ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಸಂಪನ್ಮೂಲ ಕೇಂದ್ರ ಸೀಲ್‌ಡೌನ್

ನಿಡಗುಂದಾ: ಶಿಕ್ಷಕಿಯ ಬೀಳ್ಕೊಡುಗೆಯಲ್ಲಿ ಇಬ್ಬರು ಸೋಂಕಿತರು ಭಾಗಿ
Last Updated 9 ಜುಲೈ 2020, 7:25 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ನಿಡಗುಂದಾ ಗ್ರಾಮದಲ್ಲಿ ಅನುಮತಿ ಪಡೆಯದೆ ಬುಧವಾರ ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆ ಏರ್ಪಡಿಸಿದ್ದು, ಸಮಾರಂಭದಲ್ಲಿ ಪಾಲ್ಗೊಂಡಿದ್ದ ಒಬ್ಬ ಸಿಆರ್‌ಪಿ ಮತ್ತು ಒಬ್ಬ ದೈಹಿಕ ಶಿಕ್ಷಕರಲ್ಲಿ ಕೋವಿಡ್ -19 ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಸಿಆರ್‌ಪಿ ಮತ್ತು ದೈಹಿಕ ಶಿಕ್ಷಕರ ಟ್ರಾವೆಲ್ ಹಿಸ್ಟರಿ ಕೂಡ ವ್ಯಾಪಕವಾಗಿದ್ದು, ಅವರು ಗಂಟಲು ದ್ರವದ ಮಾದರಿ ನೀಡಿದ ಮೇಲೆ ನೂರಾರು ಶಿಕ್ಷಕರನ್ನು ಭೇಟಿ ಮಾಡಿದ್ದಾರೆ. ಇದು ಶಿಕ್ಷಕ ಸಮುದಾಯದಲ್ಲಿ ಆತಂಕ ಮೂಡಿಸಿದೆ.

ನಿವೃತ್ತ ಶಿಕ್ಷಕಿ ಕಮಲಾಬಾಯಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಜಿ.ಪಂ. ಸದಸ್ಯ ಶಿವಶರಣಪ್ಪ ಶಂಕರ, ತಾ.ಪಂ. ಸದಸ್ಯ ವೆಂಕಟರೆಡ್ಡಿ ಪಾಟೀಲ, ನಿರ್ಗಮಿತ ಗ್ರಾ.ಪಂ. ಅಧ್ಯಕ್ಷೆ ಶ್ರೀದೇವಿ ಹಿರೇಮಠ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹೋಳ್ಕರ ಸಹಿತ ಹಲವು ಶಿಕ್ಷಕರು, ಮುಖ್ಯ ಶಿಕ್ಷಕರು, ಸಿಆರ್‌ಪಿ ಮತ್ತು ಬಿಆರ್‌ಪಿಗಳು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಪಾಲ್ಗೊಂಡವರಿಗೆ ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಅತಿಥಿ ಗಣ್ಯರಲ್ಲಿ ಕೆಲವರು ಊಟ ಮಾಡಿದರೆ ಇನ್ನೂ ಕೆಲವರು ಮಾಡಿಲ್ಲ.

ಸರ್ಕಾರ ಕೊರೊನಾ ತಡೆಗೆ ಸಭೆ ಸಮಾರಂಭ ಹಾಗೂ ಮದುವೆಗಳನ್ನು ರದ್ದು ಪಡಿಸಿದ್ದರೂ ಸದ್ದಿಲ್ಲದೇ ಶಿಕ್ಷಕರು ಸಮಾರಂಭ ಆಯೋಜಿಸಿದ್ದು ಹುಬ್ಬೇರಿಸುವಂತೆ ಮಾಡಿದೆ.

‘ಕಾರ್ಯಕ್ರಮಕ್ಕೆ ಆಯೋಜಕರು ನನ್ನನ್ನುಆಹ್ವಾನಿಸಿದ್ದರು. ಆದರೆ ನಾನು ಪಾಲ್ಗೊಂಡಿಲ್ಲ. ನೀವು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ಹೀಗಾಗಿ ನಾನು ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದೆ’ ಎಂದು ಬಿಇಒ ದತ್ತಪ್ಪ ತಳವಾರ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಸಿಆರ್‌ಪಿ ಮತ್ತು ದೈಹಿಕ ಶಿಕ್ಷಕರಲ್ಲಿ ಕೋವಿಡ್ -19 ದೃಢಪಟ್ಟಿರುವುದರಿಂದ ಚಿಂಚೋಳಿಯ ಮಿನಿ ವಿಧಾನ ಸೌಧದ ಹಿಂದುಗಡೆ ಬರುವ ಕ್ಷೇತ್ರ ಸಂಪನ್ಮೂಲ ಕೇಂದ್ರವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ವಿವರಿಸಿದರು.

ಕಂಟೇನ್ಮೆಂಟ್ ವಲಯಕ್ಕೆ ಭೇಟಿ: ತಾಲ್ಲೂಕಿನ ಕುಂಚಾವರಂ ಕಂಟೇನ್ಮೆಂಟ್ ವಲಯಕ್ಕೆ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಇದಕ್ಕೆ ವ್ಯಕ್ತಿಯೊಬ್ಬರು ವಿರೋಧ ವ್ಯಕ್ತಪಡಿಸಿದಾಗ ಅವರಿಗೆ ತಿಳಿವಳಿಕೆ ನೀಡಿ ಸೆಲ್ಫಿ ಪಡೆದರು.

ತಹಶೀಲ್ದಾರರೊಂದಿಗೆ ಸಮುದಾಯ ಆರೋಗ್ಯ ಕೇಂದ್ರದ ವಯದ್ಯಾಧಿಕಾರಿ ಡಾ. ಬಾಲಾಜಿ ಪಾಟೀಲ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಪಿಡಿಒ ತುಕ್ಕಪ್ಪ, ಗ್ರಾಮ ಲೆಕ್ಕಾಧಿಕಾರಿ ಕಾಶಿನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT