ಸೋಮವಾರ, ಆಗಸ್ಟ್ 8, 2022
21 °C

ಸಮಸ್ಯೆ ಹೇಳಿಕೊಳ್ಳಲೂ ಸಿಗದ ಸಂಸದ: ಬಿಜೆಪಿ ಮುಖಂಡರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಡಾ. ಉಮೇಶ ಜಾಧವ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ರಸ್ತೆ, ಕೋವಿಡ್‌ ಪರಿಹಾರ ಕಿಟ್‌, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಳಿಕೊಳ್ಳಲೆಂದು ಹೋದರೆ ಸಂಸದರು ಮನೆಯಲ್ಲೇ ಇರುವುದಿಲ್ಲ. ಫೋನ್ ಕರೆ ಮಾಡಿದರೂ ಸಿಗುತ್ತಿಲ್ಲ’ ಎಂದು ಬಿ.ಎಸ್. ಯಡಿಯೂರಪ್ಪ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷರೂ ಆದ ಸ್ಥಳೀಯ ಬಿಜೆಪಿ ಮುಖಂಡ ಬಾಬುರಾವ್ ಬಸವಂತವಾಡಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸದ ಡಾ. ಜಾಧವ ಅವರು ಸಾರ್ವಜನಿಕರ ಅಹವಾಲು ಹಾಗೂ ಕುಂದುಕೊರತೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಪಕ್ಷದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಅವರು ತಾವೇ ಚುನಾವಣೆಗೆ ನಿಂತವರಂತೆ ಅಫಜಲಪುರ ಕ್ಷೇತ್ರದಲ್ಲಿ ಕೆಲಸ ಮಾಡಿ ಹೆಚ್ಚಿನ ಮತಗಳು ಜಾಧವ ಅವರಿಗೆ ಬೀಳುವಂತೆ ನೋಡಿಕೊಂಡಿದ್ದಾರೆ. ಈಗ ಅವರ ಮಾತನ್ನೂ ಕೇಳುತ್ತಿಲ್ಲ. ಇದನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಅವರು ನೋಡೋಣ, ಮಾಡೋಣ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದರು.

‘ನಗರಕ್ಕೆ ಹೊಂದಿಕೊಂಡ ಹೀರಾಪುರ ಗ್ರಾಮದ ಮುಖ್ಯ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ. ಇದನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತೆಗೆದುಕೊಳ್ಳುವಂತೆ ಮನವಿ ಮಾಡಲು ಮನೆಗೆ ಹೋದರೆ ಅಲ್ಲಿ ಸಿಗಲಿಲ್ಲ. ಕಚೇರಿಯಲ್ಲೂ ಸಿಗುತ್ತಿಲ್ಲ’ ಎಂದರು.

‘ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಹೇರಿದ ಲಾಕ್‌ಡೌನ್‌ ಸಂದರ್ಭದಲ್ಲಿ ಸಾಕಷ್ಟು ಜನರು ಉದ್ಯೋಗವಿಲ್ಲದೇ ಆದಾಯವೂ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಅವರಿಗೆ ದಿನಸಿ ಕಿಟ್ ನೀಡಬೇಕೆಂದು ಮನವಿ ಮಾಡಲು ಹೋಗಿದ್ದೆವು. ಮೊದಲೆಲ್ಲ ಸಂಸದರಾಗಿ ಆಯ್ಕೆಯಾದರೆ ಎಲ್ಲ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಈಗ ಅವರ ವರಸೆ ಬದಲಾಗಿದೆ. ಇದು ಹೀಗೇ ಮುಂದುವರಿದರೆ ಅವರು ಪಕ್ಷದಲ್ಲಿ ಮೂಲೆಗುಂಪಾದರೂ ಆಶ್ಚರ್ಯವಿಲ್ಲ’ ಎಂದು ಹೇಳಿದರು.

ಭೀಮಾಶಂಕರ ಎನ್. ಯಳಮೇಲಿ, ಅಂಬಾರಾಯ ಹತಗುಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು