ಭಾನುವಾರ, ನವೆಂಬರ್ 29, 2020
20 °C
ನವೆಂಬರ್ 17ರಿಂದ ತರಗತಿಗಳನ್ನು ಆರಂಭಿಸಲು ಕಾಲೇಜುಗಳು ಸಜ್ಜು

ಅಂತಿಮ ವರ್ಷದವರಿಗೆ ಮಾತ್ರ ತರಗತಿ

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇದೇ 17ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಷರತ್ತು ಬದ್ಧ ಅನುಮತಿ ನೀಡಿದ್ದರಿಂದ ನಗರದ ವಿಶ್ವವಿದ್ಯಾಲಯ, ಕಾಲೇಜುಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕಡ್ಡಾಯವಾಗಿ ಕೋವಿಡ್–19 ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಕಾಲೇಜಿಗೆ ತೆರಳಲು ಪೋಷಕರ ಅನುಮತಿ ಪತ್ರವನ್ನು ತರಬೇಕು ಎಂಬ ಸಂದೇಶವನ್ನೂ ಈಗಾಗಲೇ ವಿದ್ಯಾರ್ಥಿಗಳಿಗೆ ರವಾನಿಸಿವೆ.

ಮೊದಲ ಹಂತದಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪಾಠ ಬೋಧನೆ ಮುಂದುವರಿಯಲಿದೆ. ಅಂತಿಮ ಹಂತದ ವಿದ್ಯಾರ್ಥಿಗಳ ಪೈಕಿ ಶೇ 50ರಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬರಲು ಆಡಳಿತ ಮಂಡಳಿಗಳು ಅವಕಾಶ ನೀಡಿವೆ. ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ನೋಟ್ಸ್‌ಗಳನ್ನು ಕಳಿಸುವ ವ್ಯವಸ್ಥೆ ಮಾಡಿಕೊಂಡಿವೆ.

‘ಕೋವಿಡ್‌ ಸಂದರ್ಭದ ತರಗತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಕಾಲೇಜಿನಲ್ಲಿ ಟಾಸ್ಕ್‌ಫೋರ್ಸ್‌ ರಚಿಸಲಾಗಿದ್ದು, ನಿತ್ಯ ಎರಡು ಬಾರಿ ಕೊಠಡಿಗಳ ಸ್ಯಾನಿಟೈಜ್‌ ಮಾಡಲಾಗುವುದು. ವಿದ್ಯಾರ್ಥಿಗಳು ಮಾಸ್ಕ್ ಹಾಕಿಕೊಂಡು ಬರುವ ಬಗ್ಗೆ ಸೂಚಿಸುವುದು, ಕೈಗೆ ಸ್ಯಾನಿಟೈಜರ್ ಸಿಂಪಡಿಸುವುದನ್ನು ಈ ತಂಡ ನೋಡಿಕೊಳ್ಳಲಿದೆ’ ಎನ್ನುತ್ತಾರೆ ಕಲಬುರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಂಕ್ರಪ್ಪ ಹಟ್ಟಿ.

‘ಕೊರೊನಾ ಹಾವಳಿ ಕಡಿಮೆಯಾಗುವವರೆಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿಗೆ ಬರಲು ಅವಕಾಶ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿಗಳನ್ನು ನೋಡಿಕೊಂಡು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ನಗರದಲ್ಲಿ ಕೋವಿಡ್ ತಪಾಸಣೆ ಮಾಡಲು ಏಳೆಂಟು ಆಸ್ಪತ್ರೆಗಳಲ್ಲಿ ಅವಕಾಶವಿರುವುದರಿಂದ ವಿದ್ಯಾರ್ಥಿಗಳೇ ಟೆಸ್ಟ್ ಮಾಡಿಸಿಕೊಂಡು ಬರಬೇಕು ಎಂದು ತಿಳಿಸಲಾಗಿದೆ’ ಎಂದರು.

‘ಎಲ್ಲರಿಗೂ ಕೋವಿಡ್‌ ಟೆಸ್ಟ್ ಮಾಡಿಸಿಕೊಂಡು ಬರುವಂತೆ ತಿಳಿಸಿರುವುದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೋ ಕಾದು ನೋಡಬೇಕು. ಟೆಸ್ಟ್ ಮಾಡಿಸಿಕೊಂಡು ಬರದಿದ್ದರೂ ಅವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ತರಗತಿಗಳಿಗೆ ಕುಳಿತುಕೊಳ್ಳಲು ಅವಕಾಶ ನೀಡುವ ಉದ್ದೇಶವಿದೆ. ಮುಂದೆ ಕೋವಿಡ್ ತಪಾಸಣೆ ಮಾಡಿಸಿಕೊಂಡು ಬರುವಂತೆ ಸೂಚಿಸಲಾಗುವುದು’ ಎಂದು ನಗರದ ಕಾಲೇಜೊಂದರ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿಯೂ ಎರಡು ವಾರಗಳಲ್ಲಿ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಹೆಚ್ಚು ವಿದ್ಯಾರ್ಥಿಗಳಿದ್ದಲ್ಲಿ ತರಗತಿಗಳ ಬದಲು ವಿಭಾಗದ ಸಭಾಂಗಣದಲ್ಲಿ ಪಾಠ ಬೋಧನೆಗೆ ಚಿಂತನೆ ನಡೆದಿದೆ. ನಿತ್ಯ ಬೆಳಿಗ್ಗೆ ಹಾಗೂ ಮಧ್ಯಾಹ್ನ ಸಭಾಂಗಣವನ್ನು ಸ್ಯಾನಿಟೈಜ್ ಮಾಡಲಾಗುತ್ತದೆ. ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಜ್ ಮಾಡಲು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಒಂದು ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.