ಮಂಗಳವಾರ, ಜನವರಿ 18, 2022
23 °C

ಪರಿಷತ್ ಚುನಾವಣೆ ಬಳಿಕ ಕಾಂಗ್ರೆಸ್ ದುರ್ಬಲ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ವಿಧಾನಪರಿಷತ್ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಇನ್ನಷ್ಟು ದುರ್ಬಲವಾಗಲಿದೆ. ಜೆಡಿಎಸ್ ಗಿಂತಲೂ‌ ಕಡಿಮೆ ಸ್ಥಾನ ಪಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ 15ರಿಂದ 16 ಸ್ಥಾನಗಳನ್ನು ಗೆಲ್ಲಲಿದೆ. ನಂತರ ಪರಿಷತ್‌ನಲ್ಲಿ ಕಾಂಗ್ರೆಸ್ ಶಕ್ತಿ ಕಡಿಮೆಯಾಗಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಆರ್. ಪಾಟೀಲ ಅವರಿಗೆ ಟಿಕೆಟ್ ನಿರಾಕರಿಸಿ ಏನನ್ನು ಹೇಳಲು ಹೊರಟಿದೆ ಎಂಬುದೇ ಗೊತ್ತಾಗುತ್ತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಲವು ‌ಅಭ್ಯರ್ಥಿಗಳು ಯಾರಿಗೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಮೋಸಗಾರ: ಸಿದ್ದರಾಮಯ್ಯ ಬಹುದೊಡ್ಡ ಮೋಸಗಾರ. ಸ್ಥಾನಮಾನ ಸಿಗದಿದ್ದರೆ ಕಾಂಗ್ರೆಸ್‌ನಲ್ಲಿಯೂ ಇರುವುದಿಲ್ಲ. ಜೆಡಿಎಸ್‌ಗೆ ಮೋಸ ಮಾಡಿ ಬಂದಿದ್ದಾರೆ. ಮುಂದೆ ಅವರಿಗೆ ಸ್ಥಾನ ನೀಡದಿದ್ದರೆ ಮತ್ತೆ ಪಕ್ಷ ಬದಲಾಯಿಸುತ್ತಾರೆ ಎಂದರು.

ಸಿದ್ದರಾಮಯ್ಯ ಅವರಂತಹ ದೊಡ್ಡ ಜಾತಿವಾದಿ ಯಾರೂ ಇಲ್ಲ. ಕಳೆದ ಬಾರಿ ವೀರಶೈವ-ಲಿಂಗಾಯತರ ಮಧ್ಯೆ ಒಡಕುಂಟು ಮಾಡಿ ಜಗಳ ಹಚ್ಚಿ ಧರ್ಮ ಒಡೆಯಲು ನೋಡಿದರು. ನಳಿನ್ ಕುಮಾರ್ ಕಟೀಲ್ ಅವರಂತಹ ಸಜ್ಜನ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ. ಜೊತೆಗೆ ಜಮೀರ್ ಅಹ್ಮದ್ ಅಂಥವರನ್ನು ಜೊತೆಯಲ್ಲಿಟ್ಟುಕೊಳ್ಳುತ್ತಾರೆ. ಶ್ರೀಮಂತ ಕುಳಗಳನ್ನು ಆರಿಸಿ ಟಿಕೆಟ್ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಪೆದ್ದ ಎನ್ನುತ್ತಾರೆ. ಅವರಿಗೆ ಪೆದ್ದ ಎನ್ನಬೇಕೇ, ದಡ್ಡ ಎನ್ನಬೇಕೇ ಎಂದು ಪ್ರಶ್ನಿಸಿದರು.

ರಾಜ್ಯದ ಜನ ಸುಶಿಕ್ಷಿತರು, ಎಚ್ಚರಿಕೆ ಉಳ್ಳವರಾಗಿದ್ದು, ಕೋವಿಡ್ ನಿಂದ ರಕ್ಷಣೆ ಪಡೆಯಲು ‌ಅಗತ್ಯ ಮುನ್ನೆಚ್ಚರಿಕೆ ವಹಿಸುತ್ತಾರೆ. ಹಾಗಾಗಿ ಲಾಕ್ ಡೌನ್ ಅಗತ್ಯ ಬೀಳಲಿಕ್ಕಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು