ಮಂಗಳವಾರ, ಸೆಪ್ಟೆಂಬರ್ 21, 2021
23 °C

450 ಗಿಗಾ ವಾಟ್ ವಿದ್ಯುತ್ ಉತ್ಪಾದನೆ ಗುರಿ: ಕೇಂದ್ರ ಸಚಿವ ಭಗವಂತ ಖೂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಸರ್ಕಾರವು 2030ರ ವೇಳೆಗೆ 450 ಗಿಗಾ ವಾಟ್ ವಿದ್ಯುತ್‌ ಅನ್ನು ವಿವಿಧ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುವ ಗುರಿ ಹೊಂದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.‌‌

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2022ರ ವೇಳೆಗೆ 175 ಗಿಗಾ ವಾಟ್ ವಿದ್ಯುತ್‌ ಉತ್ಪಾದನೆಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈಗಾಗಲೇ 150 ಗಿಗಾವಾಟ್ ವಿದ್ಯುತ್ ಉತ್ಪಾದನೆ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಉಳಿದ 25 ಗಿಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಆಸಕ್ತ ಸಂಸ್ಥೆಗಳಿಂದ ಟೆಂಡರ್‌ ಕರೆಯಲಾಗುತ್ತಿದೆ’ ಎಂದರು.

‘ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಹಾಗೂ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ದಾಸ್ತಾನು ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ರಸಗೊಬ್ಬರ: ದೇಶದ ರಾಮಗೊಂಡಂ ಸೇರಿದಂತೆ ಮೂರು ಕಡೆಗಳಲ್ಲಿ ಉತ್ಪಾದನೆ ನಿಲ್ಲಿಸಿದ್ದ ರಸಗೊಬ್ಬರ ಕಾರ್ಖಾನೆಗಳಿಗೆ ಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕಾಯಕಲ್ಪ ನೀಡಲಾಗುತ್ತಿದೆ. ಇದರಿಂದಾಗಿ 12.7 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಸಾಧ್ಯವಾಗಲಿದ್ದು, ವಿದೇಶಗಳಿಂದ ಗೊಬ್ಬರವನ್ನು ಆಮದು ಮಾಡಿಕೊಳ್ಳುವ ಅವಶ್ಯಕತೆ ಬರುವುದಿಲ್ಲ ಎಂದರು.

ಜನೌಷಧ ಮಳಿಗೆಗಳಲ್ಲಿ 1400 ಬಗೆಯ ಔಷಧಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವು ಔಷಧಿಗಳು ಸಿಗುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಸಭೆ ನಡೆಸಿ ಎಲ್ಲ ಔಷಧಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರವು ರಸಗೊಬ್ಬರ ಉತ್ಪಾದನೆಯಲ್ಲಿ ನ್ಯಾನೊ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇದರಿಂದಾಗಿ ಯೂರಿಯಾ, ಡಿಎಪಿ ಗೊಬ್ಬರ ದ್ರವ ರೂಪದಲ್ಲಿ ದೊರೆಯಲಿದೆ. ₹ 550 ಬೆಲೆಯ ದ್ರವರೂಪದ ಗೊಬ್ಬರವು 45 ಕೆ.ಜಿ. ಘನ ರೂಪದ ಗೊಬ್ಬರಕ್ಕೆ ಸಮಾನವಾಗಿರುತ್ತದೆ. ಇದರ ವಾಣಿಜ್ಯ ಉತ್ಪಾದನೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದರಿಂದಾಗಿ ಗೊಬ್ಬರವನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ತಾಪತ್ರಯ ಇರುವುದಿಲ್ಲ. ವಿದೇಶಿ ವಿನಿಮಯವೂ ಉಳಿತಾಯವಾಗಲಿದೆ’ ಎಂದರು.

‘2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೊಬ್ಬರ ಕೇಳಿದ ಯಾವ ರೈತರ ಮೇಲೂ ಗುಂಡು ಹಾರಿಸಿಲ್ಲ. ಲಾಠಿ ಪ್ರಹಾರ ಮಾಡಿಲ್ಲ. ಅಗತ್ಯವಿರುವಷ್ಟು ಗೊಬ್ಬರವನ್ನು ಆಯಾ ಜಿಲ್ಲೆಗಳಿಗೆ ಒದಗಿಸಲಾಗುತ್ತಿದೆ. ಗೊಬ್ಬರ ದಾಸ್ತಾನಿನ ಕುರಿತು ಇಲಾಖೆಯಲ್ಲಿ ತಕ್ಷಣದ ಮಾಹಿತಿ ನೀಡುವ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಆಸಕ್ತ ರೈತರು ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ತಮ್ಮ ಜಿಲ್ಲೆಯಲ್ಲಿ ಕಳೆದ ರಾತ್ರಿ 12ರವರೆಗೆ ಎಷ್ಟು ದಾಸ್ತಾನಿದೆ ಎಂಬುದನ್ನು ತಿಳಿಯಬಹುದಾಗಿದೆ’ ಎಂದು ಹೇಳಿದರು.

ಕೃತಕ ಗೊಬ್ಬರದ ಅಭಾವ ಸೃಷ್ಟಿಸುವ ಹಾಗೂ ನಿಗದಿತ ಬೆಲೆಗಿಂತ ಹೆಚ್ಚುವರಿ ಹಣ ಪಡೆದ ಪ್ರಕರಣಗಳು ಕಂಡು ಬಂದರೆ ಅಂತಹ ಗೊಬ್ಬರ ಅಂಗಡಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಲೈಸೆನ್ಸ್ ರದ್ದುಪಡಿಸುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ ಎಂದರು.

ರಸಗೊಬ್ಬರ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದೂವರೆ ಎರಡು ಪಟ್ಟು ಹೆಚ್ಚಳವಾದರೂ ರೈತರ ಹಿತವನ್ನು ಬಯಸುವ ನರೇಂದ್ರ ಮೋದಿ ಸರ್ಕಾರ ರೈತರಿಗೆ ಗೊಬ್ಬರದ ಮೇಲೆ ಸಬ್ಸಿಡಿ ನೀಡಿದ್ದು, ಪ್ರತಿ ಚೀಲ ಗೊಬ್ಬರದ ಬೆಲೆ ₹ 1200ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಾ. ಉಮೇಶ ಜಾಧವ, ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು