ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಸ್ ಕಲಾವಿದರು ಮತ್ತೆ ಅತಂತ್ರ

ಅಲೆಮಾರಿ ಬದುಕಿಗೆ ತಡೆಯೊಡ್ಡಿದ ಕೊರೊನಾ; ಆರ್ಥಿಕ ಸಮಸ್ಯೆ ಜೊತೆಗೆ ಭವಿಷ್ಯದ ಆತಂಕ
Last Updated 9 ಮೇ 2021, 4:32 IST
ಅಕ್ಷರ ಗಾತ್ರ

ಕಲಬುರ್ಗಿ: ಸರ್ಕಸ್ ಕಲಾವಿದರದ್ದು ಅಲೆಮಾರಿ ಬದುಕು. ಬಗೆಬಗೆಯ ಕಸರತ್ತು ಪ್ರದರ್ಶಿಸುತ್ತ ದೇಶವಿಡೀ ಸಂಚರಿಸುವ ಅವರು ಒಂದೇ ಊರಿನಲ್ಲಿ ಒಂದೆರಡು ತಿಂಗಳಿದ್ದರೆ ಹೆಚ್ಚು. ಆದರೆ, ಕೊರೊನಾ ಸೋಂಕು ಸರ್ಕಸ್ ಪ್ರದರ್ಶನಕ್ಕೆ ಅಷ್ಟೇ ಅಲ್ಲ, ಮುಕ್ತ ಸಂಚಾರಕ್ಕೂ ತಡೆಯೊಡ್ಡಿ ಕಲಾವಿದರನ್ನು ಅತಂತ್ರ ಸ್ಥಿತಿಗೆ ದೂಡಿದೆ.

ಇಲ್ಲಿನ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ಒಂದು ವರ್ಷದಿಂದ ನೆಲೆಸಿರುವ ಜಮುನಾ ಸರ್ಕಸ್ ಕಲಾವಿದರು ಮತ್ತು ತಂತ್ರಜ್ಞರು ಅತ್ತ ತಮ್ಮೂರಿಗೆ ಹೋಗಲಾಗದೇ, ಇತ್ತ ಈ ಊರಿನಲ್ಲಿ ನೆಮ್ಮದಿಯಿಂದ ಇರಲಾಗದೇ ಸಂಕಷ್ಟದಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಭವಿಷ್ಯದ ಬಗ್ಗೆಯೂ ಅವರಲ್ಲಿ ಆತಂಕ ಮೂಡುತ್ತಿದೆ.

ಎಲ್ಲವೂ ಅಂದ್ಕೊಂಡಂತೆ ನೆರವೇರಿದ್ದರೆ, ಈ ವೇಳೆಗೆ ವಿಜಯಪುರ ಅಥವಾ ಗದಗ ಜಿಲ್ಲೆಯಲ್ಲಿ ಜಮುನಾ ಸರ್ಕಸ್ ಕಲಾವಿದರು ಪ್ರದರ್ಶನ ನಡೆಸಿ, ಮುಂದಿನ ಊರಿಗೆ ಹೋಗಲು ಯೋಜನೆ ರೂಪಿಸಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್, ಸರ್ಕಾರದ ಕಠಿಣ ನಿಯಮಾವಳಿ ಎಲ್ಲವೂ ಅವರನ್ನು ಒಂದೇ ಕಡೆ ಹಿಡಿದಿಟ್ಟಿತು.

ಮೂರೇ ದಿನಕ್ಕೆ ಪ್ರದರ್ಶನ ಸ್ಥಗಿತ: ಕಳೆದ ವರ್ಷ (2020) ಫೆಬ್ರುವರಿ ತಿಂಗಳಲ್ಲಿ ಬಂದ ಜಮುನಾ ಸರ್ಕಸ್ ಸಕಲ ಸಿದ್ಧತೆ ಮಾಡಿಕೊಂಡು ಮಾರ್ಚ್ ತಿಂಗಳಲ್ಲಿ ಪ್ರದರ್ಶನ ಆರಂಭಿಸಿತು. ಆದರೆ, ವೃದ್ಧರೊಬ್ಬರು ಕೋವಿಡ್‌ನಿಂದ ಮೃತಪಟ್ಟ ಪರಿಣಾಮ ಜಿಲ್ಲಾಡಳಿತವು ಲಾಕ್‌ಡೌನ್ ಘೋಷಿಸಿತು. ಇದರಿಂದ ಸರ್ಕಸ್ ಪ್ರದರ್ಶನ ಮೂರೇ ದಿನಕ್ಕೆ ಸೀಮಿತಲೊಂಡಿತು.

ಕೋವಿಡ್ ನಿಯಮಗಳ ಸಡಿಲಿಕೆ, ಜಿಲ್ಲಾಡಳಿತದಿಂದ ಅನುಮತಿ ಮತ್ತು ಇನ್ನಿತರ ಕಾರಣಗಳಿಂದ ಸರ್ಕಸ್ ಪ್ರದರ್ಶನಕ್ಕೆ ಡಿಸೆಂಬರ್‌ವರೆಗೆ ಅನುಮತಿ ಸಿಗಲಿಲ್ಲ. ಕೋವಿಡ್ ಭೀತಿ ಕೊಂಚ ನಿವಾರಣೆಯಾಗದ ಬಳಿಕ ಜನವರಿ 8ಕ್ಕೆ ಪುನಃ ಪ್ರದರ್ಶನ ಆರಂಭವಾಯಿತು. ಮೊದಮೊದಲಿಗೆ ಪ್ರೇಕ್ಷಕರು ಬಾರದಿದ್ದರೂ ನಂತರ ನಿಧಾನವಾಗಿ ಅವರ ಸಂಖ್ಯೆ ಹೆಚ್ಚತೊಡಗಿತು.

ಇನ್ನೇನೂ ಎಲ್ಲವೂ ಸುಗಮವಾಯಿತು ಎನ್ನುವಷ್ಟರಲ್ಲಿ ಕೊರೊನಾ ಛಾಯೆ ಪುನಃ ಆವರಿಸಿಕೊಂಡಿತು. ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದ್ದ ಶರಣಬಸವೇಶ್ವರ ಜಾತ್ರೆ ರದ್ದಾಯಿತು. ಜನರು ಗುಂಪುಗೂಡುವಿಕೆಗೆ ಕಡಿವಾಣ ಬಿತ್ತು. ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವ ನಿರೀಕ್ಷೆಯಲ್ಲಿದ್ದ ಸರ್ಕಸ್ ಕಲಾವಿದರಲ್ಲಿ ನಿರಾಸೆ ಮೂಡಿತು.

ಬದುಕು ಕಸಿದುಕೊಂಡ ಕೊರೊನಾ:‘ಪ್ರೇಕ್ಷಕರ ಸಂಖ್ಯೆ ಕಡಿಮೆಯಿದ್ದರೂ ಜನವರಿಯಿಂದ ಏಪ್ರಿಲ್‌ವರೆಗೆ ಸರ್ಕಸ್ ಪ್ರದರ್ಶಿಸಿದೆವು. ವಿವಿಧ ರಾಜ್ಯಗಳಲ್ಲಿದ್ದ ಇತರೆ ಕಲಾವಿದರೂ ಸಹ ಜೊತೆಗೂಡಿದರು. ಆದರೆ, ಇದೆಲ್ಲದರ ಮಧ್ಯೆ ಸರ್ಕಾರವು ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಕರ್ಫ್ಯೂ ಘೋಷಿಸಿದ ಬಳಿಕ ಮತ್ತೆ ಸಂಕಟದ ದಿನಗಳು ಆರಂಭವಾದವು’ ಎಂದು ಜಮುನಾ ಸರ್ಕಸ್ ಮಾಲೀಕ ಚರಣಜೀತ್ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರ್ಫ್ಯೂ ಇರುವ ಕಾರಣ ಹೊರಗಡೆ ಓಡಾಡುವಂತಿಲ್ಲ. ಅಂಗಡಿ–ಮುಂಗಟ್ಟುಗಳು ಮುಚ್ಚಿರುತ್ತವೆ. ಆರ್ಥಿಕ ಸಮಸ್ಯೆ ನೀಗಿಸಿಕೊಳ್ಳಲು ಕಲಾವಿದರಿಗೆ ಹೊರಗಡೆ ಕೆಲಸವೂ ಸಿಗುವುದಿಲ್ಲ. ಒಂದು ವರ್ಷದಿಂದ ಇಲ್ಲಿಯೇ ಉಳಿದಿದ್ದೇವೆ. ಕೊರೊನಾ ಸೋಂಕು ನಮ್ಮೆಲ್ಲರ ಬದುಕು ಮತ್ತು ಭವಿಷ್ಯವನ್ನು ಕಸಿದುಕೊಂಡಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸರ್ಕಸ್‌ ಪ್ರದರ್ಶನಕ್ಕೆ ವಿಜಯಪುರ ಮತ್ತು ಗದಗನಲ್ಲಿ ಈಗಾಗಲೇ ಮೈದಾನ ಕಾಯ್ದಿರಿಸಿಕೊಂಡಿದ್ದೆವು. ಅಲ್ಲಿಗೆ ಹೊರಡಲು ಸಿದ್ಧತೆ ಮಾಡುವಷ್ಟರಲ್ಲಿ ಬದುಕು ಹೀಗೆ ಅನಿಶ್ಚಿತ ಸ್ಥಿತಿಗೆ ಬಂದು ನಿಂತಿದೆ’ ಎಂದರು.

ಮುಂದೇನು ಎಂಬ ಚಿಂತೆ: ‘ಕೊರೊನಾ ಬೇರೆ ಬೇರೆ ಅಲೆಗಳ ರೂಪದಲ್ಲಿ ಹೀಗೆ ದಾಳಿಯಿಡುತ್ತಿದ್ದರೆ, ಸರ್ಕಸ್‌ ನಡೆಸುವುದು ಹೇಗೆ ಮತ್ತು ಇದನ್ನೇ ನಂಬಿಕೊಂಡು ಬಾಳುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಸರ್ಕಸ್ ಕಲಾವಿದರು ಆತಂಕ ವ್ಯಕ್ತಪಡಿಸಿದರು.

‘ಕೊರೊನಾ ನಿಯಂತ್ರಣಕ್ಕೆ ಪೂರಕವಾಗಿ ಜನರು ಗುಂಪುಗೂಡಬಾರದು. ಒಂದೇ ಕಡೆ ಸೇರಬಾರದು. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳಬೇಕು. ಇದೇ ರೀತಿಯ ನಿಯಮಾವಳಿಗಳು ಮುಂದುವರಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸರ್ಕಸ್‌ ವೀಕ್ಷಿಸಲು ಬರಲು ಸಾಧ್ಯವಾಗುವುದೇ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT