂದಿಗೆ ಬಿಜೆಪಿ ನಂಟು: ಸಚಿವ ಪ್ರಿಯಾಂಕ್ ಖರ್ಗೆ

Published 18 ಏಪ್ರಿಲ್ 2024, 16:34 IST
Last Updated 18 ಏಪ್ರಿಲ್ 2024, 16:34 IST
ಅಕ್ಷರ ಗಾತ್ರ

ಕಲಬುರಗಿ: ‘ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಾಯ್ದೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಕಂಡರೆ ಭ್ರಷ್ಟಾಚಾರಿಗಳು ನಡಗುತ್ತಾರೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ರಾಜ್ಯದ ಬಿಜೆಪಿ ಮುಖಂಡರು ಭ್ರಷ್ಟಾಚಾರಿಗಳ ಮನೆಗೆ ಹೋಗಿ ಬರುತ್ತಿದ್ದು, ಭ್ರಷ್ಟರ ಜೊತೆಗೆ ಬಿಜೆಪಿ ನಂಟು ಇರುವುದು ಸಾಬೀತಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಎಸ್‌ಐ ನೇಮಕಾತಿ ಹರಗಣದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ  ಮನೆಗೆ ಸಂಸದ ಡಾ.ಉಮೇಶ ಜಾಧವ ಅವರು ತೆರಳಿ, ಮತ ಯಾಚಿಸಿದ್ದಾರೆ. ಈ ಬಗ್ಗೆ ಜಾಧವ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸ್ಪಷ್ಟನೆ ಕೊಡಬೇಕು’ ಎಂದರು.

‘ಜೈಲಿನಲ್ಲಿ ಇದ್ದವರ ಮನೆಗೆ ಹೋದ ಜಾಧವ ಅವರು, ಕುಟುಂಬದವರ ಬೆಂಬಲ ಕೋರಿ, ನಾಚಿಕೆಯಿಲ್ಲದೆ ಅವರ ಮನೆಯಲ್ಲಿ ಊಟ ಮಾಡಿದ್ದಾರೆ. ಲಕ್ಷಾಂತರ ಯುವಕರಿಗೆ ಮೋಸ ಮಾಡಿದವರ ಮನೆಗೆ ಹೋಗುವುದು ನ್ಯಾಯವೇ’ ಎಂದು ಪ್ರಶ್ನಿಸಿದರು.

‘ಹೇಗಾದರೂ ಮಾಡಿ ಮತ ಪಡೆಯಲೇಬೇಕು ಎಂದು ಹೋಗಿದ್ದರೋ ಅಥವಾ ಮೊದಲಿನಿಂದಲೂ ಅವರೊಂದಿಗೆ ನಂಟು ಇತ್ತೋ ಗೊತ್ತಿಲ್ಲ. ಹಗರಣದ ಆರೋಪಿ ಈಗ ಜೈಲಿನಲ್ಲಿದ್ದಾನೆ. ಮನೆಗೆ ಹೋಗಿರುವುದು ನೋಡಿದರೆ ಬಿಜೆಪಿ ಭ್ರಷ್ಟರೊಂದಿಗೆ ಕೈ ಜೋಡಿಸಿದೆ ಎನ್ನುವ ಅನುಮಾನ ಮೂಡುತ್ತದೆ’ ಎಂದರು.

‘ಬಿಜೆಪಿ ಸರ್ಕಾರದ ಅವಧಿಯ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ಸಾಮಾನ್ಯವಾಗಿದ್ದವು. ಎಇ, ಜೆಇ, ಕೆಪಿಟಿಸಿಎಲ್, ಸಹಾಯಕ ಪ್ರಾಧ್ಯಾಪಕರು ಹುದ್ದೆ ಸೇರಿ ಹಲವು ಪರೀಕ್ಷೆಗಳಲ್ಲಿ ಅಕ್ರಮ ನಡೆದಿವೆ. ನಮ್ಮ ಸರ್ಕಾರ ಬಂದ ನಂತರ ಅಕ್ರಮಗಳ ತಡೆಗೆ ಬಿಲ್ ತಂದಿದ್ದೇವೆ. ಇದನ್ನೇ ಕಾಪಿ ಮಾಡಿದ ಬಿಜೆಪಿ, ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಪ್ರವೀಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಪರಶುರಾಮ ನಾಟೀಕಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT