ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಗಡಿಪಾರು

Last Updated 3 ಅಕ್ಟೋಬರ್ 2022, 5:29 IST
ಅಕ್ಷರ ಗಾತ್ರ

ಕಲಬುರಗಿ: ಅಕ್ರಮವಾಗಿ ಅಕ್ಕಿ ಸಾಗಾಟ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಕಲಬುರಗಿ ನಗರದಿಂದ ಶಿವಮೊಗ್ಗಕ್ಕೆ ಗಡಿಪಾರು ಮಾಡಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ಸೆಪ್ಟೆಂಬರ್ 30ರ‍ಂದೇ ಆದೇಶ ಹೊರಡಿಸಿದ್ದು, ಗಡೀಪಾರಾಗಲು ಐದು ದಿನಗಳ ಕಾಲಾವಕಾಶ ‌ನೀಡಲಾಗಿದೆ.

ಮಣಿಕಂಠ ವಿರುದ್ಧ ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಿವೆ. ಅದರಲ್ಲಿ ಬಹುತೇಕ ಪಡಿತರ ಅಕ್ಕಿ ಸಾಗಾಟಕ್ಕೆ ಸಂಬಂಧಿಸಿದ್ದಾಗಿವೆ.

ಎಡಿಜಿಪಿ ಅಲೋಕ್ ಕುಮಾರ್ ಅವರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದಾಗ ದಲಿತ ಸಂಘಟನೆಗಳ ಮುಖಂಡರು ಮಣಿಕಂಠ ರಾಡೋಡ ಗಡಿಪಾರಿಗೆ ಒತ್ತಾಯಿಸಿದ್ದರು. ಒಂದು ವಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಮಂಗ್ಲಿ ಕರೆಸಿದ್ದ ಮಣಿಕಂಠ: ಕಲಬುರಗಿಯ ಶರಣಬಸವೇಶ್ವರ ಗುಡಿ ರಸ್ತೆಯಲ್ಲಿ ಎಂ.ಆರ್. ಮಾರ್ಟ್ ಸೂಪರ್ ಮಾರ್ಕೆಟ್ ಆರಂಭಿಸಿರುವ ಮಣಿಕಂಠ ರಾಠೋಡ ಅದರ ಉದ್ಘಾಟನೆಗೆ ಖ್ಯಾತ ಗಾಯಕಿ ಮಂಗ್ಲಿ ಅವರನ್ನು ಹೈದರಾಬಾದ್ ನಿಂದ ಕರೆಸಿ ಸುದ್ದಿಯಾಗಿದ್ದ.

ರೆಸಾರ್ಟ್ ವೊಂದರಲ್ಲಿ ಅರೆಬೆತ್ತಲೆಯಾಗಿ, ಮದ್ಯ ಸೇವಿಸುತ್ತಾ ನೃತ್ಯ ಮಾಡುತ್ತಿರುವ ದೃಶ್ಯ ವೈರಲ್ ಆಗಿತ್ತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರೊಂದಿಗೆ ತಾನು ಇರುವ ಚಿತ್ರಗಳನ್ನು ತನ್ನ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಮಣಿಕಂಠ ಹಂಚಿಕೊಂಡಿದ್ದಾನೆ.

ಅವರದೇ ಸಮುದಾಯಕ್ಕೆ ಸೇರಿದ ಬಿಜೆಪಿ ಮುಖಂಡರೊಬ್ಬರು ಗಡಿಪಾರು ಆಗದಂತೆ ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಈ ಆರೋಪಗಳನ್ನು ನಿರಾಕರಿಸಿದ್ದ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿದ ಬಳಿಕವಷ್ಟೇ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದರು.

'ಮಣಿಕಂಠ ರಾಠೋಡನನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಗಡಿಪಾರು ‌ಮಾಡಲಾಗಿದೆ. ಈ ಆದೇಶ ಒಂದು ವರ್ಷದವರೆಗೆ ಇರಲಿದೆ' ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು 'ಪ್ರಜಾವಾಣಿ'ಗೆ ತಿಳಿಸಿದರು.

ಆಳಂದ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ಕಲಬುರಗಿ ಎಸ್ಪಿ ಇಶಾ ಪಂತ್ ಅವರ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಫಿರೋಜ್ ಎಂಬಾತನನ್ನು ಬೆಳಗಾವಿ ಜಿಲ್ಲೆಗೆ ಗಡಿಪಾರು ಮಾಡಿದ್ದರು.

ರೌಡಿ ಪಟ್ಟಿಯಲ್ಲಿ ಸೇರಿಸಿದ ಪೊಲೀಸರು ಆತನನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT