ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಹಾನಿ; ಆಗಸ್ಟ್‌ ಅಂತ್ಯದೊಳಗೆ ವರದಿ ನೀಡಿ

ಅತಿವೃಷ್ಟಿ, ಕೋವಿಡ್‌ ನಿಯಂತ್ರಣ ಕುರಿತು ವಿಡಿಯೊ ಸಂವಾದ ನಡೆಸಿದ ಸಚಿವ ಮುರುಗೇಶ ನಿರಾಣಿ
Last Updated 6 ಆಗಸ್ಟ್ 2021, 16:18 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜುಲೈ ತಿಂಗಳಲ್ಲಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಂಥ ಸಂದರ್ಭದಲ್ಲಿ ಅಧಿಕಾರಿಗಳು ನೆಪ ಹೇಳದೇ ಚುರುಕಿನಿಂದ ಕೆಲಸ ಮಾಡಬೇಕು. ಹಾನಿಯ ಬಗ್ಗೆ ವರದಿ ಸಿದ್ಧಪಡಿಸಿ ಆಗಸ್ಟ್‌ ಅಂತ್ಯದೊಳಗೆ ನೀಡಬೇಕು’ ಎಂದು ಸಚಿವ ಮುರುಗೇಶ ನಿರಾಣಿ ತಾಕೀತು ಮಾಡಿದರು.

ನೂತನ ಸಚಿವ ಸಂಪುಟದಲ್ಲಿ ಜಿಲ್ಲೆಯ ಅತಿವೃಷ್ಟಿ ಹಾಗೂ ಕೋವಿಡ್ ನಿಯಂತ್ರಣ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಬಳಿಕ, ಬೆಂಗಳೂರಿನಿಂದ ಶುಕ್ರವಾರ ವಿಡಿಯೊ ಸಂವಾದದ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

‌‘ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಕೃಷಿ ಸಂಬಂಧಿ ಇಲಾಖೆಗಳ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೆಲಸದಲ್ಲಿ ವಿಳಂಬ ಮಾಡುವಂತಿಲ್ಲ. ರೈತರು ಎದೆಗುಂದುವ ಮೊದಲೇ ನಾವು ಅವರ ನೆರವಿಗೆ ಧಾವಿಸಬೇಕಾಗಿದೆ’ ಎಂದೂ ಅವರು ಸೂಚಿಸಿದರು.

‘ಜಿಲ್ಲೆಯಲ್ಲಿರುವ ಸಂಪನ್ಮೂಲವನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ನಡೆಸಲು ಉದ್ದೇಶಿಸಲಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇಸ್ರೇಲ್ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು 100 ಎಕರೆ ಜಮೀನಿನಲ್ಲಿ ಬೇರೆ ಬೇರೆ ಮಾದರಿಯ ಬೆಳೆಗಳನ್ನು ಬೆಳೆಯುವುದು ಇದರ ಮುಖ್ಯ ಉದ್ದೇಶ. ಇದರ ಬಗ್ಗೆ ಮುಂದಿನ ತಿಂಗಳಲ್ಲೇ ಅಧಿಕಾರಿಗಳು ಸ್ಪ‍ಷ್ಟ ಚಿತ್ರಣ ನೀಡಬೇಕು’ ಎಂದು ಹೇಳಿದರು.

‘ಈಗಾಗಲೇ ಇಸ್ರೇಲ್‌ನ ಕಾನ್ಸುಲೇಟ್ ಅಧಿಕಾರಿಗಳನ್ನು ಆ.14ರಂದು ಕಲಬುರ್ಗಿಗೆ ಆಹ್ವಾನಿಸಲಾಗಿದೆ. ಮೊದಲ ಹಂತದಲ್ಲಿ 100 ಎಕರೆ ಜಮೀನಿನಲ್ಲಿ ಇಸ್ರೇಲ್ ಪದ್ಧತಿಯನ್ನು ಅಳವಡಿಸಲಾಗುವುದು’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆಯ ಲಕ್ಷಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ನೆರೆಯ ಮಹಾರಾಷ್ಟ್ರದಲ್ಲಿ ಈಗಾಗಲೇ ಪ್ರಕರಣಗಳು ಹೆಚ್ಚುತ್ತಿವೆ. ಇದರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಲಸಿಕಾಕರಣ ಕೆಲಸವನ್ನು ಇನ್ನಷ್ಟು ಚುರುಕು ಮಾಡಬೇಕು’ ಎಂದೂ ಸಚಿವ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ‘ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಮಹಾರಾಷ್ಟ್ರ ಗಡಿ ಜಿಲ್ಲೆಯ ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ಐದು ಕಡೆ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಜಿಲ್ಲೆಗೆ ಪ್ರವೇಶಿಸಲು 72 ಗಂಟೆಗಳ ಒಳಗಿನ ಕೋವಿಡ್ ಆರ್‌ಟಿಪಿಸಿಆರ್ ಪ್ರಮಾಣ ಪತ್ರ ಕಡ್ಡಾಯವಾಗಿ ಪರಿಶೀಲಿಸಲಾಗುತ್ತಿದೆ’ ಎಂದರು.

‘ಜಿಮ್ಸ್ ಆಸ್ಪತ್ರೆಯಲ್ಲಿ 500 ಎಲ್‌ಪಿಎಂ ಆಮ್ಲಜನಕ ಘಟಕ ಸ್ಥಾಪನೆ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ’ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ನಿರಾಣಿ, ‘ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಮ್ಲಜನಕ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ ಇದ್ದರಷ್ಟೇ ಸಾಲದು, ತಪಾಸಣೆಯನ್ನೂ ಬಿಗಿಗೊಳಿಸಬೇಕು’ ಎಂದರು.‌

ನಗರ ಪೊಲೀಸ್ ಆಯುಕ್ತ ಡಾ.ವೈ. ಎಸ್. ರವಿಕುಮಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್‌ ಜಾರ್ಜ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿಇದ್ದರು.

ವಿಜನ್‌–2050 ಕಾರ್ಯಾಗಾರ14ರಂದು

‘ಮುಂದಿನ ಮೂರು ದಶಕದವರೆಗೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಸರ್ವಾಂಗೀಣ ಅಭಿವೃದ್ಧಿಪಡಿಸುವ ಸಂಬಂಧ ಜಾರಿಗೊಳಿಸಲು ಉದ್ದೇಶಿಸಿದ ‘ಕಲಬುರ್ಗಿ ವಿಜನ್–2050’ ಅನುಷ್ಠಾನಕ್ಕಾಗಿ ಆ. 14ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಿಯೂ ನಿರ್ಲಕ್ಷ್ಯಕ್ಕೆ ಆಸ್ಪದ ನೀಡುವುದಿಲ್ಲ’ ಎಂದೂ ನಿರಾಣಿ ಹೇಳಿದರು.‌

‘ನಮ್ಮ ಕನಸಿನ ಕಲಬುರ್ಗಿ’ ಎಂಬ ವಿಷಯವಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಬೇಕು. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ಮುಂದಿನ ಮೂರು ದಶಕದಲ್ಲಿ ಜಿಲ್ಲೆಯಲ್ಲಿ ಯಾವ ರೀತಿ ಇರಬೇಕು ಎಂಬುದನ್ನು ಸಲಹಾ ರೂಪದಲ್ಲಿ ಬರೆಯಬೇಕು. ಪ್ರತಿಯೊಬ್ಬರ ಕನಸುಗಳೂ ನಮಗೆ ಮಹತ್ವದ್ದಾಗಿರುತ್ತವೆ ಎಂಬುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT