ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಭಾರಿ ಮಳೆಯಿಂದ ಬೆಳೆ ಹಾನಿ, ಮನೆಗಳಿಗೆ ನುಗ್ಗಿದ ನೀರು

Last Updated 18 ಜುಲೈ 2021, 14:42 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಭಾನುವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದ ಉಂಟಾದ ನೆರೆ ಹಾವಳಿಗೆ ಜನ ಸಾಮಾನ್ಯರು ತತ್ತರಿಸಿದ್ದಾರೆ.

ಏಕಾಏಕಿ ಸುರಿದ ಭಾರಿ ಮಳೆಯಿಂದ ಹಳ್ಳ, ಕೊಳ್ಳ, ತೊರೆ, ನಾಲೆಗಳು ಉಕ್ಕೇರಿ ಹರಿದಿವೆ. ಇದರಿಂದ ಪ್ರವಾಹದ ನೀರು ಊರು ಸೇರಿ ಮನೆಗಳಿಗೆ ನುಗ್ಗಿದ್ದರಿಂದ ಜನರು ಬೆಚ್ಚಿ ಬೀಳುವಂತೆ ಮಾಡಿದೆ.

ನೆರೆಯ ಬೀದರ್ ಜಿಲ್ಲೆಯ ಹುಮ್ನಾಬಾದ್ ಮತ್ತು ಚಿಟ್ಟಗುಪ್ಪ ತಾಲ್ಲೂಕಿನಲ್ಲಿ ಸುರಿದ ಮಳೆಯ ನೀರು ತಾಲ್ಲೂಕು ಪ್ರವೇಶಿಸಿ ನೆರೆ ಹಾವಳಿಗೆ ಕಾರಣವಾಗಿದೆ.

ಇದರಿಂದ ಸಾಲೇಬೀರನಹಳ್ಳಿ, ತುಮಕುಂಟಾ, ನಾಗಾಈದಲಾಯಿ, ದೇಗಲಮಡಿ, ಕೊಳ್ಳೂರು, ಶಿರೋಳ್ಳಿ, ಬೆನಕನಳ್ಳಿ, ಕೆರೋಳ್ಳಿ, ಮರಪಳ್ಳಿ ಮತ್ತಿತರರ ಗ್ರಾಮಗಳು ತತ್ತರಿಸಿವೆ. ನೂರಾರು ಮನೆಗಳಲ್ಲಿ ನೀರು ನುಗ್ಗಿ ಜನರ ಜೀವನ ದುಸ್ತರಗೊಳಿಸಿದೆ.

ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಹಾಗಲಿನಲ್ಲಿ ನೆರೆ ಬಂದಿದ್ದರಿಂದ ಜೀವ ಹಾನಿಯಾಗಿಲ್ಲ. ಆದರೆ, ಬೆಳೆಹಾನಿ ಜತೆಗೆ ಹೊಲಗಳಲ್ಲಿನ ಮಣ್ಣು ಬೆಳೆ ಕೊಚ್ಚಿಕೊಂಡು ಹೋಗಿದ ವರದಿಗಳಿವೆ.

‘ಶಿರೋಳ್ಳಿ ಮತ್ತು ಶಿರೋಳ್ಳಿ ತಾಂಡಾ ಹೆಚ್ಚಿನ ಮನೆಗಳಲ್ಲಿ ನೀರು ನುಗ್ಗಿದೆ. ಇದರಿಂದ ಜನರ ಜೀವನ ಸಂಕಷ್ಟಕ್ಕೆ ತಳ್ಳಿದೆ. ಗ್ರಾಮದ ಪುಕ್ಕಟಗಲ್ಲಿ ಹಾಗೂ ತಾಂಡಾ, ಪ್ರವಾಹದಿಂದ ಅವಾಂತರ ಸೃಷ್ಟಿಸಿದೆ. ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಮನೆಯಲ್ಲಿ ಮಂಚದ ಮೇಲೆ ಹಾಗೂ ಮಾಳಿಗೆ ಮೇಲೆ ನಿಂತಿದ್ದರು. ಕೆರೋಳ್ಳಿಯಲ್ಲೂ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ‘ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಸುಲೇಪೇಟ ತಿಳಿಸಿದರು.

‘ಭಂಟನಳ್ಳಿ, ಕುಪನೂರ ಹಾಗೂ ಹೊಡೇಬೀರನಹಳ್ಳಿ, ಕೆರೋಳ್ಳಿ ಕಡೆಯಿಂದ ನೀರು ಬಂದು ಬೆನಕನಳ್ಳಿಗೆ ನುಗ್ಗಿದ್ದರಿಂದ ಬೆನಕನಳ್ಳಿ ಜಲಾವ್ರತವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿವೆ. ಇದರಿಂದ ಜನ ಕಂಗಾಲಾಗಿದ್ದಾರೆ. ಇನ್ನೂ ಪ್ರವಾಹದ ಮಟ್ಟ ಹೆಚ್ಚುತ್ತಿರುವುದರಿಂದ ಜನ ಭೀತಿಯಲ್ಲಿಯೇ ರಾತ್ರಿ ಕಳೆಯುವಂತಾಗಿದೆ‘ ಎಂದು ಬಿಜೆಪಿ ಮುಖಂಡ ಮಲ್ಲು ರಾಯಪ್ಪಗೌಡ ತಿಳಿಸಿದರು.

‘ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ನೆರೆ ಹಾವಳಿಯಿಂದ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದ್ದಲ್ಲದೇ ಹತ್ತಾರು ಮನೆಗಳು ಪ್ರವಾಹದಿಂದ ತತ್ತರಿಸಿವೆ‘ ಎಂದು ಮುಖಂಡ ಉದಯಕುಮಾರ ಗುತ್ತೇದಾರ ತಿಳಿಸಿದ್ದಾರೆ.

‘ನಮ್ಮ ಊರಿನಲ್ಲಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ನದಿ ಅಕ್ಕಪಕ್ಕದ ಹೊಲಗಳಲ್ಲಿ ಬೆಳೆಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ‘ ಎಂದು ರೈತ ಮಲ್ಲಿಕಾರ್ಜುನ ಮಡಿವಾಳ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಜೀವನ ಅಲ್ಲೋಲ ಕಲ್ಲೋಲವಾಗಿದೆ.
ಕೊಳ್ಳೂರು ಗ್ರಾಮದಲ್ಲಿ ನೀರು ನುಗ್ಗಿ ರಸ್ತೆಮೇಲೆ ಹರಿದಿವೆ ಮನೆಗಳ ಅಂಗಳಕ್ಕೆ ನೀರು ನುಗ್ಗಿವೆ. ಆದರೆ ಯಾವುದೇ ಹಾನಿಯಾಗಿಲ್ಲ. ಈ ಊರಿನಲ್ಲಿ ಪ್ರವಾಹ ಸಾಮಾನ್ಯವಾಗಿದ್ದು ಸ್ವಲ್ಪ ಮಳೆಯಾದರೂ ನೀರು ಹರಿದು ಊರು ಸೇರುವುದು ಮಾಮೂಲಾಗಿದೆ.

ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗಿದ್ದರಿಂದ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಮೊದಲಾದವರು ಭಾನುವಾರ ವಿವಿಧೆಡೆ ಭೇಟಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.

ಪೋತಂಗಲದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್ ಜಗದೀಶ ಸಬ್ ಇನ್‌ಸ್ಪೆಕ್ಟರ್ ವಾತ್ಸಲ್ಯ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಕಾಗಿಣಾ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಶೋಧ ನಡೆಸಿದರು.

ತಾಲ್ಲೂಕಿನ ದೇಗಲಮಡಿ ಗ್ರಾಮಕ್ಕೆ ಪಿಡಿಒ ಜ್ಯೋತಿ ಅನಿಲಕುಮಾರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು. ಶರಣಗೌಡ ಮುದ್ದಾ, ರಮೇಶ ಬಸಲಾಪುರ, ಹಾಗೂ ಗ್ರಾ.ಪಂ. ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT