ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆಯೇ ರಸ್ತೆಗಿಳಿದ ಪೊಲೀಸರು: ಕಲಬುರ್ಗಿ ಜಿಲ್ಲೆಯ ಗಡಿಗಳಲ್ಲಿ ಚೆಕ್ ಪೋಸ್ಟ್

Last Updated 10 ಮೇ 2021, 5:38 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಸರ್ಕಾರ 14 ದಿನಗಳ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ಪೊಲೀಸರು ರಸ್ತೆಗಿಳಿದಿದ್ದು, ವಾಹನಗಳಲ್ಲಿ ಬಂದವರು ಸೂಕ್ತ ಸಮಜಾಯಿಷಿ ನೀಡದಿದ್ದಲ್ಲಿ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

ರೈಲು ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಸರ್ದಾರ್ ವಲ್ಲಭಭಾಯಿ ವೃತ್ತ, ಜಗತ್ ವೃತ್ತ ಹಾಗೂ ‌ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನಾಕಾ ಬಂದಿ ಮಾಡಲಾಗಿದೆ.

10 ಗಂಟೆಯ ಬಳಿಕ ಎಲ್ಲ ಅಂಗಡಿಗಳನ್ನು ‌ಬಂದ್ ಮಾಡಿಸಲಾಗಿದೆ.

ಟಿಕೆಟ್ ತೋರಿಸಿದರೂ ವಾಹನ ಜಪ್ತಿ: ರೈಲಿನ ಮೂಲಕ ಬಂದು ಬೈಕ್ ನಲ್ಲಿ ‌ಮನೆಗೆ ತೆರಳುವಾಗ ತಡೆದ ಪೊಲೀಸರು ಬೈಕ್ ಜಪ್ತಿ ಮಾಡಿದ್ದಾರೆ. ಟಿಕೆಟ್ ತೋರಿಸಿದರೆ ವಾಹನ ಬಿಡಬೇಕು ಎಂದು ಸರ್ಕಾರ ಸೂಚಿಸಿದೆ. ಆದರೂ ಬಿಡಲಿಲ್ಲ ಎಂದು ತಾರಫೈಲ್ ಬಡಾವಣೆಯ ಉದಯ್ ಬೇಸರ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ‌ದಾಖಲಾದ ರೋಗಿಗಳ ಸಹಾಯಕರು ರಸ್ತೆಯಲ್ಲಿ ಬಂದಾಗಲೂ ಅವರಿಗೆ ಆಸ್ಪತ್ರೆಯಿಂದ ನೀಡಲಾದ ಗುರುತಿನ ಚೀಟಿ ತೋರಿಸುವಂತೆ ಪೊಲೀಸರು ತಾಕೀತು ಮಾಡುತ್ತಿದ್ದಾರೆ.

'ಕಠಿಣ ‌ಲಾಕ್ ಡೌನ್ ಜಾರಿಗೊಳಿಸಲು ಪೊಲೀಸ್ ಮಹಾನಿರ್ದೇಶಕರು ಸೂಚಿಸಿದ್ದಾರೆ. ಹಾಗಾಗಿ, ಸೂಕ್ತ ದಾಖಲೆ ತೋರಿಸಲು ವಿಫಲರಾದವರನ್ನು ತಡೆದು ವಾಹನ ಜಪ್ತಿ ಮಾಡುತ್ತಿದ್ದೇವೆ' ಎಂದು ಪೊಲೀಸ್ ‌ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲಾ ಗಡಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಆಂಬುಲೆನ್ಸ್, ತುರ್ತು ಕಾರ್ಯನಿರ್ವಹಿಸುವ ಇಲಾಖೆಯ ಸಿಬ್ಬಂದಿಗೆ ಮಾತ್ರ ಜಿಲ್ಲೆಯ ಒಳಗೆ ಬರಲು ಅವಕಾಶ ‌ನೀಡಲಾಗುತ್ತಿದೆ.

ಆಳಂದ, ಅಫಜಲಪುರ, ಜೇವರ್ಗಿ, ಸೇಡಂ, ಚಿಂಚೋಳಿ, ಚಿತ್ತಾಪುರ ತಾಲ್ಲೂಕಿನ ವಾಡಿ ಬಳಿ ಅಂತರ್ ಜಿಲ್ಲಾ ಗಡಿಗಳನ್ನು ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT