ಕಲಬುರಗಿ: ‘ಸ್ವಾತಂತ್ರ್ಯ ಬಂದು 75 ವರ್ಷಗಳು ಗತಿಸಿದರೂ ದಲಿತರ ಬದುಕು ಶೋಚನೀಯವಾಗಿದೆ. ಅಸ್ಪೃಶ್ಯತೆ ಮತ್ತು ತಾರತಮ್ಯ ನೀತಿಗಳು ವಿಪರೀತವಾಗಿದ್ದು, ಬಹಳ ಕ್ಷುಲ್ಲಕ ಕಾರಣಕ್ಕಾಗಿ ಅಸ್ಪೃಶ್ಯತೆ ಆಚರಿಸುತ್ತಿರುವುದು ನೆನಪಿಸಿಕೊಂಡರೆ ಬೇಸರವಾಗುತ್ತದೆ’ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ವಿಶ್ವೇಶ್ವರಯ್ಯ ಭವನದಲ್ಲಿ ಪರೋಪಕಾರಿ ಡಾ.ಶಿವರಾಮ ಮೋಘಾ ವೇದಿಕೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯದ ಬಳಿಕ 10 ವರ್ಷಗಳಲ್ಲಿ ಅಸ್ಪೃಶ್ಯತೆ ನಿವಾರಿಸುವುದಾಗಿ ಹೋರಾಟಗಾಗರು ಹೇಳಿದ್ದರು. ಇಂದಿಗೂ ದಲಿತರಿಗೆ ದೇವಸ್ಥಾನಕ್ಕೆ ನಿರ್ಬಂಧ, ನಲ್ಲಿ ನೀರು ಮುಟ್ಟದಂತಹ 400ಕ್ಕೂ ಹೆಚ್ಚು ಬಗೆಯ ಅಸ್ಪೃಶ್ಯತೆ ಆಚರಣೆಗಳಿವೆ. ಅಸ್ಪೃಶ್ಯತೆ ಈ ದೇಶಕ್ಕೆ ಅಂಟಿದ ಶಾಪ’ ಎಂದರು.
ರಾಷ್ಟ್ರೀಯ ಅಪರಾಧ ದಾಖಲಾತಿಗಳ ಬ್ಯುರೊ (ಎನ್‌ಸಿಆರ್‌ಬಿ) ವರದಿ ಉಲ್ಲೇಖಿಸಿದ ಚಿನ್ನಸ್ವಾಮಿ, ‘2012ರಲ್ಲಿ ನಿತ್ಯ ಮೂವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿತ್ತು. 2019ಕ್ಕೆ ಅದು 6ಕ್ಕೆ ತಲುಪಿದೆ. ಪ್ರತಿ 6 ನಿಮಿಷಕ್ಕೆ ಒಮ್ಮೆ ಒಬ್ಬ ದಲಿತನ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಿತ್ಯ ಮೂವರ ದಲಿತರ ಕೊಲೆಯಾಗುತ್ತಿದೆ. ಸರ್ಕಾರಗಳು ಇದನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ? ದಲಿತರನ್ನು ಕಂಡರೆ ಯಾಕಿಷ್ಟು ವೈಷಮ್ಯ, ವಿರೋಧ ಎಂಬುದು ಅರ್ಥವಾಗುತ್ತಿಲ್ಲ’ ಎಂದು ನುಡಿದರು.
‘ಸಂವಿಧಾನ ಉಳಿಸುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಆದರೆ, ಪರೋಕ್ಷವಾಗಿ ನ್ಯಾಯಾಲಯಗಳ ಉನ್ನತ ಹುದ್ದೆಯಲ್ಲಿ ಇರುವರರೇ ಮನುಧರ್ಮ ಶಾಸ್ತ್ರವನ್ನು ಪ್ರಶಂಸಿಸುತ್ತಿದ್ದಾರೆ. ಮನುಧರ್ಮದಿಂದಾಗಿ ದೇಶಕ್ಕೆ ಒಳ್ಳೆಯದಾಗಿದೆ ಎನ್ನುತ್ತಿದ್ದಾರೆ. ಅವರ ಮಾತು ಕೇಳಿದಾಗ ನೋವಾಗುತ್ತದೆ’ ಎಂದರು.
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ ಮಾತನಾಡಿ, ‘ದೇಶದಲ್ಲಿ ಕೋಮುವಾದ ನಾಗರಹಾವಿನಂತೆ ಹೆಡೆ ಎತ್ತುತ್ತಿದೆ. ದಲಿತ ಸಂಘರ್ಷ ಸಮಿತಿಯು ರಾಷ್ಟ್ರಮಟ್ಟದಲ್ಲಿ ಹೋರಾಟವನ್ನು ರೂಪಿಸುವ ಮೂಲಕ ಅದನ್ನು ಹತೋಟಿಗೆ ತರಬೇಕಿದೆ’ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ದಲಿತರ ಹಕ್ಕುಗಳಿಗಾಗಿ ನಿಷ್ಠುರವಾಗಿ ಹೋರಾಟ ಮಾಡಿದ ಸಂಘಟನೆಗಳಿಗೆ ಶಕ್ತಿ ತುಂಬಿ, ಅವರಿಗೆ ಬೆಂಬಲ ಕೊಡಲು ಈ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಹೇಳಿದರು.
ಸಮ್ಮೇಳನದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಸ್ವಾಗತಿ ಸಮಿತಿಯ ಅಧ್ಯಕ್ಷ ಪಿಡಬ್ಲ್ಯುಡಿಯ ಅಧೀಕ್ಷಕ ಎಂಜಿನಿಯರ್ ಸುರೇಶ್ ಎಲ್.ಶರ್ಮಾ, ಕಾರ್ಯಾಧ್ಯಕ್ಷ ಲಚ್ಪಪ್ಪ ಎಸ್.ಜಮಾದಾರ, ಸಂಘ ಸಂಸ್ಥೆ ಪ್ರತಿನಿಧಿ ಕಲ್ಯಾಣಕುಮಾರ ಶೀಲವಂತ, ಕಸಾಪ ಗೌರ ಕಾರ್ಯದರ್ಶಿ ಶಿವರಾಜ ಎಸ್.ಅಂಡಗಿ, ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ ಸೇರಿ ಹಲವರು ಉಪಸ್ಥಿತರಿದ್ದರು.
‘ಕೆನೆಪದರ ಹುಸಿ ಕಲ್ಪನೆ’
‘ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ತ್ವರಿತವಾಗಿ ಜಾರಿಗೆ ತರಬೇಕು. ಹುಸಿ ಕಲ್ಪನೆಯಾದ ಕೆನೆಪದರನ್ನು ಕೈಬಿಡಬೇಕು’ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು. ‘ದಲಿತರನ್ನು ಹಿಂದಕ್ಕೆ ತಳ್ಳುವ ಪ್ರವೃತ್ತಿ ಸತತವಾಗಿ ನಡೆಯುತ್ತಿದೆ. ಹೀಗಾಗಿ ದಲಿತರ ಕೆನೆಪದರ ಅನ್ವಯಿಸುವುದು ಸಮಂಜಸವಲ್ಲ. ಪ್ರಧ್ಯಾಪಕರು ಐಪಿಎಸ್ ಐಎಎಸ್ ಹುದ್ದೆಗೆ ಏರಿದವರ ಮಕ್ಕಳು ಅದೇ ಹುದ್ದೆಗಳು ಹಿಡಿಯುವುದಿಲ್ಲ. ಕೆನೆಪದರ ಅನ್ವಯಿಸಿದರೆ 2ನೇ ತಲೆಮಾರಿನ ಮಕ್ಕಳು ಸೌಕರ್ಯಗಳಿಂದ ವಂಚಿತ ಆಗುತ್ತಾರೆ’ ಎಂದರು.
‘ಕೆಕೆಆರ್‌ಡಿಬಿ; ಶೇ 24ರಷ್ಟು ಅನುದಾನ ನೀಡಿ
’ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಶೇ 24ರಷ್ಟು ಅನುದಾನವನ್ನು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ಮೀಸಲಿಡಬೇಕು. ದಲಿತರಿಗೆ ಭೂಮಿ ಖರೀದಿ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಯೋಜನೆಗಳಿಗೆ ಬಳಸಬೇಕು’ ಎಂದು ಸಮ್ಮೇಳನದ ಅಧ್ಯಕ್ಷ ಡಿ.ಜಿ. ಸಾಗರ ಹೇಳಿದರು. ‘ಮೀಸಲು ಅನುದಾನವನ್ನು ಅನ್ಯಕಾರ್ಯಗಳಿಗೆ ಬಳಸದಂತೆ ಕಠಿಣ ಕಾಯ್ದೆ ಜಾರಿಗೆ ತರಬೇಕು. ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ದೌರ್ಜನ್ಯಗಳನ್ನು ತಡೆಯಲು ನಾಗರಿಕ ಹಕ್ಕ ಸಮಾಚಾರಣೆ ಅಡಿ ರಾಜ್ಯದಲ್ಲಿ 33 ಪೊಲೀಸ್ ಠಾಣೆಗಳನ್ನು ತೆರೆಯಬೇಕು’ ಎಂದರು. ‘ಜಾತಿ ಮತ್ತು ಅಸ್ಪೃಷ್ಯತೆ ಇರುವ ತನಕ ಮೀಸಲಾತಿ ಇರಬೇಕು. ಬೌದ್ಧ ಧಮ್ಮ ನಿಗಮ ಮಂಡಳಿ ಸ್ಥಾಪಿಸಬೇಕು. ಮತಾಂತರಗೊಂಡ ನವಬುದ್ಧರ ಮೀಸಲಾತಿಯ ತೊಡಕುಗಳು ಇತ್ಯರ್ಥಪಡಿಸಬೇಕು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯಬೇಕು’ ಎಂದು ಹೇಳಿದರು.
ತಡವಾಗಿ ಆರಂಭವಾದ ಮೆರವಣಿಗೆ
ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಯ ಮುಂಭಾಗದಲ್ಲಿ ಬೆಳಿಗ್ಗೆ 9.45ಕ್ಕೆ ಆರಂಭವಾಗಬೇಕಿದ್ದ ಸಮ್ಮೇಳನ ಅಧ್ಯಕ್ಷ ಡಿ.ಜಿ. ಸಾಗರ ಹಾಗೂ ದಂಪತಿಯ ಮೆರವಣಿಗೆಗೆ ಮಧ್ಯಾಹ್ನ 1ಕ್ಕೆ ಚಾಲನೆ ಸಿಕ್ಕಿತು. ಡೊಳ್ಳು ಹಲಗೆ ವಾದನದ ಕಲಾವಿದರು ಕೆಲ ವಿದ್ಯಾರ್ಥಿಗಳು ಸಾಹಿತ್ಯ ಆಸಕ್ತರು ನಿಗದಿತ ಸಮಯಕ್ಕೆ ವೃತ್ತಕ್ಕೆ ಬಂದು ಕಾದು ಬಸವಳಿದರು. ಸುತ್ತಲ್ಲಿನ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಬರುವವರೆಗೆ ಕಾದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಡಿ.ಜಿ. ಸಾಗರ ಅವರ ಅಭಿಮಾನಿಗಳು ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಪುಷ್ಪದಳಗಳನ್ನು ಎಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.