ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ವರದಿ ಕಡ್ಡಾಯ

ಹಿರೋಳಿ, ಖಜೂರಿ, ನಿಂಬಾಳ, ಬಳೂರ್ಗಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮ; ಹೆಚ್ಚಿನ ಸಿಬ್ಬಂದಿ ನಿಯೋಜನೆ
Last Updated 31 ಜುಲೈ 2021, 14:53 IST
ಅಕ್ಷರ ಗಾತ್ರ

ಆಳಂದ/ಅಫಜಲಪುರ: ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ, ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಮಹಾರಾಷ್ಟ್ರದ ನಾಗರಿಕರಿಗೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ.

ಗಡಿಯಲ್ಲಿ ಅಂತರರಾಜ್ಯ ಸಂಚಾರ ಬಿಗಿಗೊಳಿಸುವಂತೆ ರಾಜ್ಯ ಸರ್ಕಾರ ಶನಿವಾರ ಹೊಸ ಆದೇಶ ನೀಡಿದೆ. ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲೆಯ ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ಚೆಕ್‌ಪೋಸ್ಟ್‌ಗಳಲ್ಲಿ ಮೊದಲ ದಿನವೇ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಯಿತು.

‘ಗಂಭೀರ ರೀತಿಯ ಆರೋಗ್ಯ ಸಮಸ್ಯೆ, ನ್ಯಾಯಾಲಯದ ಕೆಲಸಗಳಿಗೆ ಬರುವವರನ್ನು ಮಾತ್ರ ಆದ್ಯತೆ ಮೇಲೆ ಒಳಗೆ ಬಿಡಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಅವರಿಗೂ ಆರ್‌ಟಿಪಿಸಿಆರ್‌ ಕಡ್ಡಾಯ ಮಾಡಲಾಗುವುದು. ಗಡಿಯಲ್ಲಿ ಈ ಹಿಂದೆ ಇದ್ದ ಸಿಬ್ಬಂದಿಯನ್ನೇ ಮುಂದುವರಿಸಲಾಗಿದೆ. ಕಾಲುದಾರಿಗಳಿಂದ ಒಳನುಸುಳುವವರ ಮೇಲೂ ನಿಗಾ ಇಡಲು ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಂ ಜಾರ್ಜ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಫಜಲಪುರ ತಾಲ್ಲೂಕಿನ ಮೂರೂ ಚೆಕ್‌ಪೋಸ್ಟ್‌ಗಳಲ್ಲಿ ಶನಿವಾರದಿಂದ ಬಿಗಿ ಕ್ರಮ ಅನುಸರಿಸಲಾಗುತ್ತಿದೆ. ಇಬ್ಬರು ಪಿಎಸ್‌ಐ, ನಾಲ್ವರು ಕಾನ್‌ಸ್ಟೆಬಲ್‌, ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಸೇರಿ ಹೆಚ್ಚು ಜನರನ್ನು ನಿಯೋಜಿಸಲಾಗಿದೆ.

‘ಮಹಾರಾಷ್ಟ್ರದಿಂದ ಬರುವವರು ಕೋವಿಡ್–19 ತಪಾಸಣೆಯನ್ನು ಕಡ್ಡಾಯ ಮಾಡಲು ಸರ್ಕಾರ ಆದೇಶ ನೀಡಿದೆ. ಈ ವರೆಗೆ ಕೋವಿಡ್‌ ಎರಡು ಲಸಿಕೆ ಪಡೆದವರನ್ನು ರಾಜ್ಯದೊಳಗೆ ಬಿಡಲಾಗುತ್ತಿತ್ತು. ಇನ್ನುಮುಂದೆ 72 ಗಂಟೆಗಳ ಒಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ ಮಾಡಲಾಗಿದೆ. ಅದು ಇಲ್ಲದವರನ್ನು ಮರಳಿ ಕಳಿಸಲಾತ್ತಿದೆ’ ಎಂದುಬಡವರಿಗೆ ಚೆಕ್‌ಪೋಸ್ಟ್‌ನ ಆರೋಗ್ಯಕಾರಿ ಆರೋಗ್ಯಾಧಿಕಾರಿ ಶ್ರೀಶೈಲ್ ಮಳ್ಳಿ ಮಾಹಿತಿ ನೀಡಿದರು.

ಚೆಕ್‌ಪೋಸ್ಟ್‌ ಹೊರತುಪಡಿಸಿ ಅನ್ಯದಾರಿಗಳಿಂದಲೂ ಜನರು ರಾಜ್ಯದೊಳಗೆ ಪ್ರವೇಶ ಮಾಡುತ್ತಿದ್ದಾರೆ. ತಾಲ್ಲೂಕಿನಜೇವರ್ಗಿ–ಬಿ, ಮಣ್ಣೂರ, ಹೊಸೂರ ಗಡಿಗಳಲ್ಲಿ ದಾರಿಗಳಿವೆ. ಆದರೆ, ಚೆಕ್‌ಪೋಸ್ಟ್‌ ಇಲ್ಲ. ಅಲ್ಲಿಂದ ಬೈಕ್‌, ಕಾರ್‌, ಟಂಟಂಗಳಲ್ಲಿ ಜನರು ನಿರಂತರವಾಗಿ ಬರುತ್ತಲೇ ಇದ್ದಾರೆ ಎಂದು ನಾಗರಿಕ ಶ್ರೀಮಂತ ಬಿರಾದಾರ ಮಾಹಿತಿ ನೀಡಿದರು.

ಬಾಕ್ಸ್‌–1

ಗಡಿಯಲ್ಲಿ ಬಸ್‌ ಸಂಚಾರ ನಿರ್ಬಂಧ

ಆಳಂದ: ತಾಲ್ಲೂಕಿನ ಹಿರೋಳ್ಳಿ, ಖಜೂರಿ ಹಾಗೂ ನಿಂಬಾಳದ ಗ್ರಾಮದ ಗಡಿಗಳಲ್ಲಿ ತಪಾಸಣೆ ಕೇಂದ್ರ ತೆರೆಯಲಾಗಿದೆ. ಶನಿವಾರ ಪ್ರಯಾಣಿಕರ ತಪಾಸಣೆ ಮತ್ತಷ್ಟು ಬಿಗಿಗೊಳಿಸಲಾಗಿದೆ. ಎರಡು ರಾಜ್ಯಗಳ ಸಾರಿಗೆ ಸಂಸ್ಥೆಯ ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ. ಬಸ್‌ಗಳು ಗಡಿಯಿಂದ ಮರಳುತ್ತಿವೆ.

ಮಧ್ಯಾಹ್ನದಿಂದಲೇ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲಾಗಿದೆ. ಪ್ರತಿ ವಾಹನಗಳನ್ನು ತಡೆದು ಪ್ರಯಾಣಿಕರ ಆರ್‌ಟಿಪಿಸಿಆರ್‌ ವರದಿ ಇಲ್ಲವೇ ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕೇಳಲಾಯಿತು. ಪ್ರಮಾಣ ಪತ್ರ ಇಲ್ಲದವರನ್ನು ವಾಪಸ್‌ ಕಳುಹಿಸಲಾಯಿತು. ಪರಿಣಾಮ ಸಂಜೆ ವೇಳೆಗೆ ವಾಹನಗಳ ಓಡಾಟ ಕಡಿಮೆ ಆಯಿತು.

‘ಮಹಾರಾಷ್ಟ್ರದಿಂದ ಬಂದ 43 ಪ್ರಯಾಣಿಕರ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಸ್ಥಳದಲ್ಲಿಯೇ ಗಂಟಲು ದ್ರವ ಸಂಗ್ರಹಿಸಲಾಗಿದೆ. ಅನಿವಾರ್ಯತೆ ಇದ್ದ ಕೆಲವರನ್ನು ರ್‍ಯಾಂಡಮ್‌ ಟೆಸ್ಟ್‌ ಮಾಡಿದ ಬಳಿಕ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಫಿರಾಜಾದೆ ತಿಳಿಸಿದ್ದಾರೆ.

‘ಸೊಲ್ಲಾಪುರ, ಅಕ್ಕಲಕೋಟ ಪಟ್ಟಣಕ್ಕೆ ಹೋಗಿ ವಾಪಸ್ ಆಗುವ ಸ್ಥಳೀಯರಿಗೆ ಶನಿವಾರ ಲಸಿಕೆ ಪಡೆದ ಬಗ್ಗೆ ಮಾತ್ರ ತಪಾಸಣೆ ಮಾಡಲಾಗಿದೆ. ಆದರೆ, ಭಾನುವಾರ (ಆ. 1)ದಿಂದ ಮಹಾರಾಷ್ಟ್ರಕ್ಕೆ ಹೋಗಿ ಬರುವ ಸ್ಥಳೀಯರಿಗೂ ಆರ್‌ಟಿಪಿಸಿಆರ್‌ ವರದಿ ಕಡ್ಡಾಯಗೊಳಿಸಲಾಗುವುದು’ ಎಂದು ಚೆಕ್‌ಪೋಸ್ಟ್‌ ನೇತೃತ್ವ ವಹಿಸಿರುವ ಪಿಎಸ್ಐ ಶಿವಕಾಂತ ತಿಳಿಸಿದರು.

ಬಾಕ್ಸ್‌–12
ರೈಲು, ಬಸ್‌ ನಿಲ್ದಾಣದಲ್ಲಿ ತಪಾಸಣೆ ಇಲ್ಲ

ಕಲಬುರ್ಗಿ: ಮಹಾರಾಷ್ಟ್ರಕ್ಕೆ ಹೋಗಿ– ಬರುವ 54 ರೈಲುಗಳು ಕಲಬುರ್ಗಿ ರೈಲು ನಿಲ್ದಾಣದಲ್ಲಿ ನಿಲ್ಲುತ್ತವೆ. ಇದರಲ್ಲಿ ಮಹಾರಾಷ್ಟ್ರದಿಂದಲೇ ಬರುವ ರೈಲುಗಳ ಸಂಖ್ಯೆ 27. ಪ್ರತಿ ರೈಲಿನಲ್ಲಿ ಕನಿಷ್ಠ 300 ಮಂದಿ ಮಹಾರಾಷ್ಟ್ರದವರೇ ಇರುತ್ತಾರೆ. ಸದ್ಯ ಯಾವುದೇ ರೀತಿಯ ತಪಾಸಣೆ ನಡೆಯುತ್ತಿಲ್ಲ.

ಬಸ್‌ ನಿಲ್ದಾಣದಲ್ಲಿ ಕೂಡ ಮಾಸ್ಕ್‌, ಸ್ಯಾನಿಟೈಸರ್‌, ಕನಿಷ್ಠ ಅಂತರದಂಥ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ. ಮಹಾರಾಷ್ಟ್ರದಿಂದ ಬರುವ ಬಸ್‌ಗಳು ಮಾತ್ರ ಸ್ಥಗಿತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT