ಮಂಗಳವಾರ, ಜನವರಿ 18, 2022
15 °C
ದಿನೇದಿನೇ ಹೆಚ್ಚುತ್ತಿವೆ ಕೋವಿಡ್‌ ಪ್ರಕರಣಗಳ ಸಂಖ್ಯೆ, ಪೂರ್ವಸಿದ್ಧತೆಗೆ ತಜ್ಞರ ಸಲಹೆ

ಕಲಬುರಗಿ | ಹೆಚ್ಚುತ್ತಿವೆ ಕೋವಿಡ್‌ ಪ್ರಕರಣ; 3ನೇ ಅಲೆ, ಬೇಕಿದೆ ಇನ್ನಷ್ಟು ‘ಬಲೆ’

ಸತೀಶ ಬಿ. Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ವಾರದ ಹಿಂದಷ್ಟೇ ದಿನಕ್ಕೆ ಒಂದೆರಡು ಪತ್ತೆಯಾಗುತ್ತಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತ ಸಾಗಿದೆ. ಭಾನುವಾರದ (ಜ. 9) ಹೊತ್ತಿಗೆ ಪಾಸಿಟಿವ್ ಸಂಖ್ಯೆ 98ಕ್ಕೆ ತಲುಪಿದೆ. 294 ಸಕ್ರಿಯ ಪ್ರಕರಣಗಳಿವೆ. ಮೂರನೇ ಅಲೆ ಪ್ರಬಲವಾಗಿ ಅಪ್ಪಳಿಸುವ ಲಕ್ಷಣಗಳು ಗೋಚರಿಸಿದ್ದರೂ, ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತಾ ಕ್ರಮಗಳು ತೃಪ್ತಿಕರವಾಗಿಲ್ಲ ಎನ್ನುವ ದೂರು ಜನರಿಂದ ಕೇಳಿಬಂದಿದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಅಲ್ಲಿಂದ ಕಲಬುರಗಿಗೆ ಪ್ರತಿ ದಿನ ಸಾವಿರಾರು ಮಂದಿ ಬರುತ್ತಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಂದಲೂ ಬಸ್‌, ರೈಲುಗಳ ಮೂಲಕ ಅಪಾರ ಸಂಖ್ಯೆಯ ಪ್ರಯಾಣಿಕರು ಬರುತ್ತಿದ್ದಾರೆ. ಅವರಲ್ಲಿ ಮುಂಬೈ, ಹೈದರಾಬಾದ್‌ ನಗರಕ್ಕೆ ವಲಸೆ ಹೋದ ಕಾರ್ಮಿಕರ ಸಂಖ್ಯೆ ಕೂಡ ದೊಡ್ಡದು. ಇದೆಲ್ಲವನ್ನು ಪೂರ್ವಯೋಜಿತವಾಗಿ ನಿಯಂತ್ರಿಸಲು ಕ್ರಮ ವಹಿಸಬೇಕಿತ್ತು. ಇಲ್ಲಿ ಯಾವುದೇ ರೀತಿಯ ತಪಾಸಣೆ ಇಲ್ಲದೇ ನೇರವಾಗಿ ನಗರಕ್ಕೆ ಪ್ರವೇಶ ನೀಡಲಾಗುತ್ತಿದೆ. ಹೀಗಾಗಿ, ಫೆಬ್ರುವರಿ ಮೊದಲ ವಾರದ ಹೊತ್ತಿಗೆ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

‘ಚೆಕ್‌ಪೋಸ್ಟ್‌ಗಳಲ್ಲಿ ಖಾಸಗಿ ವಾಹನಗಳನ್ನು ಮಾತ್ರ ನಿಯಂತ್ರಿಸಲಾಗಿದೆ. ಆದರೆ, ರೈಲ್ವೆ ಮೂಲಕ ಬರುವ ಜನರ ಮೇಲೆ ಯಾವುದೇ ನಿಯಂತ್ರಣವಿಲ್ಲ. ಗಡಿಗಳಲ್ಲಿ ಹಲವರು ಅಡ್ಡದಾರಿಗಳ ಮೂಲಕ ಪ್ರತಿದಿನ ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಿದ್ದಾರೆ’ ಎನ್ನುವುದು ಬಳೂರ್ಗಿಯ ಶರಣಪ್ಪ ಸಣ್ಣಸಿದ್ದಪ್ಪಗೋಳ ಅವರ ದೂರು.

ತಜ್ಞರ ಸಲಹೆ ಪಾಲಿಸಲಾಗುತ್ತಿದೆಯೆ?: ಕಲಬುರಗಿಗೆ ಈಚೆಗೆ ಭೇಟಿ ನೀಡಿದ ರಾಜ್ಯ ಕೋವಿಡ್‌–19 ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್‌, ಮೂರನೆ ಅಲೆ ಅಪ್ಪಳಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

‘ಪಕ್ಕದ ರಾಜ್ಯಗಳಲ್ಲಿ ಯಾವುದೇ ಸೋಂಕು ಹರಡಿದಾಗ ಅದು ನಮ್ಮ ರಾಜ್ಯದಲ್ಲೂ ಪಸರಿಸುವುದು ಖಂಡಿತ. ಇದಕ್ಕೆ ತಡೆ ಸಾಧ್ಯವಿಲ್ಲ. ಆದ್ದರಿಂದ ಈ ಬಾರಿ ಮೂರನೇ ಅಲೆಯ ನಿಯಂತ್ರಣಕ್ಕೆ ತುಸು ಮುಂಚಿತವಾಗಿಯೇ ಸಿದ್ಧಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದೇನೆ. ಸದ್ಯಕ್ಕೆ ಕೇಂದ್ರ ಸರ್ಕಾರ ನೀಡಿದ ಮಾರ್ಗಸೂಚಿಗಳು ಮಾತ್ರ ಪಾಲನೆಯಾಗುತ್ತಿವೆ. ಗಡಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಂದ್‌ ಮಾಡಲು ಹೇಳಿದ್ದೇವೆ’ ಎಂದು ಡಾ.ಸುದರ್ಶನ್‌ ತಿಳಿಸಿದ್ದರು.

ಈಗ ಸಿದ್ಧಪಡಿಸಿಕೊಂಡ ಸೌಕರ್ಯಗಳು ಸಾಲುವುದಿಲ್ಲ ಎಂದೂ ಅವರು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಗಮನಿಸಬಹುದು.

ಮುನ್ನೆಚ್ಚರಿಕೆಗಳೇನು?: ಕಳೆದ ಬಾರಿ ನಗರದಲ್ಲಿ ತೆರೆದಿದ್ದ ಸಹಾವಾಣಿ, ಟೋಲ್‌ ಫ್ರೀ ಸಂಖ್ಯೆ, ಕಂಟ್ರೋಲ್ ರೂಂ ಹಾಗೂ ಟೆಲಿಫೋನ್ ಮೂಲಕ ವೈದ್ಯಕೀಯ ಸೇವೆ ಪಡೆಯುವ ಕ್ರಮಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೇ ಎಲ್ಲ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು, ಹಾಸ್ಟೆಲ್‌ಗಳೂ ಈಗ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಕಳೆದ ಬಾರಿ ಬಹುಪಾಲು ವಸತಿ ಶಾಲೆ, ಹಾಸ್ಟೆಲ್‌ಗಳನ್ನು ಕೋವಿಡ್‌ ಕೇರ್‌ ಕೇಂದ್ರಗಳಾಗಿ ಬಳಸಿಕೊಳ್ಳಲಾಗಿತ್ತು. ಈ ಬಾರಿ ಇದಕ್ಕೆ ಏನು ಮುಂಜಾಗ್ರತೆ ವಹಿಸಲಾಗುತ್ತಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ಸಿದ್ಧತೆ ಇಲ್ಲ. 

ಜಿಲ್ಲೆಯ 47 ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆ ನೀಡಲು ಅನುಮತಿಸಲಾಗಿದೆ. ಅವುಗಳಲ್ಲಿ ಶೇ 50ರಷ್ಟು ಬೆಡ್‌ಗಳು ಸರ್ಕಾರದ ಸುಪರ್ದಿಗೆ ಸೇರಿವೆ. ಈ ಆಸ್ಪತ್ರೆಗಳ ವ್ಯವಸ್ಥೆ ಪರಿಶೀಲನೆಗೆ ವಿಶೇಷ ತಂಡಗಳನ್ನೂ ಸಿದ್ಧಗೊಳಿಸಲಾಗಿದೆ. ಈಗಲೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎನ್ನುವುದು ಅಧಿಕಾರಿಗಳ ಮಾಹಿತಿ.

‘ಸ್ಟಾಫ್ ನರ್ಸ್‌ಗಳ ನೇಮಕಕ್ಕೆ ಪ್ರಸ್ತಾವ’
ಕೋವಿಡ್ ಮೂರನೇ ಅಲೆ ಆರಂಭ ಅಗಿರುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಅಗತ್ಯ ಚಿಕಿತ್ಸೆಗೆ ಸ್ಟಾಫ್ ನರ್ಸ್‌ಗಳು ಮತ್ತು ಡಿ ಗ್ರೂಪ್ ನೌಕರರ ಕೊರತೆ ಆಗಬಹುದು. ಹೀಗಾಗಿ ಆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ.

ಈ ಹಿಂದೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ ಸ್ಟಾಫ್ ನರ್ಸ್‌ಗಳು ಮತ್ತು ಗ್ರೂಪ್ ಡಿ ನೌಕರರನ್ನು ಆರು ತಿಂಗಳ ಹಿಂದೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂಬುದು ಜಿಮ್ಸ್‌ ನಿರ್ದೇಶಕರ ಹೇಳಿಕೆ.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಸಮಸ್ಯೆ ಕಾಡಿತ್ತು. ಈ ಬಾರಿ ಮತ್ತೆ ಅಂತಹ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಜಿಮ್ಸ್‌ನಲ್ಲಿ 20 ಕೆಎಲ್‌ ಎಲ್‌ಎಂಒ (ದ್ರವೀಕೃತ ವೈದ್ಯಕೀಯ ಆಮ್ಲಜನಕ) ಘಟಕ ಸ್ಥಾಪಿಸಲಾಗಿದೆ. 160 ಜಂಬೊ ಆಮ್ಲಜನಕ ಸಿಲಿಂಡರ್‌ಗಳು ಇವೆ . ಅಲ್ಲದೆ, 1000 ಪಿಎಸ್‌ಎ ಮತ್ತು 500 ಪಿಎಸ್‌ಎ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕಗಳಿವೆ. 172 ತಜ್ಞ ವೈದ್ಯರು ಇದ್ದಾರೆ. ಅಲ್ಲದೆ, ಅಗತ್ಯ ಸಲಕರಣೆಗಳು ಇವೆ ಎಂದು ಹೇಳಿದರು.

ಬೂಸ್ಟರ್ ಡೋಸ್‌ ನೀಡಲು ಇಂದಿನಿಂದಲೇ ಅಭಿಯಾನ
ಈಗಾಗಲೇ ಒಂದು ಮತ್ತು ಎರಡನೇ ಡೋಸ್‌ ಕೋವಿಡ್ ಲಸಿಕೆ ಪಡೆದವರಿಗೆ ಜನವರಿ 10ರಿಂದ ಬೂಸ್ಟರ್‌ ಡೋಸ್‌ ನೀಡುವ ಕುರಿತು ಚಿಂಚನೆ ನಡೆದಿದೆ. ಎರಡನೇ ಡೋಸ್‌ ಲಸಿಕೆ ಪಡೆದ ಆರು ತಿಂಗಳ ನಂತರ ಈ ಬೂಸ್ಟರ್ ಡೋಸ್‌ ನೀಡಲಾಗುವುದು ಎಂದು ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ಮಾಹಿತಿ ನೀಡಿದ್ದಾರೆ.

ಈ ಬಾರಿ ಬಹುತೇಕರು ಮೊದಲ ಡೋಸ್‌ ಕೋವಿಡ್ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್ ಮತ್ತು ಮಕ್ಕಳಿಗೆ ಲಸಿಕೆ ವಿತರಣೆ ಕಾರ್ಯವೂ ನಡೆಯುತ್ತಿದೆ. ಜನವರಿ ಹೀಗಾಗಿ ಸದ್ಯ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಬೆಡ್‌ಗಳ ಸಮಸ್ಯೆ ಉದ್ಭವಿಸುವುದಿಲ್ಲ. ಆದರೂ ಅಗತ್ಯ ಪ್ರಮಾಣದ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ ಎಂಬುದು ಅವರ ಹೇಳಿಕೆ.

ಮಾಸ್ಕ್ ಧರಿಸದವರಿಗೆ ದಂಡ; 12 ತಂಡ ರಚನೆ
ಕಲಬುರಗಿ
: ’ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಪಾಲಿಕೆ ಆಧಿಕಾರಿಗಳು, ಪೊಲೀಸ್ ಸಿಬ್ಬಂದಿಯನ್ನೊಳಗೊಂಡ 12 ತಂಡಗಳನ್ನು ರಚಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು.

ಶುಕ್ರವಾರ (ಜ.7) ನಗರದಲ್ಲಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗಿದೆ. ವಾರಾಂತ್ಯ ಕರ್ಫ್ಯೂ ಇರುವುದರಿಂದ ಶನಿವಾರ ಮತ್ತು ಭಾನುವಾರ ಕಾರ್ಯಾಚರಣೆ ನಡೆಸಿಲ್ಲ. ಜ.10ರಿಂದ ಇದು ಕಟ್ಟುನಿಟ್ಟಾಗಿ ನಡೆಯಲಿದೆ ಎಂದರು.

ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವಂತೆ ಈಗಾಗಲೇ ನಗರದ ಮಾರುಕಟ್ಟೆ ಪ್ರದೇಶ, ವಿವಿಧ ಬಡಾವಣೆಗಳು, ವಸತು ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಅದರ ಜತೆಗೆ ದಂಡ ವಿಧಿಸಲಾಗುತ್ತಿದೆ. ಅದನ್ನು ಮೀರಿಯೂ ಮಾಸ್ಕ್ ಧರಿಸದೆ ಸಂಚರಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಮಕ್ಕಳಿಗೆ ಲಸಿಕೆ; ಹಿನ್ನಡೆ
ಜಿಲ್ಲೆಯಲ್ಲಿ 9 ಲಕ್ಷಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇದರಲ್ಲಿ 15ರಿಂದ 18 ವರ್ಷದೊಳಗಿನವರು 1,59,770 ಇದ್ದಾರೆ. ಜನವರಿ 8ರವರೆಗೆ ಶೇ 27ರಷ್ಟು ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿದೆ.

ಬೇರೆ ಜಿಲ್ಲೆಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚು ಇದೆ. ಹೀಗಾಗಿ ಜಿಲ್ಲೆಯಲ್ಲೂ ಮಕ್ಕಳಿಗೆ ಲಸಿಕೆ ನೀಡಲು ವಿಶೇಷ ಅಭಿಯಾನ ಅರಂಭಿಸಬೇಕು ಎನ್ನುತ್ತಾರೆ ಮಕ್ಕಳ ಪೋಷಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.