ಮಂಗಳವಾರ, ಜೂನ್ 22, 2021
29 °C
ಮರಳು ಎತ್ತದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದರೂ ಪಾಲನೆಯಾದ ಆದೇಶ

ಮಡಬೂಳ: ನಿಯಮ ಮೀರಿ ಮರಳುಗಾರಿಕೆ, ಸೇತುವೆಗೆ ಹಾನಿ

ಮಲ್ಲಿಕಾರ್ಜುನ ಎಚ್.ಎಂ. Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಅಕ್ರಮ ಮರಳು ಗಣಿಗಾರಿಕೆ ಹಾಗೂ ಕಳೆದ ಅಕ್ಟೋಬರ್‌ನಲ್ಲಿ ಸುರಿದ ಪ್ರವಾಹಕ್ಕೆ ಐದು ಕಿ.ಮೀ ದೂರದಲ್ಲಿರುವ ಮುಡಬೂಳ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರ ಸೇತುವೆಯ ಸಿಮೆಂಟ್ ಬೆಡ್‌ಗೆ ಹಾನಿ ಸಂಭವಿಸಿದೆ.

2020ರ ಅಕ್ಟೋಬರ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾಗಿಣಾ ನದಿಯಲ್ಲಿ ಪ್ರವಾಹ ಉಕ್ಕಿ ಬಾಂದಾರ ಸೇತುವೆ ನಾಲ್ಕು ದಿನ ನೀರಲ್ಲಿ ಮುಳುಗಡೆಯಾಗಿತ್ತು. ಪ್ರವಾಹದ ರಭಸಕ್ಕೆ ಒಡೆದು ಕೊಚ್ಚಿ ಹೋಗಿದೆ. ಈ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರಿಂದ ಮತ್ತಷ್ಟು ಹಾನಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.

ಸೇತುವೆಯ ಕೆಳಗಡೆಯೇ ಅಕ್ರಮ ಮರಳು ದಂಧೆ ನಡೆಯುತ್ತದೆ. ಸೇತುವೆಯ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ 500 ಮೀಟರ್‌ವರೆಗೆ ಮರಳು ಎತ್ತಬಾರದು ಎಂಬ ನಿಯಮವಿದೆ. ಅದನ್ನು ಉಲ್ಲಂಘಿಸಿ ಮರಳು ದಂಧೆ ನಡೆಯುತ್ತಿದೆ. ಹೀಗಾಗಿಯೆ ಸೇತುವೆಯ ಬೆಡ್ ಹಾನಿಯಾಗಿ ಸೇತುವೆಗೆ ಅಪಾಯ ಎದುರಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

2018ರ ಅಕ್ಟೋಬರ್ 27 ರಂದು ಅಂದಿನ ಜಿಲ್ಲಾಧಿಕಾರಿ ಎನ್.ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ರೇಣುಕಾ, ಸೇಡಂ ಉಪ ವಿಭಾಗಾಧಿಕಾರಿ ಬಿ.ಸುಶೀಲಾ ಅವರ ತಂಡ ಸೇತುವೆ ಪರಿಶೀಲನೆ ನಡೆಸಿತ್ತು.

ಒಂದು ಬುಟ್ಟಿ ಮರಳು ಎತ್ತದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಎಸ್.ಪಿ ಅವರು ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗೆ ತಾಕೀತು ಸಹ ಮಾಡಿದ್ದರು. ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂಬುದಕ್ಕೆ ಸಾಕ್ಷಿಗಳು ಹೇರಳವಾಗಿವೆ.

ಮಳೆಗಾಲ ಸಮೀಪಿಸುತ್ತಿದ್ದರೂ ಕೊಚ್ಚಿ ಹೋದ ಬೆಡ್ ಮರು ನಿರ್ಮಾಣ ಕೈಗೊಂಡಿಲ್ಲ. ಮಳೆಗಾಲದಲ್ಲಿ ಮತ್ತೆ ಹೆಚ್ಚಿನ ಪ್ರವಾಹ ಬಂದರೆ ಮತ್ತಷ್ಟು ಬೆಡ್ ಹಾನಿಯಾಗುವ ಸಾಧ್ಯತೆಯಿದೆ.

ಅಧಿಕಾರಿಗಳು ಮರಳು ದಂಧೆಗೆ ಕಡಿವಾಣ ಹಾಕಿ ಸೇತುವೆ ಉಳಿಸಬೇಕು ಎಂದು ಜನರು ಕೋರಿದ್ದಾರೆ.

*ಮುಡಬೂಳ ಬಾಂದಾರ ಸೇತುವೆ ಬೆಡ್ ಹಾನಿಯಾಗಿ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಕುರಿತು ಪರಿಶೀಲಿಸಲಾಗಿದೆ. ಅಕ್ರಮ ಮರಳು ಸಾಗಣೆ ತಡೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

-ನರೇಂದ್ರ, ಕಿರಿಯ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಕಲಬುರ್ಗಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು