ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿಗೆ ಕುತ್ತು; ತೊಗರಿ ಬಿತ್ತನೆಗೆ ಒತ್ತು

ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್‌ನಷ್ಟು ಹೆಚ್ಚು ಪ್ರದೇಶದಲ್ಲಿ ತೊಗರಿ ಬಿತ್ತನೆ ನಿರೀಕ್ಷೆ
Last Updated 19 ಜುಲೈ 2018, 12:03 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ರೈತರು ಈ ವರ್ಷ ತೊಗರಿಯತ್ತ ವಾಲುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡುತ್ತಿದ್ದಾರೆ.

ಹಿಂದಿನ ಹಂಗಾಮಿನಲ್ಲಿ ಬೆಳೆದ ತೊಗರಿಯನ್ನು ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಒಟ್ಟಾರೆ ₹6 ಸಾವಿರ ದರ ನೀಡಿ ಖರೀದಿಸಿತ್ತು. ಇದು ಉತ್ತಮ ಬೆಲೆಯಾಗಿದ್ದು, ತೊಗರಿ ಬೆಳೆದರೆ ಸ್ವಲ್ಪ ಮಟ್ಟಿನ ಆದಾಯ ಪಡೆಯಬಹುದು ಎಂಬುದು ಬಹುಪಾಲು ಸಣ್ಣ ಮತ್ತು ಮಧ್ಯಮ ರೈತರ ಲೆಕ್ಕಾಚಾರ.

ಜೇವರ್ಗಿ ತಾಲ್ಲೂಕಿನಲ್ಲಿ ಕಪ್ಪು ಮಣ್ಣಿನ ಜಮೀನು ಇದೆ. ಅಲ್ಲಿ ಬೆಳೆಯುವ ಹತ್ತಿ ಶುಭ್ರವಾಗಿರುತ್ತಿದ್ದು, ಅದಕ್ಕೆ ಬಲು ಬೇಡಿಕೆ ಇದೆ. ಆದರೆ, ಹತ್ತಿ ಬಿಡಿಸುವುದು ರೈತರ ಪಾಲಿಗೆ ಕಷ್ಟಕರವಾಗುತ್ತಿದೆ. ಹೀಗಾಗಿ ಅಲ್ಲಿಯ ರೈತರು ತೊಗರಿ ಬಿತ್ತನೆಯಲ್ಲಿ ತೊಡಗಿದ್ದಾರೆ.

‘ಜೇವರ್ಗಿ ತಾಲ್ಲೂಕಿನ ಜೇವರ್ಗಿ ಮತ್ತು ಆಂದೋಲ ಹೋಬಳಿ, ಕಲಬುರ್ಗಿ ತಾಲ್ಲೂಕಿನ ಫರಹತಾಬಾದ್‌ ಹೋಬಳಿಯಲ್ಲಿ ಮಳೆಯ ಕೊರತೆ ಇರುವುದೂ ಹತ್ತಿ ಬಿತ್ತನೆಯ ಹಿನ್ನಡೆಗೆ ಕಾರಣ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ತೊಗರಿ ಬಿತ್ತನೆಗೆ ಜುಲೈ 31ರ ವರೆಗೆ ಅವಕಾಶ ಇದೆ. ಈಗ ಒಂದು ವಾರದಿಂದ ಆಗಿರುವ ಮಳೆ ಬಿತ್ತನೆಗೆ ಬೇಕಿರುವಷ್ಟು ಭೂಮಿಯನ್ನು ಹಸಿ ಮಾಡಿದೆ. ಹೀಗಾಗಿ ಈಗ ಬಿತ್ತನೆ ಕಾರ್ಯ ಭರದಿಂದ ಸಾಗಿದೆ’ ಎನ್ನುತ್ತಾರೆ ರೈತರು.

ಬೆಲೆ ಕುಸಿತದ ಭೀತಿ: ಬಿತ್ತನೆ ಹೆಚ್ಚಾದರೆ ಉತ್ಪಾದನೆಯೂ ಹೆಚ್ಚಾಗುತ್ತದೆ. ಆಗ ಬೇಡಿಕೆ ಕಡಿಮೆಯಾಗಿ ದರ ಕುಸಿಯುವುದು ಸ್ವಾಭಾವಿಕ.

ಈ ಮಾತನ್ನು ಕರ್ನಾಟಕ ರಾಜ್ಯ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ ಸಹ ಒಪ್ಪುತ್ತಾರೆ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಿನಿಂದಲೇ ಕೆಲ ನೀತಿಗಳಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು ಎಂಬುದು ಅವರ ಸಲಹೆ.

‘ನಮಗೆ ಅವಶ್ಯವಿರುವಷ್ಟು ಬೇಳೆಕಾಳುಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದನೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ಬೇಳೆ ಮತ್ತು ಬೇಳೆಕಾಳು ರಫ್ತು ಮಾಡಲು ಅವಕಾಶ ಕಲ್ಪಿಸಿದೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ತೊಗರಿಗೆ ಮಾರುಕಟ್ಟೆ ಸೃಷ್ಟಿಯಾಗಬೇಕಿದೆ’ ಎನ್ನುತ್ತಾರೆ ಅವರು.

‘ಚೀನಾ ಮತ್ತು ಮೈನ್ಮಾರ್‌ನಿಂದ ಬೇಳೆಯನ್ನು ನೇಪಾಳ ಮತ್ತು ಭೂತಾನ ಮಾರ್ಗವಾಗಿ ಭಾರತಕ್ಕೆ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಕೇಂದ್ರ ಇದನ್ನು ತಡೆಗಟ್ಟಬೇಕು’ ಎಂದು ಅವರು ಹೇಳುತ್ತಾರೆ.

*
ಜಿಲ್ಲೆಯಲ್ಲಿ ರೈತರು ತೊಗರಿಯನ್ನು ಹೆಚ್ಚು ಬಿತ್ತನೆ ಮಾಡುತ್ತಿದ್ದಾರೆ. ಗುರಿಗಿಂತ 80 ಸಾವಿರ ಹೆಕ್ಟೇರ್‌ನಷ್ಟು ಹೆಚ್ಚಿನ ಕ್ಷೇತ್ರದಲ್ಲಿ ತೊಗರಿ ಬಿತ್ತನೆಯಾಗುವ ನಿರೀಕ್ಷೆ ಇದೆ.
–ಡಾ.ರಿತೇಂದ್ರನಾಥ ಸುಗೂರ, ಜಂಟಿ ಕೃಷಿ ನಿರ್ದೇಶಕ

***

‘ಹಾಲಿನಂತೆ ತೊಗರಿಯನ್ನೂ ಖರೀದಿಸಿ’
ಶಾಲಾ ಮಕ್ಕಳಿಗೆ ನೀಡುವ ಹಾಲನ್ನು ರಾಜ್ಯ ಸರ್ಕಾರ ಕೆಎಂಎಫ್‌ನಿಂದ ಖರೀದಿಸುತ್ತಿದೆ. ಆದರೆ, ಬಿಸಿಯೂಟಕ್ಕೆ ತಗಲುವ ಮತ್ತು ಪಡಿತರದಲ್ಲಿ ವಿತರಿಸುವ ತೊಗರಿ ಬೇಳೆಯನ್ನು ಟೆಂಡರ್‌ ಮೂಲಕ ಖರೀದಿಸುತ್ತಿದೆ. ತೊಗರಿ ಅಭಿವೃದ್ಧಿ ಮಂಡಳಿಯ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿಸುವ ತೊಗರಿಯನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ಒಪ್ಪಿಸುವ ಬದಲು ರಾಜ್ಯ ಸರ್ಕಾರವೇ ಅದನ್ನು ಖರೀದಿಸಬೇಕು. ಹೀಗಾದರೆ ನಮ್ಮಲ್ಲಿ ಬೆಳೆದ ತೊಗರಿಗೆ ಬೇಡಿಕೆ ಹೆಚ್ಚುತ್ತದೆ. ಮುಕ್ತ ಮಾರುಕಟ್ಟೆಯಲ್ಲಿಯೂ ಬೆಲೆ ಸ್ಥಿರವಾಗಿರಲು ಇದು ನೆರವಾಗುತ್ತದೆ.
–ಬಸವರಾಜ ಇಂಗಿನ,ಕರ್ನಾಟಕ ರಾಜ್ಯ ತೊಗರಿ ಬೆಳೆಗಾರರ ಸಂಘ ಅಧ್ಯಕ್ಷ

***

ಮುಂಗಾರು ಹಂಗಾಮಿನ ಮಾಹಿತಿ
6.73 ಲಕ್ಷ ಹೆಕ್ಟೇರ್‌ - ಒಟ್ಟು ಬಿತ್ತನೆ ಕ್ಷೇತ್ರ
4,75 ಲಕ್ಷ ಹೆಕ್ಟೇರ್‌ - ತೊಗತಿ ಬಿತ್ತನೆ ಗುರಿ
4 ಲಕ್ಷ ಹೆಕ್ಟೇರ್‌-ಈಗಾಗಲೇ ಬಿತ್ತನೆಯಾಗಿರುವ ತೊಗರಿ
70 ಲಕ್ಷ ಕ್ವಿಂಟಲ್‌ - ತೊಗರಿ ಉತ್ಪಾದನೆ ನಿರೀಕ್ಷೆ


ಕಳೆದ ಹಂಗಾಮಿನಲ್ಲಿ ಬೆಂಬಲ ಬೆಲೆಯಡಿ ತೊಗರಿ ಖರೀದಿ ಮಾಹಿತಿ
₹6 ಸಾವಿರ ಬೆಂಬಲ ಬೆಲೆ
₹13.59 ಲಕ್ಷ ಬೆಂಬಲ ಬೆಲೆಯಡಿ ಖರೀದಿಸಿದ್ದ ತೊಗರಿ
₹809 ಕೋಟಿ ಒಟ್ಟು ಖರೀದಿ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT