ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿ ಕಾಯ್ದೆಗಳ ಲಾಭ ರೈತರಿಗೆ ತಿಳಿಸಿ

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಈರಣ್ಣ ಕಡಾಡಿ ಕರೆ
Last Updated 4 ಜುಲೈ 2021, 16:00 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ ಮೂರು ಕೃಷಿ ಸಂಬಂಧಿ ಕಾಯ್ದೆಗಳ ಬಗ್ಗೆ ಅಪಪ್ರಚಾರ ನಡೆದಿದೆ. ಈ ತಿದ್ದುಪಡಿಯ ಉದ್ದೇಶ ಮತ್ತು ರೈತರಿಗೆ ಆಗುವ ಲಾಭವೇನು ಎಂಬುದನ್ನು ತಿಳಿಸಲು ಅದನ್ನು ಬಿಜೆಪಿ ಕಾರ್ಯಕರ್ತರು ಅಧ್ಯಯನ ಮಾಡಬೇಕು’ ಎಂದು ರಾಜ್ಯಸಭೆ ಸದಸ್ಯ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ರೈತ ಮೋರ್ಚಾಗಳ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ಕೃಷಿ ಕ್ಷೇತ್ರದ ಸುಧಾರಣೆ ಬಗ್ಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಎಲ್ಲ ಯೋಜನೆಗಳ ಬಗ್ಗೆ ಕಾಂಗ್ರೆಸ್‌ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ತಡೆಯಲು ಸರಿಯಾದ ಮಾಹಿತಿ ರೈತರಿಗೆ ಮುಟ್ಟಬೇಕು’ ಎಂದರು.

‘ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಮತ್ತು ಕೃಷಿ ಒಪ್ಪಂದ ಕಾಯ್ದೆಗಳ ಬಗ್ಗೆ ದಶಕದಿಂದ ಚರ್ಚೆಗಳು ನಡೆದಿವೆ. ಈ ಹಿಂದೆ ಮನಮೋಹನ ಸಿಂಗ್‌ ಅವರು ಪ್ರಧಾನಿ ಆಗಿದ್ದಾಗಲೂ ಈ ತಿದ್ದುಪಡಿಯ ಇಂಗಿತ ವ್ಯಕ್ತಪಡಿಸಿದ್ದರು’ ಎಂದರು.

‘ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ಕೃಷಿ ಮಾರುಕಟ್ಟೆ ಹೊರಗಡೆಯೂ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು. ಅವರ ವ್ಯವಹಾರಗಳು ಕಾನೂನು ಚೌಕಟ್ಟಿನಲ್ಲೇ ಬರುವುದರಿಂದ ರೈತರು ಆತಂಕ ಪಡಬೇಕಿಲ್ಲ. ಕೃಷಿ ಒಪ್ಪಂದ ಕಾಯ್ದೆಯ ಪ್ರಕಾರ, ರೈತರು ಮತ್ತು ಖರೀದಿದಾರರ ಮಧ್ಯೆ ನೇರ ಸಂಪರ್ಕ ಏರ್ಪಡುತ್ತದೆ. ಇದರಿಂದ ಯಾವುದಕ್ಕೆ ಎಷ್ಟು ಬೇಡಿಕೆ ಇದೆ, ಎಷ್ಟು ಬಿತ್ತಬೇಕು ಎಂಬ ನಿಖರ ಮಾಹಿತಿ ರೈತರಿಗೆ ಸಿಗುತ್ತದೆ. ಅಗತ್ಯ ವಸ್ತುಗಳ ತಿದ್ದುಪಡಿಯಿಂದ ಆಮದು ಕಡಿಮೆ ಆಗಿ, ರೈತರು ಸ್ವಾವಲಂಬಿ ಆಗಲು ಬಾಗಿಲು ತೆರೆಯುತ್ತದೆ’ ಎಂದರು.

‘ಈ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ಸಿಗರು ರೈತರನ್ನು ದಾರಿ ತಪ್ಪಿಸಲು ಹೋರಾಟಕ್ಕೆ ಕರೆ ತಂದರು. ಈ ಪ್ರಾಯೋಜಿತ ಹೋರಾಟ ಹೆಚ್ಚು ದಿನ ನಡೆಯದು ಎಂಬುದು ನಮಗೆ ಗೊತ್ತಿತ್ತು. ತಿದ್ದುಪಡಿ ಕಾಯ್ದೆಗಳಲ್ಲಿ ಏನು ಸಮಸ್ಯೆಗಳಿವೆ ಎಂಬುದನ್ನು ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್‌ ನಾಲ್ವರು ಸದಸ್ಯರ ಸಮಿತಿ ರಚಿಸಿದೆ. ನಾವು ನಮ್ಮ ದಾಖಲೆ ಹಾಗೂ ಉದ್ದೇಶಿತ ಮಾಹಿತಿ ನೀಡಿದ್ದೇವೆ. ಆದರೆ, ವಿರೋಧಿಗಳು ಯಾರೂ ಈವರೆಗೆ ತಕರಾರು ಸಲ್ಲಿಸಿಲ್ಲ ಏಕೆ?’ ಎಂದು ಪ್ರಶ್ನಿಸಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಮಾಜಿ ಶಾಸಕ ಅಮರನಾಥ ಪಾಟೀಲ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಧುತ್ತರಗಿ ಮಾತನಾಡಿದರು. ರೈತ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಗುರುಲಿಂಗ ಗೌಡರ, ಕಾರ್ಯದರ್ಶಿ ಧರ್ಮಣ್ಣ ದೊಡ್ಡಮನಿ ಗವ್ಹಾಂರ, ಉಪಾಧ್ಯಕ್ಷ ಬಸವರಾಜ ಇಂಗಿನ್, ಗ್ರಾಮೀಣ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಪಾಟೀಲ, ನಗರ ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಪಾಟೀಲ ಇದ್ದರು.\

BOX

‘ಅಭಿವೃದ್ಧಿಯೇ ಚುನಾವಣೆ ಅಸ್ತ್ರವಾಗಲಿ’

‘ಕೇಂದ್ರದ ಹೊಸ ಯೋಜನೆಗಳ ಬಗ್ಗೆ ಈಗಿನಿಂದಲೇ ಅರಿವು ಪಡೆದು, ಜನರಿಗೆ ಮುಟ್ಟಿಸಿ. ಮುಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳ ಅಸ್ತ್ರ ಅಭಿವೃದ್ಧಿ ಆಗಿರಬೇಕು’ ಎಂದು ಈರಣ್ಣ ಕಡಾಡಿ ತಿಳಿಸಿದರು.

‘ಕೃಷಿಗೆ ಉತ್ಪಾದನೆ ಹೆಚ್ಚಿಸಲು ಪ್ರಧಾನಿ ಮೋದಿ ಅವರು 10 ಸಾವಿರ ರೈತ ಉತ್ಪಾದಕರ ಸಂಘಗಳನ್ನು ರಚಿಸಿ, ಆರ್ಥಿಕ ನೆರವು ನೀಡಲು ₹ 15 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಕಿಸಾನ್‌ ಸಮ್ಮಾನ್‌ಗಾಗಿ ₹ 75 ಸಾವಿರ ಕೋಟಿ ಪ್ರತಿ ವರ್ಷ ನೀಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT