ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಜಿಲ್ಲೆ ಅಪ್ಪ ಮಕ್ಕಳ ಆಸ್ತಿಯಲ್ಲ: ಚಕ್ರವರ್ತಿ ಸೂಲಿಬೆಲೆ ಮಾತಿನ ವಾಗ್ದಾಳಿ

ನಮೋ ಭಾರತ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತಿನ ವಾಗ್ದಾಳಿ
Published 1 ಮಾರ್ಚ್ 2024, 4:59 IST
Last Updated 1 ಮಾರ್ಚ್ 2024, 4:59 IST
ಅಕ್ಷರ ಗಾತ್ರ

ಚಿತ್ತಾಪುರ: ‘ನನ್ನನ್ನು ಕಲಬುರಗಿ ಜಿಲ್ಲೆಗೆ, ಚಿತ್ತಾಪುರಕ್ಕೆ ಬರದಂತೆ ತಡೆ ಹಿಡಿಯಲು ಕಲಬುರಗಿ ಜಿಲ್ಲೆ ಯಾರಪ್ಪನ ಆಸ್ತಿಯೂ ಅಲ್ಲ, ಅಪ್ಪ ಮಕ್ಕಳ ಆಸ್ತಿಯೂ ಅಲ್ಲ. ಪೊಲೀಸರು ತಲೆ ಬಾಗಿಸಬೇಕೆ ಹೊರತು ಕಾಲಿಗೆ ನಮಸ್ಕಾರ ಮಾಡಬಾರದು‘ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.

ಪಟ್ಟಣದ ಬಾಪುರಾವ್ ಕಲ್ಯಾಣ ಮಂಟಪದಲ್ಲಿ ಮಂಡಲ ಬಿಜೆಪಿ ಹಾಗೂ ಯುವ ಬ್ರಿಗೇಡ್, ನಮೋ ಬ್ರಿಗೇಡ್ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿಮ್ಮ ಕೈಯಲ್ಲಿ ಮಂತ್ರಿಸ್ಥಾನ, ಅಧಿಕಾರ, ಪೊಲೀಸ್ ಬಲ, ಲಾಠಿ, ದರ್ಪ ಇದ್ದರೆ ನಮ್ಮ ಕೈಯಲ್ಲಿ ಸಂವಿಧಾನವಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.

‌‘ಪ್ರಧಾನಿ ಮೋದಿ ಅವರು ಅಪ್ಪನ ಹೆಸರು, ಜಾತಿ ಹೇಳಿಕೊಂಡು ರಾಜಕೀಯ ಮಾಡಲ್ಲ. ಅಧಿಕಾರ ಇದೆ ಅಂತ ದರ್ಪ ತೋರುವುದಕ್ಕಲ್ಲ. ಜನಸಾಮಾನ್ಯರ ಶೋಷಣೆ ಮಾಡುವುದಕ್ಕಲ್ಲ. ಸಾಮಾನ್ಯರು ಹೆದರುತ್ತಾರೆ, ನಮ್ಮಂತಹವರು ಎದೆಗೊಟ್ಟು ಎದುರಿಸುತ್ತಾರೆ. ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರಕ್ಕೆ ಯಾರೂ ಬರಬಾರದಾ? ಇದೇನು ಪ್ರತ್ಯೇಕಾ ರಿಪಬ್ಲಿಕ್ಕಾ?‘ ಎಂದು ಅವರು ಪ್ರಶ್ನಿಸಿದರು.

‘ಕಾಂಗ್ರೆಸ್ಸಿನವರಿಗೆ ಸರ್ಕಾರ ನಡೆಸುವ ಚಿಂತೆಯಿಲ್ಲ. ಪ್ರಶ್ನೆ ಮಾಡುವವರ ಬಾಯಿ ಮುಚ್ಚಿಸುವ ಚಿಂತೆಯಿದೆ. ಕಾಂಗ್ರೆಸ್ಸಿಗರು ಎಷ್ಟು ದಡ್ಡರು ಎಂದರೆ ಭಾಷಣ ಮಾಡಲು ಚಕ್ರವರ್ತಿಗೆ ಮೋದಿ ಅವರು ಹಣ ಕೊಡುತ್ತಾರೆ ಎಂದು ಸುಳ್ಳು ಹೇಳಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡುತ್ತಾರೆ. ಎಂತಹ ದಡ್ಡತನ ಇದು. ನಾನು ಯಾರಿಂದಲೂ ನಯಾ ಪೈಸೆಯೂ ಪಡೆದಿಲ್ಲ. ನನ್ನನ್ನು ದುಡ್ಡು ಕೊಟ್ಟು ಖರೀದಿಸುವರು ಇನ್ನೂ ಹುಟ್ಟಿಲ್ಲ‘ ಎಂದರು.

‘ಕಾಂಗ್ರೆಸ್ಸಿನವರು ತಮ್ಮ ಪರಿವಾರಕ್ಕಾಗಿ ರಾಜಕೀಯ ಮಾಡಿದರೆ ಮೋದಿಯವರು ಇಡೀ ದೇಶದ ಜನ ನನ್ನ ಪರಿವಾರ ಎಂದು ಕೆಲಸ ಮಾಡುತ್ತಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಯಾರೇ ಆಗಿರಲಿ, ಇದು ಎಂ.ಪಿ. ಚುನಾವಣೆಯಲ್ಲ ಪಿ.ಎಂ. ಚುನಾವಣೆ ಎಂದು ಭಾವಿಸಿ ಮತ್ತೊಮ್ಮೆ ಪ್ರಧಾನಿ ಆಗಲೆಂದು ಕಮಲದ ಗುರುತಿಗೆ ಮತ ಹಾಕಿರಿ‘ ಎಂದು ಹೇಳಿದರು.

ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಕೆಲಸಗಳ ಕುರಿತು ಪರದೆ ಮೇಲೆ ಚಿತ್ರಗಳನ್ನು ಪ್ರದರ್ಶಿಸಿ ವಿವರಿಸಿದ ಅವರು, ‘ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟು ವರ್ಷಗಳ ಕಾಲ ಮಾಡಲಾಗದ ಸಾಧನೆ, ಅಭಿವೃದ್ಧಿ ಮೋದಿ ಮಾಡಿ ತೋರಿಸಿದ್ದಾರೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಕೊಂಚೂರಿನ ಸಚಿತಾನಂದ ಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಸೋಮಶೇಖರ ಪಾಟೀಲ ಬೆಳಗುಂಪಾ, ಚಂದ್ರಶೇಖರ ಅವಂಟಿ, ಶರಣಪ್ಪ ತಳವಾರ, ವಿಠಲ್ ನಾಯಕ, ಬಸವರಾಜ ಬೆಣ್ಣೂರಕರ್, ಶರಣಗೌಡ ಭೀಮನಹಳ್ಳಿ, ಗೋಪಾಲ್ ರಾಠೋಡ್, ಸುರೇಶ ಬೆನಕನಳ್ಳಿ, ನಾಗರಾಜ ಭಂಕಲಗಿ, ನಾಗರಾಜ ಹೂಗಾರ, ತಮ್ಮಣ್ಣ ಡಿಗ್ಗಿ, ವೀರಣ್ಣ ಯಾರಿ, ನಾಗುಬಾಯಿ ಜಿತೂರೆ, ಅಕ್ಕಮಹಾದೇವಿ, ಕೋಟೇಶ್ವರ ರೇಷ್ಮಿ ಸೇರಿದಂತೆ ಅನೇಕರು ಹಾಜರಿದ್ದರು.

ಚಿತ್ತಾಪುರದಲ್ಲಿ ನಮೋ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ
ಚಿತ್ತಾಪುರದಲ್ಲಿ ನಮೋ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT