ಚಿತ್ತಾಪುರ: ‘ದಂಡಗುಂಡ ಬಸವೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಸಂಗಮೇಶ್ವರ ಸಂಸ್ಥಾನ ಮಠವು ಸಾರ್ವಜನಿಕರಿಗೆ ಸೇರಿದ್ದಾಗಿದೆ. ಮಠವು ಸಂಗನಬಸವ ಶಿವಾಚಾರ್ಯರಿಗೆ ಸೇರಿದ್ದಲ್ಲ’ ಎಂದು ದಂಡಗುಂಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಹೇಳಿದರು.
ತಾಲ್ಲೂಕಿನ ದಂಡಗುಂಡ ಗ್ರಾಮದ ಬಸವೇಶ್ವರ ದೇವಸ್ಥಾನದ ಯಾತ್ರಿಕ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಠದ ಸ್ವಾಮೀಜಿಯು ಟ್ರಸ್ಟಿನ ಸಹಕಾರ, ಸಹಾಯ ಪಡೆಯಲು ಮುಂದಾಗುತ್ತಿಲ್ಲ. ದೇವಸ್ಥಾನ ಅಭಿವೃದ್ಧಿ ವಿಷಯದಲ್ಲಿ ಟ್ರಸ್ಟಿನವರ ತೇಜೊವಧೆ ಮಾಡುವ ಕೆಲಸ ಮಾಡುತ್ತಿದ್ದು ಅತ್ಯಂತ ಖಂಡನೀಯ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಗ್ರಾಮಸ್ಥರ ಸಹಕಾರ ಮತ್ತು ಬೆಂಬಲದಿಂದ ಬಸವೇಶ್ವರರ ನೂತನ ಮಂದಿರ ನಿರ್ಮಾಣ ಕೆಲಸ ನಡೆಯುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಲು ದೇವಸ್ಥಾನ ಪರಿಸರದ ಸಮಗ್ರ ಅಭಿವೃದ್ಧಿ ಕಾರ್ಯವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ದೇವಸ್ಥಾನದ ಅಭಿವೃದ್ಧಿಗೆ ಮಠಾಧೀಶರಾಗಿ ಸಹಕಾರ ನೀಡಿ ಬೆಂಬಲಿಸದೆ ಯಾವುದಾದರೂ ನೆಪ ಮುಂದೆ ಮಾಡಿ ಸ್ವಾಮೀಜಿ ಅಡೆತಡೆ ಉಂಟು ಮಾಡುತ್ತಿದ್ದಾರೆ. ಟ್ರಸ್ಟಿನ ಯಾರೊಬ್ಬರೂ ಸ್ವಾಮೀಜಿಗೆ ಜೀವ ಬೆದರಿಕೆ ಹಾಕಿಲ್ಲ. ಸುಳ್ಳು ಆರೋಪ ಮಾಡುತ್ತಿದ್ದಾರೆ. ಬೆದರಿಕೆ ಹಾಕಿರುವ ಕುರಿತು ಕಾನೂನಿನ ಚೌಕಟ್ಟಿನೊಳ್ಳಗೆ ಸಂಬಂಧಿತ ಠಾಣೆಯಲ್ಲಿ ದೂರು ಸಲ್ಲಿಸದೆ ಕೇವಲ ಜಿಲ್ಲಾ ಮಟ್ಟದಲ್ಲಿ ದೂರು ಕೊಡುವ ಕೆಲಸ ಮಾಡುತ್ತಿರುವುದು ಏಕೆ ಎಂದು ಅವರು ದೂರಿದರು.
‘ದೇವಸ್ಥಾನ ಅಭಿವೃದ್ಧಿ ವಿಷಯದಲ್ಲಿ ಜನರು ಮತ್ತು ಭಕ್ತರು ಯವುದೇ ರೀತಿಯ ಊಹಾಪೋಹದ ಸುದ್ಧಿಗಳಿಗೆ ಕಿವಿಗೊಡಬಾರದು. ಜಾತ್ರೆಗೆ ಪ್ರತಿ ವರ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಅದ್ಧೂರಿ ಜಾತ್ರೆಗೆ ಅಗತ್ಯ ಸಿದ್ಧತೆ ಟ್ರಸ್ಟ್ ಆಡಳಿತ ಮಂಡಳಿ ಮಾಡಿಕೊಂಡಿದೆ’ ಎಂದು ಅವರು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಭಾಗನಗೌಡ ಸಂಕನೂರು ಮಾತನಾಡಿ, ‘ಈ ವರ್ಷದ ಜಾತ್ರೆ ನಡೆಯುವುದಿಲ್ಲ ಎಂದು ಸ್ವಾಮೀಜಿ ಸುದ್ಧಿ ಹರಡುತ್ತಿದ್ದಾರೆ. ಜಾತ್ರೆ ನಡೆಯದಂತೆ ಯಾರೂ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿಲ್ಲ. ಸಂಪ್ರದಾಯದಂತೆ ರಥೋತ್ಸವ, ಜಾತ್ರೆ ಕಾರ್ಯಕ್ರಮಗಳು ಅದ್ಧೂರಿಯಿಂದ ನೆರವೇರಲಿವೆ’ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯರಾದ ಭೀಮಣ್ಣ ಸಾಲಿ, ಭೀಮರಾಯಗೌಡ ಚಾಮನೂರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.