ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುಲ್ಡೋಜರ್‌ ಸಿದ್ಧಾಂತ ತಡೆಯುತ್ತೇವೆ’

ಮಾರ್ಕ್ಸ್‌ವಾದಿ–ಸಿಪಿಐಂ ಪಕ್ಷದ ಪಾಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್‌
Last Updated 23 ಮೇ 2022, 4:00 IST
ಅಕ್ಷರ ಗಾತ್ರ

ಕಲಬುರಗಿ: ‘ಕೇಂದ್ರ ಹಾಗೂ ರಾಜ್ಯದಲ್ಲಿ ಈಗ ಅಧಿಕಾರದಲ್ಲಿರುವುದು ‘ಬುಲ್ಡೋಜರ್‌’ ಸರ್ಕಾರಗಳು. ಎಲ್ಲ
ವನ್ನೂ ಗುಡಿಸಿ ಗುಂಡಾಂತರ ಮಾಡಲು ಈ ಸರ್ಕಾರಗಳು ತುದಿಗಾಲಲ್ಲಿವೆ’ ಎಂದು ಸಿಪಿಎಂ ಪಾಲಿಟ್‌ ಬ್ಯುರೊ ಸದಸ್ಯೆ ಸದಸ್ಯೆ ಬೃಂದಾ ಕಾರಟ್‌ ಕಿಡಿಕಾರಿದರು.

‘ಬುಲ್ಡೋಜರ್‌ ಎಂಬುದು ಕೇವಲ ಯಂತ್ರಕ್ಕೆ ಬಳಸುವ ಪದವಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಸಿದ್ಧಾಂತಗಳು ಮತೀಯ ಭಾವನೆಗಳನ್ನು ಕೆರಳಿಸುವ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸುವ, ತಾರತಮ್ಯ ಹೆಚ್ಚಿಸುವ ಮತ್ತು ಜಾತಿ, ಧರ್ಮಗಳ ನಡುವೆ ಸಂಘರ್ಷ ಮೂಡಿಸುವ ಪ್ರತೀಕವಾಗಿವೆ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ದೇಶದಲ್ಲಿ ಬಗೆಹರಿಯದ ಸಮಸ್ಯೆಗಳು ಸಾಕಷ್ಟಿವೆ. ಯುವಜನರು ಉದ್ಯೋಗ ಸಿಗದೇ ಪರದಾಡುತ್ತಿದ್ದಾರೆ, ಜಾತಿ ತಾರತಮ್ಯ ಹೆಚ್ಚುತ್ತಿದೆ, ಬಡವರು ಬೆಲೆ ಏರಿಕೆಯಿಂದ ಬಳಲಿದ್ದಾರೆ, ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂಥ ಸಮಸ್ಯೆಗಳನ್ನು ನಿವಾರಿಸಲು ಗಮನ ಕೊಡದ ಕೇಂದ್ರ ಸರ್ಕಾರ ಕೇವಲ ಧಾರ್ಮಿಕ ಸಂಘರ್ಷ, ತಾರತಮ್ಯ, ಯುವಜನರನ್ನು ಹಾದಿ ತಪ್ಪಿಸುವಲ್ಲಿ ಆಸಕ್ತಿ ವಹಿಸಿದೆ’ ಎಂದರು.

‘ದೇಶದಾದ್ಯಂತ ಒಂದಲ್ಲ ಒಂದು ಕಡೆ ಇಂಥ ಭಾವನಾತ್ಮಕ ಸಂಗತಿಗಳನ್ನು ಕೆರಳಿಸಲು ಉಪಾಯ ಹೂಡಲಾಗುತ್ತಿದೆ. ಬಿಜೆಪಿ ತನ್ನ ಸಂಘಟನೆಗಳ ಮೂಲಕ ಈ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಹೀಗೆ, ಮತೀಯ ಸಂಘರ್ಷ ಮುಂದುವರಿದರೆ ದೇಶದಲ್ಲಿ ಏನು ಉಳಿಯುತ್ತದೆ? ಇವರು ದೇಶವನ್ನು ಒಡೆಯುತ್ತಿದ್ದಾರೆ. ಇದರ ವಿರುದ್ಧ ಸಿಪಿಐಎಂ ದೇಶದಾದ್ಯಂತ ಆಂದೋಲನ ಆರಂಭಿಸಿದೆ. ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇವರ ಸಮಾಜ
ಘಾತಕ ಬುಲ್ಡೋಜರ್‌ಗಳಿಗೆ ತಡೆ ಹಾಕುತ್ತೇವೆ’ ಎಂದರು.

ಕಾನೂನು ಮೀರುತ್ತಿರುವುದು ಯಾರು?: ‘ದೇಶದಲ್ಲಿ ಮುಸ್ಲಿಮರು ಕಾನೂನು ಪಾಲಿಸುವುದಿಲ್ಲ, ಸಂವಿಧಾನಕ್ಕೆ ಬೆಲೆ ಕೊಡುವುದಿಲ್ಲ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಈ ನೆಲದ ಯಾವ ಕಾನೂನನ್ನು ಅವರು ಮೀರಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಯಾರೂ ಹೇಳಲು ಸಿದ್ಧರಿಲ್ಲ. ಬರೀ ಗಾಳಿಮಾತುಗಳ ಮೂಲಕ ಸಮುದಾಯಗಳಲ್ಲಿ ವಿರಸ ಮೂಡಿಸುತ್ತಿದ್ದಾರೆ’ ಎಂದರು.

‘ಸ್ವಾತಂತ್ರ್ಯ ಪೂರ್ವದ ಯಾವುದೇ ಧಾರ್ಮಿಕ ಸ್ಥಳಗಳನ್ನು ಬದಲಾಯಿಸ
ಬಾರದು, ಅವು ಹೇಗಿದ್ದಾವೋ ಹಾಗೇ ಉಳಿಸಿಕೊಳ್ಳಬೇಕು ಎಂದು‘ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991’ ಹೇಳುತ್ತದೆ. ಆದರೆ, ಈಗ ದೇಶದಾದ್ಯಂತ ಬಹುಪಾಲು ಮಸೀದಿಗಳ ಮೇಲೂ ಪ್ರಕರಣ ದಾಖಲಿಸುವುದು, ದಾಳಿ ನಡೆಸುವುದು, ಧಾರ್ಮಿಕ ಹಕ್ಕು ಕಿತ್ತುಕೊಳ್ಳುವುದು ಮುಂದುವರಿದಿದೆ’ ಎಂದು ತಿಳಿಸಿದರು.

‘ಅಯೋಧ್ಯೆ, ಮಥುರಾ, ತಾಜಮಹಲ್‌, ಕುತುಬ್‌ ಮಿನಾರ್‌ ಆಯಿತು; ಈಗ ವಾರಾಣಸಿಯ ಜ್ಞಾನವಾಪಿ ಮಸೀದಿ ಮೇಲೆ ಪ್ರಹಾರ ನಡೆದಿದೆ. ಹೀಗೇ ಇಡೀ ದೇಶದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಾನೂನು ಮೀರುವುದು ಬಿಜೆಪಿ ಪೋಷಿತ ಸಂಘಟನೆಗಳ ಗುರಿಯಾಗಿದೆ’ ಎಂದರು.

ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಮಂಡಳಿ ಸದಸ್ಯರಾದಕೆ.ನೀಲಾ, ಜಿಲ್ಲಾ ಸಮಿತಿ ಸದಸ್ಯರಾದ ಭೀಮಶೆಟ್ಟಿ ಎಂಪ‍ಳ್ಳಿ. ಎಂ.ಬಿ. ಸಜ್ಜನ, ಶರಣಬಸಪ್ಪ ಮಮಶೆಟ್ಟ, ರೇವಣಸಿದ್ದ, ಜಾವೇದ್ ಹುಸೇನ್‌ ಇದ್ದರು.

*

‘ಉದ್ಯೋಗ ಖಾತ್ರಿ: ರಾಜ್ಯ ಸರ್ಕಾರ ವಿಫಲ’

‘ಗ್ರಾಮೀಣ ಜನರ ಬವಣೆ ನೀಗಿಸಲು ಉದ್ಯೋಗ ಖಾತ್ರಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ. ಇಂಥ ತಪ್ಪುಗಳನ್ನು ಮುಚ್ಚಿಡಲು ಹಿಜಾಬ್‌, ಹಲಾಲ್‌ನಂಥ ಮತೀಯ ಭಾವನೆಗಳನ್ನು ಕೆರಳಿಸುತ್ತಿದೆ’ ಎಂದು ಬೃಂದಾ ಕಾರಟ್‌ ಆರೋಪಿಸಿದರು.

‘ಎರಡು ವರ್ಷಗಳ ಕೋವಿಡ್‌ ಸಂಕಷ್ಟದ ಕಾರಣ ಗ್ರಾಮೀಣ ಜನ, ಅದರಲ್ಲೂ ಮಹಿಳೆಯರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಆದರೂ ಕಳೆದ ವರ್ಷ ರಾಜ್ಯ ಸರ್ಕಾರವು ನರೇಗಾದಲ್ಲಿ ಸರಾಸರಿ 49 ಮಾನವ ದಿನಗಳನ್ನು ಮಾತ್ರ ಸೃಜನೆ ಮಾಡಿದೆ. ಪ್ರಸಕ್ತ ವರ್ಷ ಇದೂವರೆಗೆ ಸರಾಸರಿ 17 ಮಾನವ ದಿನಗಳ ಕೆಲಸ ಮಾತ್ರ ನೀಡಿದೆ. ಇನ್ನಷ್ಟು ದಿನಗಳಲ್ಲಿ ಮುಂಗಾರು ಹಂಗಾಮು ಆರಂಭವಾಗುತ್ತದೆ. ಅಲ್ಲಿಗೆ ನರೇಗಾ ಕೆಲಸ ಅರ್ಧ ಕೂಡ ಬಳಕೆಯಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT