ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಪಾಕ್ ಪರ ಘೋಷಣೆ ಆರೋಪ; ಬಿಜೆಪಿ ಪ್ರತಿಭಟನೆ

Published 28 ಫೆಬ್ರುವರಿ 2024, 14:11 IST
Last Updated 28 ಫೆಬ್ರುವರಿ 2024, 14:11 IST
ಅಕ್ಷರ ಗಾತ್ರ

ಕಲಬುರಗಿ: ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ, ಈ ಘಟನೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬುಧವಾರ ನಗರದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ, ಪ್ರತಿಭಟನೆ ನಡೆಸಿದರು.

ನಗರದ ಅನ್ನಪೂರ್ಣ ಕ್ರಾಸ್‌ ಬಳಿ ರಾಷ್ಟ್ರ ಧ್ವಜ ಹಿಡಿದು ಜಮಾಯಿಸಿದ ಕಾರ್ಯಕರ್ತರು ಮತ್ತು ಮುಖಂಡರು, ರಾಜ್ಯ ಸರ್ಕಾರ ಹಾಗೂ ಸೈಯದ್ ನಾಸೀರ್ ಹುಸೇನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಏಕಾಏಕಿ ಕಾಂಗ್ರೆಸ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದರು.

ರಾಜ್ಯದ ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧದ ಮೊಗಸಾಲೆಯಲ್ಲಿ ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ ನಾಸೀರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾರೆ. ದೇಶ ದ್ರೋಹದ ಕೃತ್ಯ ಎಸಗಿರುವ ಆರೋಪಿಗಳನ್ನು ಬಂಧಿಸದ ರಾಜ್ಯ ಸರ್ಕಾರ, ಆರೋಪಿಗಳ ರಕ್ಷಣೆ ಮಾಡುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಮತ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಪಾಕಿಸ್ತಾನ ನಿರ್ಮಾಣ ಮಾಡಿ ಭಾರತ ವಿಭಜಿಸಿದ ಕಾಂಗ್ರೆಸ್‌, ಈಗ ದೇಶ ವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ದುಷ್ಟರನ್ನು ದೇಶದಿಂದ ಗಡಿಪಾರು ಮಾಡಬೇಕು. ಇಂಥ ಘಟನೆಗೆ ಕಾರಣವಾದ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕು. ನಾಸೀರ್ ಹುಸೇನ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನಿಸಿದ ಕೆಲವು ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು, ಆ ನಂತರ ಬಿಡುಗಡೆ ಮಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಮುಖಂಡರಾದ ಶಿವಯೋಗಿ ನಾಗನಹಳ್ಳಿ, ಉಮೇಶ ಪಾಟೀಲ, ಮಹಾದೇವ ಬೆಳಮಗಿ, ಪ್ರವೀಣ್ ತೆಗನೂರ, ಶಿವಾ ಅಷ್ಠಗಿ, ಶ್ರೀನಿವಾಸ ದೇಸಾಯಿ, ವೀರೇಂದ್ರ ಪಾಟೀಲ ರಾಯಕೋಡ, ಮಂಜುನಾಥ ಚಿಲ್ಲಶೆಟ್ಟಿ, ಶರಣು ಸಜ್ಜನ, ಮಹೇಶ್ ಚವ್ಹಾಣ್, ರಾಜು ಚಹ್ವಾಣ್, ಅಣವೀರ ಬಿರಾದಾರ, ರೇವಣಸಿದ್ದ ಬಡಾ, ಸೌರಭ ರಂಗಧಾಳ, ಮಲ್ಲು ಮರಗುತ್ತಿ, ಬಾಬುರಾವ್ ಹಾಗರಗುಂಡಗಿ ಪ್ರತಿಭಟನೆಯಲ್ಲಿ ಇದ್ದರು.

Cut-off box - ತೆರೆದಿದ್ದ ಗೇಟ್ ಮುಚ್ಚಿದ ಬಳಿಕ ಮುತ್ತಿಗೆ ಯತ್ನ! ಅನ್ನಪೂರ್ಣ ಕ್ರಾಸ್‌ನಿಂದ ಕಾಂಗ್ರೆಸ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರು ತೆರಿದ್ದ ಕಚೇರಿಯ ಗೇಟ್‌ ಮುಂಭಾಗ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕೆಲ ಸಮಯದ ಬಳಿಕ ಎಸಿಪಿ ಸುಧಾ ಆದಿ ನೇತೃತ್ವದ ಪೊಲೀಸ್ ತಂಡ ಕಾಂಗ್ರೆಸ್ ಕಚೇರಿಗೆ ಬಂತು. ಕಚೇರಿಯ ಗೇಟ್ ಬಂದ್ ಮಾಡಿಸಿದ ಬಳಿಕ ಬಿಜೆಪಿ ಕಾರ್ಯಕರ್ತರು ಕಚೇರಿಯ ಒಳ ನುಗ್ಗಲು ಯತ್ನಿಸಿದ್ದು ಕಂಡುಬಂತು. ಪೊಲೀಸರು ಅವರನ್ನು ತಡೆದರು.

Cut-off box - ‘ನಾಸೀರ್ ರಾಜೀನಾಮೆ ನೀಡಲಿ’ ‘ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧ ಆತ್ಮ ಇದ್ದಂತೆ. ಅಂತಹ ಸ್ಥಳದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಖಂಡನೀಯ. ಕೂಡಲೇ ನಾಸೀರ್ ಅವರು ತಮ್ಮ ಸಂಸದರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಸಂಸದರ ಅನುಯಾಯಿ ಘೋಷಣೆ ಕೂಗಿದ್ದು ಮತ್ತೊಬ್ಬ ಬಾಯಿ ಮುಚ್ಚಿಸಿದ್ದ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ತಕ್ಷಣ ಆರೋಪಿಯನ್ನು ಬಂಧಿಸಬೇಕು. ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಸಂವಿಧಾನ ಉಳಿಸುವುದಕ್ಕೆ ಕಾಂಗ್ರೆಸ್‌ನಿಂದ ಸಾಧ್ಯ ಇಲ್ಲ’ ಎಂದರು.

‘ಕೋಮುವಾದಿ ರಾಜಕಾರಣ’

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಚುನಾಯಿತರು ಆಗಿರುವದನ್ನು ಸಹಿಸದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕೋಮುವಾದಿ ರಾಜಕಾರಣಕ್ಕಾಗಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಹೇಳಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಮುಖಭಂಗವಾಗಿ ಹೀನಾಯ ಸೋಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳು ಬರಬಹುದು ಎಂಬ ಭಯದಿಂದ ಈ ರೀತಿ ಜಾತಿ ಮಧ್ಯೆ ಜಗಳ ಹಚ್ಚುವ ಹುನ್ನಾರ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಬಿಜೆಪಿಯ ನಾಯಕರು ಅಭಿವೃದ್ಧಿ ಪರ ಮಾತನಾಡದೆ ದೇವರ ಹೆಸರನ್ನು ರಾಜಕೀಯದಲ್ಲಿ ಬಳಸುತ್ತಾ ಕೀಳು ರಾಜಕಾರಣ ಮಾಡುವುದು ಸರಿಯಲ್ಲ. ಪಾಕ್ ಪರ ಘೋಷಣೆ ಕೂಗಿದ ಅಪರಿಚಿತ ವ್ಯಕ್ತಿಯ ಹೇಳಿಕೆಯನ್ನು ಮುಂದಿಟ್ಟುಕೊಂಡು ಬೀದಿಗಿಳಿಯುವ ಕೆಲಸ ಏಕೆ ಮಾಡಬೇಕು? ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಣ್ಣ ವಿಷಯಕ್ಕೆ ಚುನಾವಣೆ ವೇಳೆಯಲ್ಲಿ ಪ್ರತಿಭಟನೆ ನೆಪದಲ್ಲಿ ಬೀದಿಗಿಳಿಯುವದು ಖಂಡನೀಯ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT