ಗುರುವಾರ , ಏಪ್ರಿಲ್ 22, 2021
30 °C
ಗ್ರಾಮೀಣ ಭಾಗದ ರೈತರಿಂದ ನೇರ ಮಾರಾಟ; ಶನಿವಾರ ಸಂತೆಯಲ್ಲಿ ಎಲ್ಲವೂ ಸಸ್ತಾ!

ಕಲಬುರ್ಗಿ: ಕೋಳಿ ಸಂತೆ ಎಂಬ ವರ್ಣಮಯ ಬಜಾರ್!

ರಾಮಮೂರ್ತಿ ಪಿ. Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಾಟಿಕೋಳಿಗಳ ಹಿಂಡು, ಮಣ್ಣಿನ ಮಡಕೆ, ವರ್ಣರಂಜಿತ ಸೆಕೆಂಡ್ ಹ್ಯಾಂಡ್‌ ಬಟ್ಟೆಗಳ ರಾಶಿ, ಪಾರಿವಾಳ, ಲವ್‌ಬರ್ಡ್ಸ್‌, ಕಾಕ್‌ಟೇಲ್ ಪಕ್ಷಿಗಳ ಕಲರವ, ಒಣ ಮೀನಿನ ಘಮ, ಸಿಂದಿ, ಬಿದಿರು ಬುಟ್ಟಿಗಳು, ಆಕರ್ಷಕ ಕಟ್ಟಿಗೆ ಮಂಚಗಳು..

ನಗರದ ಬಹಮನಿ ಕೋಟೆ ಮುಂಭಾಗದಲ್ಲಿ ಪ್ರತಿ ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೆ ಕಂಡುಬರುವ ಕಲರ್‌ಫುಲ್ ಮಿನಿ ಜಗತ್ತು ಇದು. ಕೋಳಿ ಸಂತೆ ಎಂದೇ ಖ್ಯಾತಿಯಾಗಿರುವ ಶನಿವಾರ ಸಂತೆ ಬಡಜನರ ಪಾಲಿನ ಮೆಚ್ಚಿನ ಬಜಾರ್‌ ಎಂದು ಗುರುತಿಸಿಕೊಂಡಿದೆ.

ಕೋಟೆ ಮುಂಭಾಗ ಹಾಗೂ ಮಾರ್ಕೆಟ್ ಅಂಚೆ ಕಚೇರಿ ರಸ್ತೆಯಲ್ಲಿ ನಡೆಯುವ ಈ ಸಂತೆಯಲ್ಲಿ ನಗರದ ಬೇರೆ ಯಾವ ಮಾರುಕಟ್ಟೆಗಳಲ್ಲೂ ಸಿಗದ ವಿಶೇಷ ಸಾಮಗ್ರಿಗಳು, ಪ್ರಾಣಿ– ಪಕ್ಷಿಗಳು ಇಲ್ಲಿ ದೊರೆಯುತ್ತವೆ. ಅದು ಕೂಡ ಕಡಿಮೆ ಬೆಲೆಗೆ. ಬೇರೆ ಮಾರುಕಟ್ಟೆಗಳಲ್ಲಿ ತರಕಾರಿ ಮಾರಾಟವೇ ಮುಖ್ಯವಾದರೆ, ಇಲ್ಲಿ ಮಾತ್ರ ಅದಕ್ಕೆ ತದ್ವಿರುದ್ಧ. ಅಲ್ಲೊಂದು ಇಲ್ಲೊಂದು ಮಾತ್ರವೇ ತರಕಾರಿ ಅಂಗಡಿಗಳು ಕಾಣುತ್ತವೆ.

ಬೆಳಿಗ್ಗೆ 6ರಿಂದ  ಈ ಕೋಳಿ ಸಂತೆಯಲ್ಲಿ ಚಟುವಟಿಕೆ ಶುರುವಾಗುತ್ತದೆ. ಗ್ರಾಮೀಣ ಭಾಗದಿಂದ ವ್ಯಾಪಾರಿಗಳು ಆಟೊ, ಬೈಕ್‌ಗಳಲ್ಲಿ ನಾಟಿ ಕೋಳಿ, ಬಿದಿರು ಬುಟ್ಟಿ, ಮಡಕೆ, ಬಟ್ಟೆಗಳ ರಾಶಿ, ಕಂಬಳಿ ಮುಂತಾದ ಸಾಮಗ್ರಿಗಳ ಸಮೇತ ತಮ್ಮ ಕಾಯಂ ಜಾಗಕ್ಕೆ ಬರುತ್ತಾರೆ.

ಸೈಕಲ್‌ವಾಲನ ಟೀ, ಕಾಫಿ ಕುಡಿದು ವ್ಯಾಪಾರಕ್ಕೆ ಸಜ್ಜಾಗುತ್ತಾರೆ. ನಿಧಾನಗತಿಯಲ್ಲಿ ಶುರುವಾಗುವ ವ್ಯಾಪಾರ ಬೆಳಿಗ್ಗೆ 10ರಿಂದ ಜೋರಾಗುತ್ತೆ. ಸಂಜೆ 4ರವರೆಗೂ ನಡೆಯುವ ವ್ಯಾಪಾರ ಮುಗಿಸಿ ಉಳಿದ ಸಾಮಗ್ರಿಗಳನ್ನು ಕೆಲವರು ಆಟೊ, ಬೈಕ್‌ಗಳಲ್ಲಿ ಒಯ್ಯುತ್ತಾರೆ. ಇನ್ನೂ ಕೆಲವರು ನೆಂಟರು, ಪರಿಚಯಸ್ಥರ ಮನೆಗಳಲ್ಲಿ ಇಟ್ಟು ಮುಂದಿನ ವಾರ ಬರುವುದಾಗಿ ಹೇಳಿ ತಮ್ಮ ಊರಿನ ಹಾದಿ ಹಿಡಿಯುತ್ತಾರೆ.

ನಾಟಿ ಕೋಳಿ ಮಾರಾಟಕ್ಕೆ ಪ್ರಸಿದ್ಧ

ಶನಿವಾರ ಸಂತೆಯಲ್ಲಿ ಕೋಳಿ ಮಾರಾಟಕ್ಕೆ ಹೆಸರುವಾಸಿ. ನಾಟಿ ಕೋಳಿ ಹಾಗೂ ಅವುಗಳ ಮೊಟ್ಟೆಗಳ ಮಾರಾಟ ಅತಿ ಹೆಚ್ಚಾಗಿ ನಡೆಯುತ್ತದೆ. ಹೀಗಾಗಿಯೇ ಈ ಸಂತೆಯನ್ನು ಕೋಳಿ ಸಂತೆ ಎಂದು ಕರೆಯುತ್ತಾರೆ. ಗ್ರಾಮೀಣ ಭಾಗದ ರೈತರು ಮನೆ, ಫಾರ್ಮ್‌ಗಳಲ್ಲಿ ಸಾಕಿದ ನಾಟಿ ಕೋಳಿಗಳನ್ನು ಇಲ್ಲಿಗೆ ತಂದು ನೇರವಾಗಿ ಮಾರಾಟ ಮಾಡುವುದರಿಂದ ಅವರಿಗೂ ಉತ್ತಮ ಲಾಭ ಸಿಗುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದ ಕಾರಣ ಖರೀದಿದಾರರೂ ಬೇರೆ ಮಾರುಕಟ್ಟೆಗಳಿಗಿಂತ ಇಲ್ಲಿ ಕಡಿಮೆ ದರದಲ್ಲಿ ಕೋಳಿ ಖರೀದಿಸುತ್ತಾರೆ.

‘ಚಿತ್ರದುರ್ಗ, ಮಹಾರಾಷ್ಟ್ರದ ಅಹಮದ್‌ನಗರದಿದ ನಾಟಿ ಕೋಳಿಮರಿಗಳನ್ನು (ಒಂದು ಮರಿಗೆ ₹28) ತಂದು 4 ತಿಂಗಳು ಫಾರ್ಮ್‌ನಲ್ಲಿ ಸಾಕುತ್ತೇವೆ. ಶನಿವಾರ ಸಂತೆ, ಶಹಾಪುರ ಸಂತೆ, ಯಡ್ರಾಮಿ ಸಂತೆಗಳಲ್ಲಿ ₹ 300 ರಿಂದ ₹500 ರವರೆಗೆ ಒಂದು ಕೋಳಿ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಜೇವರ್ಗಿಯ ಬಂದಿದ್ದ ಕೋಳಿ ಮಾರಾಟಗಾರ ಫಿರೋಜ್.

ಮೂಲಸೌಕರ್ಯ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು

‘ಇಲ್ಲಿ 30–40 ವರ್ಷಗಳಿಂದ ಸಂತೆ ನಡೆಯುತ್ತಿದೆ. ಆದರೆ ಕನಿಷ್ಠ ಮೂಲಸೌಕರ್ಯ ಇಲ್ಲ. ಕುಡಿಯಲು ನೀರಿಲ್ಲ, ಶೌಚಾಲಯ ಇಲ್ಲ. ಬೇಸಿಗೆಯ ಸುಡುಬಿಸಿಲಿನಲ್ಲಿ ನಿಂತು ವ್ಯಾಪಾರ ಮಾಡುವುದು ಕಷ್ಟವಾಗುತ್ತಿದೆ. ನೆರಳಿನ ಆಸರೆ ಬೇಕು. ನಾವು ವ್ಯಾಪಾರಿಗಳು ಅಸಂಘಟಿತರು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿದರೆ ಸಹಾಯವಾಗಲಿದೆ’ ಎನ್ನುತ್ತಾರೆ ವ್ಯಾಪಾರಿಗಳು.

‘ಸೆಕೆಂಡ್ ಹ್ಯಾಂಡ್‌’ ಬಟ್ಟೆಗಳ ರಾಶಿ

ಶನಿವಾರ ಸಂತೆಯಲ್ಲಿ ಎಲ್ಲೆಲ್ಲೂ ಸೆಕೆಂಡ್‌ ಹ್ಯಾಂಡ್ (ಒಮ್ಮೆ ಬಳಸಿದ) ಬಟ್ಟೆಗಳ ರಾಶಿಯೇ ಕಾಣುತ್ತೆ. ಮಕ್ಕಳು, ಮಹಿಳೆಯರು, ಯುವಕ, ಯುವತಿಯರ ಬಟ್ಟೆಗಳು ಕಡಿಮೆ ಬೆಲೆಗೆ ದೊರೆಯುತ್ತವೆ.

‘ನಗರದಲ್ಲಿ ಪಾತ್ರೆ ಸಾಮಾನು ಮಾರಿ ಹಳೆ ಬಟ್ಟೆಗಳನ್ನು ಖರೀದಿಸುತ್ತೇವೆ. ಅವುಗಳನ್ನು ಸ್ವಚ್ಛಗೊಳಿಸಿ ತಂದು ಇಲ್ಲಿ ಮಾರುತ್ತೇವೆ. ₹10 ರಿಂದ ₹ 50 ರವರೆಗೆ ಬಟ್ಟೆಗಳನ್ನು ಮಾರುತ್ತೇವೆ. ಹೊಲಗಳಲ್ಲಿ ಬೆಳೆಗಳ ರಕ್ಷಣೆಗೆ ರೈತರು ಇಲ್ಲಿನ ಸೀರೆಗಳನ್ನು ಹೆಚ್ಚಾಗಿ ಕೊಂಡೊಯ್ಯುತ್ತಾರೆ’ ಎನ್ನುತ್ತಾರೆ ಬಟ್ಟೆ ವ್ಯಾಪಾರಿಗಳಾದ ಸುನೀತಾ ಹಾಗೂ ರುಕ್ಮಿಣಿಬಾಯಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು