ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರ್, ಮುಸಲೋನಿ ಇದ್ದಂತೆ ಮೋದಿ, ಶಾ: ಮಲ್ಲಿಕಾರ್ಜುನ ಖರ್ಗೆ

Last Updated 30 ಜನವರಿ 2020, 10:46 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರಧಾನಿ ನರೇಂದ್ರ ‌ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರು ಅಡಾಲ್ಫ್ ಹಿಟ್ಲರ್, ಮುಸಲೋನಿ ಇದ್ದಂತೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಛೇಡಿಸಿದರು.

ನಗರದ ಜಗತ್ ವೃತ್ತದಲ್ಲಿ ಜಿಲ್ಲಾ‌ ಕಾಂಗ್ರೆಸ್ ‌ಸಮಿತಿ ವತಿಯಿಂದ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಿನ ಬೆಳಗಾದರೆ ಮೋದಿ ಪಾಕಿಸ್ತಾನದ ‌ಜಪ ಮಾಡುತ್ತಾರೆ. ಸಿಎಎ, ಎನ್ಆರ್‌ಸಿ, ಎನ್‌ಪಿಆರ್ ಜಾರಿಗೆ ತರುವ ಮೂಲಕ ದೇಶದ ಜನರಲ್ಲಿ ಅಭದ್ರತೆಯ ಭಾವನೆ ಉಂಟು ಮಾಡುತ್ತಿದ್ದಾರೆ ಎಂದು ತಮ್ಮ ಹೋಲಿಕೆಗೆ ಸಮರ್ಥನೆ ಕೊಟ್ಟರು.

ಕಾಂಗ್ರೆಸ್ ‌65 ವರ್ಷ ದೇಶವನ್ನಾಳಿದೆ. ಎಂದಿಗೂ ದೇಶದ ಜನರಿಗೆ ತೊಂದರೆ ಕೊಡಲಿಲ್ಲ. ಮೋದಿ-ಶಾ ಸರ್ವಾಧಿಕಾರಿ ಧೋರಣೆಯಿಂದಾಗಿ ದೇಶ ದಿವಾಳಿಯಾಗುವತ್ತಸಾಗುತ್ತಿದೆ. ದೇಶದ ಜನರಿಗೆ ಅನುಕೂಲವಾಗಲಿ ಎಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಏರ್ ಇಂಡಿಯಾ ಸಂಸ್ಥೆಯನ್ನು ಸಾರ್ವಜನಿಕ ‌ಸಂಸ್ಥೆಯನ್ನಾಗಿಸಿದ್ದರು. ಆದರೆ ಮೋದಿ ಇಂದು ಆ ವಿಮಾನಯಾನ ‌ಸಂಸ್ಥೆಯನ್ನೇ ಮುಗಿಸಲು ಹೊರಟಿದ್ದಾರೆ ಎಂದರು.

ನನ್ನ ಸೋಲು ಪ್ರಧಾನಿ ಬಾಯಿಂದ ಬಂತು: ಸದನದಲ್ಲಿ ‌ಪ್ರಧಾನಿ ಮೋದಿ ಅವರ ವಿಚಾರಗಳನ್ನು ‌ಪ್ರಶ್ನಿಸುತ್ತಿದ್ದೆ. ಅದಕ್ಕಾಗಿಯೇ ಪ್ರಧಾನಿ ಹುದ್ದೆಯಲ್ಲಿದ್ದ ಮೋದಿ ಅವರು ಮುಂದಿನ ಸದನದಲ್ಲಿ ನೀವು ‌ಇರುವುದಿಲ್ಲ ಎಂದಿದ್ದರು. ಅವರು ನನ್ನನ್ನು ಸೋಲಿಸಿರಬಹುದು. ಆದರೆ ನಾನು ನಂಬಿದ ಗಾಂಧಿ‌ ಮಾರ್ಗದ ತತ್ವವನ್ನು ಬಿಡುವುದಿಲ್ಲ. ನಾನು ಮೊದಲ ಬಾರಿ ಸೋತಿದ್ದೇನೆ. ಅದಕ್ಕೆ ನನಗೆ ಬೇಸರವಿಲ್ಲ. ಆದರೆ, ಮೋದಿ-ಶಾ ಜೋಡಿ ಸಂವಿಧಾನವನ್ನು ‌ಮುಗಿಸಲು ಹೊರಟಿದೆ. ಅದಕ್ಕೆ ಬೇಸರವಿದೆ ಎಂದು ಭಾವುಕರಾದರು.

ಯಥಾಸ್ಥಿತಿ ವಾದವನ್ನು ಒಪ್ಪುವ ಇಂತಹ ಕೆಟ್ಟ ಸರ್ಕಾರ ಇರಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT