ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಚಿನ್ಮಳ್ಳಿ ಸೇತುವೆ ದುರಸ್ತಿ

3 ವರ್ಷದ ಸಮಸ್ಯೆ ಪರಿಹಾರ, ವಾಹನ ಸಂಚಾರ ಪುನರಾರಂಭ
Last Updated 20 ಜೂನ್ 2020, 7:13 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಚಿನ್ಮಳ್ಳಿ ಹತ್ತಿರ ಭೀಮಾ ನದಿ ಪ್ರವಾಹಕ್ಕೆ ಭಾಗಶಃ ಕೊಚ್ಚಿಹೋಗಿದ್ದ ಚಿನ್ಮಳ್ಳಿ – ಕಲ್ಲೂರ ಬ್ರಿಜ್‌ ಕಂ ಬ್ಯಾರೇಜ್ ಅನ್ನು ₹ 4.97 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಇದರಲ್ಲಿ ವಾಹನ ಸಂಚಾರ ಪುನರಾರಂಭವಾಗಿದೆ.

ವಿಜಯಪುರ ಜಿಲ್ಲೆಗೆ ಮತ್ತು ಜೇವರ್ಗಿ ತಾಲ್ಲೂಕಿಗೆ ಸಂಚರಿಸಲು ಅನುಕೂಲವಾಗಿದೆ. ಇದರೊಂದಿಗೆ ಈ ಭಾಗದ 20 ಗ್ರಾಮಗಳಿಗೆ ಕಾಡುತ್ತಿದ್ದ ದೊಡ್ಡ ಸಮಸ್ಯೆ ಮೂರು ವರ್ಷಗಳ ನಂತರ ನಿವಾರಣೆಯಾಗಿದೆ.

ಪ್ರವಾಹದಲ್ಲಿ ಭೀಮಾ ನದಿ ದಡದ ಸುಮಾರು 100 ಎಕರೆಗಿಂತಲೂ ಹೆಚ್ಚು ಭೂಮಿ ಕೊಚ್ಚಿಕೊಂಡು ಹೋಗಿದೆ. ಇದರ ಜೊತೆಯಲ್ಲಿ ಬೆಳೆಯೂ ಹಾಳಾಗಿತ್ತು. ಪರಿಹಾರಕ್ಕಾಗಿ ರೈತರು ಕಚೇರಿಗಳಿಗೆ ಎಡತಾಕಿದರೂ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಹೇಳುತ್ತಾರೆ ಈ ಭಾಗದ ತಾಲ್ಲೂಕು ಪಂಚಾಯಿತಿ ಸದಸ್ಯ ಗುರಣ್ಣ ಜಮಾದಾರ.

ಬ್ಯಾರೇಜ್‌ ಭಾಗಶಃ ಕೊಚ್ಚಿ ಹೋಗಿದ್ದರಿಂದ ಮೂರು ವರ್ಷಗಳಿಂದ ಈ ಭಾಗದ ರೈತರು ಕಬ್ಬು ಬೆಳೆಯುವುದನ್ನೇ ಬಿಟ್ಟಿದ್ದರು ಎಂದು ಬಂದರವಾಡದ ರೈತರಾದ ಲಕ್ಷ್ಮಣ ಕಟ್ಟಿಮನಿ, ಚಿನ್ಮಳ್ಳಿ ರೈತರಾದ ಶರಣು ತಳಕೇರಿ ತಿಳಿಸಿದರು.

ಈಗ ಬ್ಯಾರೇಜ್‌ ದುರಸ್ತಿ ಆಗಿರುವುದರಿಂದ ಭೀಮಾ ನದಿ ದಡದ ಹಸರಗುಂಡಗಿ, ಕಿರಸಾವಳಗಿ, ತೆಗ್ಗೆಳ್ಳಿ, ಟಾಕಳಿ, ಉಮರ್ಗಾ, ಬಂದರವಾಡ, ದೇವಲಗಾಣಗಾಪುರದವರೆಗೆ ಮತ್ತು ಜೇವರ್ಗಿ ತಾಲ್ಲೂಕಿನ ಕಲ್ಲೂರ(ಬಿ), ಕಲ್ಲೂರ(ಕೆ) ಹೀಗೆ 20 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಿದೆ.

ಕಿತ್ತುಹೋದ ಸೇತುವೆಯನ್ನು ಪೂರ್ತಿ ಸರಿಪಡಿಸುವ ಕೆಲಸ ಇನ್ನೂ ಆಗಿಲ್ಲ. ಉಳಿದಿರುವ ಕಾಮಗಾರಿಯನ್ನು ಬೇಗ ಮುಗಿಸಬೇಕು. ಮತ್ತೆ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುವ ಸಂಭವ ಇರುತ್ತದೆ. ಅದಕ್ಕಾಗಿ ಯಾವಾಗಲೂ ಬ್ಯಾರೇಜ್‌ನ ಗೇಟ್‌ ತೆರೆದಿರಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳಪ್ಪ ಪೂಜಾರಿ, ನಾಗರಾಜ ಮೇಳಕುಂದಿ ಹಾಗೂ ಮುಖಂಡರಾದ ರೆಹಮಾನ್ ಪಟೇಲ ಹಾಗೂ ಶಿವು ಬೆಳಗುಂಪಿ ತಿಳಿಸಿದರು.

‘ಬ್ರಿಜ್‌ ಕಂ ಬ್ಯಾರೇಜ್‌ ಮೇಲೆ ತಾತ್ಕಾಲಿಕವಾಗಿ ಸಂಚಾರ ಆರಂಭಿಸಿದ್ದೇವೆ. ಮುಖ್ಯ ಕೆಲಸ ಮುಗಿದಿದೆ. ಸಣ್ಣ ಪುಟ್ಟ ಕೆಲಸಗಳಿವೆ. ಅದನ್ನು ತಿಂಗಳಲ್ಲಿ ಮುಗಿಸುತ್ತೇವೆ. ಜನ, ವಾಹನ ಸಂಚಾರಕ್ಕೆ ಯಾವ ತೊಂದರೆಯೂ ಇಲ್ಲ’ ಎಂದು ಕೆಬಿಜೆನಲ್ ಎಇಇ ಆನಂದ ಕುಂಬಾರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT