ಶುಕ್ರವಾರ, ಮೇ 14, 2021
32 °C
ಟೆಂಡರ್‌ ರದ್ದುಪಡಿಸಿ ಮರು ಟೆಂಡರ್‌ ಕರೆಯಲು ಅರ್ಜುನ್ ಭದ್ರೆ ಒತ್ತಾಯ

ಕಡಿಮೆ ಬೆಲೆಯ ಹೊಲಿಗೆ ಯಂತ್ರಕ್ಕೆ ದುಬಾರಿ ದರ: ಅರ್ಜುನ್ ಭದ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಪ್ರತಿ ಜಿಲ್ಲೆಗೆ ಹೊಲಿಗೆ ಯಂತ್ರಗಳ ಖರೀದಿಗಾಗಿ ತಲಾ ₹ 1 ಕೋಟಿ ಟೆಂಡರ್ ಕರೆಯಲಾಗಿತ್ತು. ಆದರೆ ಕಡಿಮೆ ಬೆಲೆಯ ಹೊಲಿಗೆ ಯಂತ್ರಗಳಿಗೆ ದುಬಾರಿ ದರ ನೀಡಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ದೂರುಗಳು ಬಂದಿವೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಅರ್ಜುನ್‌ ಭದ್ರೆ ದೂರಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪ್ಲಾಸ್ಟಿಕ್ ಸಾಮಾನುಗಳನ್ನು ಸರಬರಾಜು ಮಾಡಲು ₹ 2 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿತ್ತು. ನಿಗದಿತ ಮೊತ್ತಕ್ಕಿಂತ ದುಬಾರಿ ಬೆಲೆಗೆ ಆಟಿಕೆಯ ಸಾಮಾನುಗಳನ್ನು ಖರೀದಿಸುವ ಮೂಲಕ ಅನುದಾನ ದುರ್ಬಳಕೆ ಮಾಡಲಾಗಿದೆ’ ಎಂದರು.

ಕೆಕೆಆರ್‌ಡಿಬಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಈ ಎರಡು ಸಂಸ್ಥೆಗಳು ಬಲಾಢ್ಯ ಸಮುದಾಯಗಳ ಹಿಡಿತದಲ್ಲಿದ್ದು, ತಳಸಮುದಾಯಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ, ಸಾಂಸ್ಕೃತಿಕ ಸಂಘದವರು ಹೊಲಿಗೆ ಯಂತ್ರಗಳ ಟೆಂಡರ್ ಅನ್ನು ರದ್ದುಪಡಿಸಿ, ಕೂಡಲೇ ಹೊಸದಾಗಿ ಟೆಂಡರ್ ಕರೆಯಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಟೆಂಡರ್ ರದ್ದುಪಡಿಸದಿದ್ದರೆ ಸಂಘದ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ 381 ಅನಧಿಕೃತ ಬಡಾವಣೆಗಳಿವೆ ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ಸುನೀಲ್ ವಲ್ಲ್ಯಾಪುರೆ ಎತ್ತಿದ ಪ್ರಶ್ನೆಗೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಲಬುರ್ಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಮನ್ನಾ ಹಣ ದುರ್ಬಳಕೆ ಆಗಿತ್ತು. ಈ ವಿಷಯದಲ್ಲಿ ಇದುವರೆಗೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ನೀಡಿದ ಅನುದಾನ ಭ್ರಷ್ಟರ ಪಾಲಾಗುತ್ತಿದೆ ಎಂದರು.

ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ಕಪೀಲ್ ಸಿಂಗೆ, ಅಜೀಜಸಾಬ ಐಕೂರ ಇದ್ದರು.

‘ಇನ್ನೂ ಆದೇಶವೇ ಆಗಿಲ್ಲ’

ಹೊಲಿಗೆ ಯಂತ್ರವಾಗಲಿ, ಅಂಗನವಾಡಿಗಳಿಗೆ ಆಟಿಕೆಗಳ ಖರೀದಿಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಆದೇಶ ನೀಡಿಲ್ಲ. ಅಲ್ಲದೇ, ಇವುಗಳನ್ನು ತಜ್ಞರಿರುವ ತಾಂತ್ರಿಕ ಸಮಿತಿ ಪರಿಶೀಲಿಸಿ ಟೆಂಡರ್‌ ಅಂತಿಮಗೊಳಿಸುತ್ತದೆ. ಹೀಗಾಗಿ, ಯಾವುದೇ ಬಗೆಯ ಅವ್ಯವಹಾರ, ಭ್ರಷ್ಟಾಚಾರ ನಡೆಸಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸಂಘದ ವತಿಯಿಂದ ವಿಸ್ತೃತ ಮಾಹಿತಿ ನೀಡಲಿದ್ದೇವೆ ಎಂದು ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗಳ್ಳಿ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು