ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಪ್ರಯಾಣ ದರ ಏರಿಕೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ಬಡವರು ಹೆಚ್ಚಾಗಿ ಬಳಸುವ ಸಾರಿಗೆಗೆ ಶೇ 12ರಷ್ಟು ಹೆಚ್ಚಳಕ್ಕೆ ಆಕ್ರೋಶ
Last Updated 27 ಫೆಬ್ರುವರಿ 2020, 9:07 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಸರ್ಕಾರಬಸ್ ಪ್ರಯಾಣ ದರವನ್ನು ಶೇ 12ರಷ್ಟು ಏರಿಕೆ ಮಾಡಿದ್ದನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದ ಕಾರ್ಯಕರ್ತರು ನಗರದ ಕೇಂದ್ರ ಬಸ್‌ ನಿಲ್ದಾಣದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಸೆಕ್ರೆಟೇರಿಯಟ್‌ ಸದಸ್ಯ ಎಸ್‌.ಎಂ.ಶರ್ಮಾ,ಸರ್ಕಾರವು ಸಾರಿಗೆ ಸಂಸ್ಥೆಯ ಪ್ರಯಾಣ ದರವನ್ನು ಸರಾಸರಿ ಶೇ 12ರಷ್ಟು ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.ಈಗಾಗಲೇ ಹಾಲಿನ ದರ, ರೈಲ್ವೆ ದರ, ಪೆಟ್ರೋಲ್–ಡೀಸೆಲ್ ದರ, ಅಡುಗೆ ಅನಿಲ ದರ, ಇನ್ನಿತರ ಅವಶ್ಯಕ ವಸ್ತುಗಳ ದರ ಏರಿಕೆಗಳಿಂದ ಜನಸಾಮಾನ್ಯರು ತೀವ್ರವಾದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎರಡು ವರ್ಷಗಳ ಸತತ ಪ್ರವಾಹದಿಂದ ಸಂತ್ರಸ್ತರಾದ ಜನತೆಯು ಇನ್ನೂ ಕೂಡ ಚೇತರಿಕೆ ಕಂಡಿಲ್ಲ. ದೇಶದಲ್ಲಿ ಹರಡುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಉದ್ಯೋಗ ನಾಶಗಳು ಜನರ ಆದಾಯವನ್ನು ಕುಂಠಿತಗೊಳಿಸಿವೆ. ಕೆ.ಎಸ್.ಆರ್.ಟಿ.ಸಿಯಂತಹ ಸಾರ್ವಜನಿಕ ಸಾರಿಗೆಯನ್ನು ಬಳಸುವವರು ಬಹುತೇಕ ಬಡವರು, ದುಡಿಯುವ ಜನಗಳೇ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ನೆರವಾಗಬೇಕಾದ ಒಂದು ಪ್ರಜಾಪ್ರಭುತ್ವ ಸರ್ಕಾರವು ಈ ರೀತಿ ಇನ್ನಷ್ಟು ಬೆಲೆ ಏರಿಕೆಯ ಬರೆ ಎಳೆಯುವುದು ಅಮಾನವೀಯ ಕ್ರಮವಾಗಿದೆ’ ಎಂದು ಟೀಕಿಸಿದರು.

‘ರಾಜ್ಯ ಸರ್ಕಾರವು ಇಲಾಖೆಯಲ್ಲಿರುವ ಭ್ರಷ್ಟಾಚಾರ, ದುಂದುವೆಚ್ಚಗಳನ್ನು ನಿಯಂತ್ರಿಸಿ, ಇಲಾಖೆಯ ನಷ್ಟವನ್ನು ತಡೆಯಬೇಕು ಹಾಗೂ ತಕ್ಷಣವೇ ಜನಸಾಮಾನ್ಯರಿಗೆ ಹೊರೆಯಾಗಿರುವ ಬಸ್ ದರ ಏರಿಕೆಯ ತೀರ್ಮಾನವನ್ನು ಹಿಂತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಸಮಿತಿ ಸದಸ್ಯ ಮಹೇಶ ನಾಡಗೌಡ ಸರ್ಕಾರದ ಕ್ರಮವನ್ನು ಖಂಡಿಸಿದರು.

ಅಧ್ಯಕ್ಷತೆಯನ್ನು ಕಾಮ್ರೇಡ್ ಈರಣ್ಣಾ ಇಸಬಾ ವಹಿಸಿದ್ದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ವಿ.ಜಿ.ದೇಸಾಯಿ, ಗಣಪತರಾವ ಕೆ. ಮಾನೆ, ನಿಂಗಣ್ಣ ಜಂಬಗಿ, ಡಾ.ಸೀಮಾ ದೇಶಪಾಂಡೆ ಮತ್ತು ಪಕ್ಷದ ಕಾರ್ಯಕರ್ತರಾದ ಹಣಮಂತ ಎಸ್.ಎಚ್., ಸ್ನೇಹಾ ಕಟ್ಟಿಮನಿ, ಭೀಮಾಶಂಕರ ಪಾಣೇಗಾಂವ್, ಮಲ್ಲಿನಾಥ ಹುಂಡೇಕಲ್, ರಾಧಾ ಜಿ, ಶಿಲ್ಪಾ ಬಿ.ಕೆ ಹಾಗೂ ವಾಡಿ, ಶಹಾಬಾದಗಳಿಂದ ಬಂದಂತಹ ಕಾರ್ಯಕರ್ತರು, ನಗರದ ಜನಸಾಮಾನ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಬಸ್ ದರ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT