ಶುಕ್ರವಾರ, ಜುಲೈ 30, 2021
22 °C

ಕೊರೊನಾ ಸೇನಾನಿಗಳಿಗೆ ಬಸ್ ಒದಗಿಸಿ: ಪತ್ರ ಬರೆದ ಪ್ರಿಯಾಂಕ್ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಕಲಬುರ್ಗಿ ಜಿಲ್ಲೆಯಲ್ಲಿ ಮುಂಚೂಣಿ ಕೊರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿರುವ ವಿವಿಧ ಇಲಾಖೆಗಳ ನೌಕರರು ತಮ್ಮ ಕರ್ತವ್ಯದ ಸ್ಥಳಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯಿಂದ ಬಸ್ಸಿನ ಸೌಲಭ್ಯ ಒದಗಿಸಬೇಕು ಎಂದು ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಎಂ. ಖರ್ಗೆ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆದಿರುವ ಅವರು, ಕೊರೊನಾ ಎರಡನೇ ಅಲೆಯು ಅತ್ಯಂತ ಭೀಕರ ಪರಿಸ್ಥಿತಿ ಸೃಷ್ಟಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೊರೊನಾ ಹತೋಟಿಗೆ ತರಲು ಮುಂದಾಗಿರುವ ಕೊರೊನಾ ಸೇನಾನಿಗಳ ಕಾರ್ಯಕ್ಷಮತೆ ತುಂಬಾ ಮಹತ್ವದ್ದಾಗಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ಆರು ಇಲಾಖೆಗಳ ನೌಕರರಿಗೆ ಸಾರಿಗೆ ಸಂಸ್ಥೆಯಿಂದ ಬಸ್ಸಿನ ಸೌಲಭ್ಯ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ತೆರಳಿ ಸೇವೆ ಸಲ್ಲಿಸಲು ಕೊರೊನಾ ಸೇನಾನಿಗಳು ಅನೇಕ ಕಷ್ಟ ಎದುರಿಸುತ್ತಿದ್ದಾರೆ. ಮಹಿಳಾ ಸಿಬ್ಬಂದಿ ತಮ್ಮ ಮನೆಯವರ ಜೊತೆಗೆ ಬೈಕ್, ಇತರೆ ವಾಹನಗಳಲ್ಲಿ ಹೋಗಿ ಬರುವ ಅನಿವಾರ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ ಕೊರೊನಾ ಸೇನಾನಿಗಳು ಮಾನಸಿಕ, ಶಾರೀರಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಮುಂಚೂಣಿ ಕೊರೊನಾ ಸೇನಾನಿಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆಯಿಂದ ಬಸ್ಸಿನ ಸೌಲಭ್ಯ ಒದಗಿಸಲಾಗಿದೆ. ಇದರಿಂದ ತಮ್ಮ ಕರ್ತವ್ಯದ ಸ್ಥಳಗಳಿಗೆ ಸುರಕ್ಷಿತವಾಗಿ ಹೋಗಿ ಬರಲು ತುಂಬಾ ಅನುಕೂಲವಾಗಿದೆ. ಅದೇ ರೀತಿ ಕಲಬುರ್ಗಿ ಜಿಲ್ಲೆಯಾದ್ಯಂತ ಕೊರೊನಾ ಕೆಲಸದಲ್ಲಿ ನಿರತರಾಗಿರುವ ಸೇನಾನಿಗಳಿಗೆ ಬಸ್ಸಿನ ಸೌಲಭ್ಯದ ಅವಶ್ಯಕತೆಯಿದೆ. ಜಿಲ್ಲೆಯ ಪ್ರತಿಯೊಂದು ಘಟಕದಿಂದ ಬಸ್ಸಿನ ಸೌಲಭ್ಯ ಒದಗಿಸಬೇಕು ಎಂದು ಪ್ರಿಯಾಂಕ್ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು