ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡು ಕನ್ನಡಿಗರ ಸಮಸ್ಯೆ ಪರಿಹರಿಸಲು ಒತ್ತಾಯ

ಸಾಹಿತ್ಯ ಸಮ್ಮೇಳನಕ್ಕೆ ಬಂದ ತೆಲಂಗಾಣ ಗಡಿನಾಡು ಕನ್ನಡ ಸಂಘದ ಸದಸ್ಯರು
Last Updated 7 ಫೆಬ್ರುವರಿ 2020, 10:13 IST
ಅಕ್ಷರ ಗಾತ್ರ

ಅನುಭವ ಮಂಟಪ (ಕಲಬುರ್ಗಿ): ‘ತೆಲಂಗಾಣ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಬಂದಿರುವ ನಮಗೆ ಯಾವ ಗೋಷ್ಠಿಯಲ್ಲೂ ಮಾತನಾಡಲು ಅವಕಾಶ ಕಲ್ಪಿಸಲಿಲ್ಲ. ನಮ್ಮ ಸಮಸ್ಯೆಗೂ ಸ್ಪಂದನೆ ಸಿಗಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ'.

ಹೀಗೆ ಸಂಕಷ್ಟ ತೋಡಿಕೊಂಡವರು ತೆಲಂಗಾಣದ ಗಡಿನಾಡು ಕನ್ನಡ ಸಂಘದ ಉಪಾಧ್ಯಕ್ಷ ಅಮರಕುಮಾರ ದೀಕ್ಷಿತ್. ಸಮ್ಮೇಳನದಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳುವ ಮತ್ತು ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಲ್ಲಿ ಬಂದಿದ್ದ ಅವರು, ‘ಗಡಿನಾಡು ಕನ್ನಡಿಗರಿಗೆ ಬೆಲೆಯೇ ಇಲ್ಲ. ನಮ್ಮ ಮಾತನ್ನು ಕೇಳುವವರೂ ಇಲ್ಲ' ಎಂದರು.

‘ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ತೆಲಂಗಾಣದ ಕೃಷ್ಣಾದಿಂದ ಎರಡು ವಾಹನಗಳನ್ನು ಮಾಡಿಕೊಂಡು 50ಕ್ಕೂ ಹೆಚ್ಚು ಮಂದಿ ಗುರುವಾರ ಬೆಳಿಗ್ಗೇನೆ ಕಲಬುರ್ಗಿಗೆ ಬಂದೆವು. ಬಿಡುವಿನ ವೇಳೆಯಲ್ಲಿ ಇಲ್ಲವೇಗೋಷ್ಠಿಯಲ್ಲಿ ಕನಿಷ್ಠ 10 ನಿಮಿಷ ಅವಕಾಶ ನೀಡುವಂತೆ ಸಮ್ಮೇಳನದ ಆಯೋಜಕರಿಗೆ ಕೋರಿದೆವು. ಆದರೆ, ಅವರು ನಮ್ಮ ಮನವಿಗೆ ಮಾನ್ಯತೆಯೇ ಸಿಗಲಿಲ್ಲ' ಎಂದು ಅವರು ‘ಪ್ರಜಾವಾಣಿ'ಗೆ ತಿಳಿಸಿದರು.

‘ಸಮ್ಮೇಳನ ಆಯೋಜನೆಗೊಳ್ಳುವ ಎರಡು ತಿಂಗಳ ಮುಂಚೆಯೇ ನಾವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರನ್ನು ಭೇಟಿಯಾದೆವು. ಗಡಿನಾಡ ಕನ್ನಡಿಗರಿಗಾಗಿ ಸಮ್ಮೇಳನದಲ್ಲಿ ಪ್ರತ್ಯೇಕ ಗೋಷ್ಠಿ ಆಯೋಜಿಸಿ ಇಲ್ಲವೇ ಸ್ವಲ್ಪ ಹೊತ್ತು ಮಾತನಾಡಲು ಅವಕಾಶ ನೀಡಿ ಎಂದು ಕೋರಿದೆವು. ಇದರ ಕುರಿತು ಚಿಂತನೆ ಮಾಡುವ ಭರವಸೆ ನೀಡಿದರು. ಆದರೆ, ಅನುಷ್ಠಾನಕ್ಕೆ ಬರಲಿಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಗೋಷ್ಠಿ ನಡೆಸಲಿ ಅಥವಾ ಬಿಡಲಿ, ನಾವಂತೂ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳೋಣ. ಸಮಸ್ಯೆ ತೋಡಿಕೊಳ್ಳೋಣ ಎಂದು ಬಂದೆವು. ಮಾತನಾಡಲು ನಮಗೆ ಕನಿಷ್ಠ 10 ನಿಮಿಷ ಕಾಲಾವಕಾಶ ಸಿಗುವುದು ಎಂಬ ನಿರೀಕ್ಷೆ ಇತ್ತು. ಆದರೆ, ಸಮ್ಮೇಳನದ ಆಯೋಜಕರು ಗುರುವಾರ ಬದಲು ಶುಕ್ರವಾರ ಸಮಾರೋಪ ಸಮಾರಂಭದಲ್ಲಿ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು. ಇದರಿಂದ ನಮಗೆ ತುಂಬಾ ಬೇಸರವಾಯಿತು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT