ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಂಧನ, ಬಿಡುಗಡೆ

ರೌಡಿ ಶೀಟರ್ ಅಶ್ವಥರಾಮ ರಾಠೋಡ ನ್ಯಾಯಾಂಗ ಬಂಧನಕ್ಕೆ
Published 15 ಜುಲೈ 2023, 7:53 IST
Last Updated 15 ಜುಲೈ 2023, 7:53 IST
ಅಕ್ಷರ ಗಾತ್ರ

ಚಿತ್ತಾಪುರ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಅಶ್ವಥರಾಮ ತುಕಾರಾಮ ರಾಠೋಡ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಬಂಧಿಸಿದ್ದ ಪೊಲೀಸರು ನಂತರ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಠೋಡ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳಡಿ ವಶಕ್ಕೆ ಪಡೆದ ಪೊಲೀಸ್ ಅಧಿಕಾರಿಗಳು ತೀವ್ರ ವಿಚಾರಣೆ ನಂತರ ಠಾಣೆಯಲ್ಲಿಯೇ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಣಿಕಂಠ ರಾಠೋಡ ಅವರದ್ದೆನ್ನಲಾದ ‘ಖರ್ಗೆ ಮತ್ತು ಅವರ ಹೆಂಡರು ಮಕ್ಕಳನ್ನು ಸಾಫ್ ಮಾಡ್ತೀನಿ’ ಎಂಬ ಹೇಳಿರುವ ಆಡಿಯೊ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಿಡುಗಡೆ ಮಾಡಿ, ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದರು. ಈ ಬೆಳವಣಿಗೆಯಿಂದ ಚಿತ್ತಾಪುರ ಚುನಾವಣಾಧಿಕಾರಿ ಸೂಚನೆಯ ಮೇರೆಗೆ ಚಿತ್ತಾಪುರ ಠಾಣೆಯಲ್ಲಿ ಮಣಿಕಂಠ ವಿರುದ್ಧ ಎಫ್ಐಆರ್ ದಾಖಲಾಗಿತ್ತು‌. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪೊಲೀಸರು ಮಣಿಕಂಠ ಧ್ವನಿ ಮಾದರಿ ಸಂಗ್ರಹ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಶ್ವಥರಾಮ ವಿರುದ್ಧ ಕಲಂ 107ರಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ್ದರಿಂದ ಅವರನ್ನು ಬಂಧಿಸಿದ ಪೊಲೀಸರು ತಾಲ್ಲೂಕು ದಂಡಾಧಿಕಾರಿ ಸೈಯದ್ ಷಾಷಾವಲಿ ಅವರ ಮುಂದೆ ಹಾಜರು ಪಡಿಸಿದರು. ಅಶ್ವಥರಾಮನನ್ನು ಏಳು ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಹಶೀಲ್ದಾರ್ ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪದ ಬೆನ್ನಲ್ಲೆ ಬಂಧನ: ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈಗೊಂಬೆಯಾಗಿರುವ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಅಶ್ವಥರಾಮ ರಾಠೋಡ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದ. ಅದರ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆಗಿಳಿದು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT