ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ

ವಸತಿ ನಿಲಯಗಳ ಸಿಬ್ಬಂದಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರಮೇಶ ಸಂಗಾ
Last Updated 22 ಜನವರಿ 2021, 0:58 IST
ಅಕ್ಷರ ಗಾತ್ರ

ಕಲಬುರ್ಗಿ: ಜನವರಿ 15ರಿಂದಲೇ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದ್ದು, ವಸತಿ ನಿಲಯಕ್ಕೂ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಆದ್ದರಿಂದ ವಸತಿ ನಿಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದಕ್ಕೂ ಮುನ್ನ 72 ಗಂಟೆಗಳ ಅವಧಿಯಲ್ಲಿ ಕೋವಿಡ್‌ ಆರ್‌ಟಿ–ಪಿಸಿಆರ್‌ ನೆಗೆಟಿವ್ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ ತಿಳಿಸಿದರು.

ಗುರುವಾರ ನಗರದ ಐವಾನ್ ಇ ಶಾಹಿ ರಸ್ತೆಯಲ್ಲಿರುವ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಆಯೋಜಿಸಿದ್ದ ತಾಲ್ಲೂಕಿನ ವಸತಿ ನಿಲಯಗಳ ಮೇಲ್ವಿಚಾರಕರು, ಅಡುಗೆ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗೆ ವಸತಿ ನಿಲಯ ಪುನರ್ ಪ್ರಾರಂಭ ಕೋವಿಡ್–19 ಎಸ್.ಓ.ಪಿ ಕುರಿತು ತರಬೇತಿ ನೀಡಲು ಆಯೋಜಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಸತಿ ನಿಲಯಕ್ಕೆ ದಾಖಲಾಗುವ ಕುರಿತು ಪೋಷಕರಿಂದ ಪಡೆದ ಸಮ್ಮತಿ ಪತ್ರಯನ್ನು ವಿದ್ಯಾರ್ಥಿಗಳು ಸಲ್ಲಿಸುವುದು ಕಡ್ಡಾಯ’ ಎಂದರು.

ಲಾಕ್‍ಡೌನ್ ಮರು ತೆರವಿನ ನಂತರ ರಾಜ್ಯದಲ್ಲಿ ದ್ವಿತೀಯ ಪಿಯುಸಿ, ಸ್ನಾತಕೋತ್ತರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಇತರೆ ತರಗತಿಯ ನವೀಕರಣ ವಿದ್ಯಾರ್ಥಿಗಳಿಗೆ ಜನವರಿ 15ರಿಂದಲೇ ಭೌತಿಕವಾಗಿ ತರಗತಿಗೆ ಹಾಜರಾಗಲು ರಾಜ್ಯ ಸರ್ಕಾರವು ಅವಕಾಶ ನೀಡಿದೆ. ಶಾಲಾ–ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಇಲಾಖೆಯ ವಸತಿ ನಿಲಯದ ನಿಲಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕಾಗಿರುವ ಕಾರಣ ಸಂಪೂರ್ಣವಾಗಿ ಸೋಡಿಯಂ ಹೈಪೆಕ್ಲೊರೈಟ್ ದ್ರಾವಣ ಬಳಸಿ ಸ್ವಚ್ಛ ಮಾಡಿಯೇ ವಿದ್ಯಾರ್ಥಿಗಳಿಗೆ ಪ್ರವೇಶವಕಾಶ ನೀಡಬೇಕು ಎಂದು ಹೇಳಿದರು.

‘ವಸತಿ ನಿಲಯಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಪೂರ್ಣ ವಿವರವನ್ನು ದಾಖಲಿಸಲು ನಿರ್ದಿಷ್ಟ ವಹಿ ಇಡಬೇಕು ಹಾಗೂ ಸಿ.ಸಿ. ಟಿವಿ ನಿಗಾವಹಿಸಬೇಕು. ವಸತಿ ನಿಲಯದಿಂದ ಶಾಲಾ ಕಾಲೇಜಿಗೆ ಹೋಗಿ ಮರಳಿ ಬರುವಾಗ ಕಡ್ಡಾಯವಾಗಿ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನ್ ಮಾಡಿಸಬೇಕು. ಸ್ಕ್ಯಾನ್‍ನಲ್ಲಿ 99.5 ಡಿಗ್ರಿ ಫಾರೆನ್ ಹೀಟ್ ಕಂಡುಬಂದಲ್ಲಿ ತಕ್ಷಣ ತಪಾಸಣೆಗೆ ಒಳಪಡಿಸಬೇಕು. ವಸತಿ ನಿಲಯದ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸ್ ಇಟ್ಟು ಬಳಸಲು ವಿದ್ಯಾರ್ಥಿಗಳಿಗೆ ಸೂಚಿಸಬೇಕು’ ಎಂದರು.

‘ವಸತಿ ನಿಲಯದ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಪದೆ ಪದೇ ಉಪಯೋಗಿಸುವ ಹ್ಯಾಂಡ್ ರೈಲ್, ಡೋರ್ ನಾಬ್, ಮೆಟ್ಟಿಲುಗಳು, ಕಂಪ್ಯೂಟರ್ ಕೀಬೋರ್ಡ್, ಟೆಲಿಫೋನ್ ಮತ್ತಿತರ ಸಾಮಗ್ರಿಗಳ ಸ್ವಚ್ಛತೆಗೆ ಸಿಬ್ಬಂದಿ ಗಮನ ಹರಿಸಬೇಕು. ನಿಲಯದಲ್ಲಿ ಪ್ರೇಯರ್ ಅಸೆಂಬ್ಲಿ ಹಾಗೂ ಕ್ರೀಡಾಕೂಟವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು’ ಎಂದು ರಮೇಶ ಸಂಗಾ ನಿರ್ದೇಶನ ನೀಡಿದರು.

ವಸತಿ ನಿಲಯದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ವ್ಯಕ್ತಿಗತ ಅಂತರ ಕಾಪಾಡಬೇಕು ಹಾಗೂ ಕಡ್ಡಾಯವಾಗಿ ಮೂರು ಪದರಗಳ ಕಾಟನ್ ಮಾಸ್ಕ್ ಬಳಸಬೇಕು. ಅಡುಗೆ ಕೋಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಬಳಸುವ ಹಾಸಿಗೆ–ಹೊದಿಕೆಗಳನ್ನು ಡಿಟರ್ಜೆಂಟ್ ಪೌಡರ್‌ನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಿ ಮರು ಬಳಕೆ ಮಾಡಬೇಕು. ತರಕಾರಿ–ಹಣ್ಣುಗಳನ್ನು ನೀರಿನಿಂದ ಸ್ವಚ್ಛವಾಗಿ ತೊಳೆದುಕೊಂಡೇ ಅಡುಗೆಗೆ ಬಳಸಬೇಕು. ಅಡುಗೆ ಪದಾರ್ಥಗಳ ಶೇಖರಣೆ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ವೈದ್ಯ ಡಾ.ಮಲ್ಲರಾವ ಮಲ್ಲೆ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಸಿಬ್ಬಂದಿ, ವಸತಿ ನಿಲಯಗಳ ಹಿರಿಯ–ಕಿರಿಯ ಮೇಲ್ವಿಚಾರಕರು, ಅಡುಗೆ ಹಾಗೂ ಇತರೆ ಸಹಾಯಕ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT