ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ದರ್ಗಾ ರಸ್ತೆಯ ದಾರುಣ ಸ್ಥಿತಿ

ಸಮಸ್ಯೆಗಳ ಸುಳಿಯಲ್ಲಿ ರೋಜಾ ಬಡಾವಣೆ; ಸಂಚಾರ ಸದಾ ದೂಳುಮಯ
Last Updated 28 ಅಕ್ಟೋಬರ್ 2020, 5:54 IST
ಅಕ್ಷರ ಗಾತ್ರ

ಕಲಬುರ್ಗಿ: ಎಲ್ಲೆಂದರಲ್ಲಿ ಆಳವಾದ ಗುಂಡಿಗಳು, ರಸ್ತೆ ಮಧ್ಯೆ ಎದ್ದು ನಿಂತಿರುವ ಕಬ್ಬಿಣದ ಸರಳುಗಳು, ನಿರಂತರ ವಾಹನ ದಟ್ಟಣೆ, ರಸ್ತೆಗೆ ನುಗ್ಗುವ ಚರಂಡಿ ನೀರು, ಜೆಸಿಬಿ ಆರ್ಭಟ, ಕಾರ್ಮಿಕರ ಕೆಲಸ..

ನಗರದ ರೋಜಾ ಬಡಾವಣೆಯ ಬಂದೇ ನವಾಜ್ ದರ್ಗಾ ರಸ್ತೆಯಲ್ಲಿನ ದುಸ್ಥಿತಿ ಇದು. ಸಾಮಾನ್ಯ ದಿನಗಳಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವ ಪ್ರಯಾಣಿಕರು, ಮಳೆ ಬಂದಾಗಲಂತೂ ಅತೀವ ತೊಂದರೆ ಅನುಭವಿಸುತ್ತಾರೆ.

ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ವಾರ್ಡ್‌ ಸಂಖ್ಯೆ 10 ಹಾಗೂ 11ರ ವ್ಯಾಪ್ತಿಯಲ್ಲಿನ ಈ ರಸ್ತೆಯಲ್ಲಿ 5–6 ತಿಂಗಳಿಂದ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಬೈಕ್‌, ಕಾರ್, ಆಟೊ ಚಾಲಕರು ಸಣ್ಣ ಸಣ್ಣ ಒಳ ರಸ್ತೆಗಳಲ್ಲಿ ಪ್ರಯಾಸಪಟ್ಟು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಬೆಳಿಗ್ಗೆ ಹಾಗೂ ಸಂಜೆ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗಿರುತ್ತದೆ. ವಾಹನಗಳು ಮುಂದೆಯೂ ಸಾಗದೆ, ಹಿಂದೆಯೂ ಬರಲಾಗದೇ ನಿಂತಲ್ಲೇ ನಿಂತು ಬಿಡುತ್ತವೆ. ರಸ್ತೆ ಅಗೆದಿರು ವುದರಿಂದ ಸಿಕ್ಕಾಪಟ್ಟೆ ದೂಳು ಇದೆ. ಮಳೆ ಬಂದರಂತೂ ನಿತ್ಯ ಎಷ್ಟು ಜನ ಬೈಕ್‌ ಸವಾರರು ಗುಂಡಿಗಳಲ್ಲಿ ಬೀಳುತ್ತಾರೋ ಲೆಕ್ಕವಿಲ್ಲ. ರಸ್ತೆಯಲ್ಲಿ ಎಲ್ಲಿ ತಗ್ಗು–ಗುಂಡಿಗಳಿವೆಯೋ ತಿಳಿಯಲ್ಲ. ‌‌ಇದೆಲ್ಲಾ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿದಿದೆ. ಆದರೆ, ಅವರಿಂದ ಸ್ಪಂದನೆ ಸಿಗುತ್ತಿಲ್ಲ’ ಎಂದು ಬಡಾವಣೆ ನಿವಾಸಿ, ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಮೇರಾಜುದ್ದೀನ್ ಹೇಳುತ್ತಾರೆ.

‘ಇದೇ ಬಡಾವಣೆಯ ಅಸಗರ್‌ ಚುಲ್‌ಬುಲ್‌ ಅವರು ಎರಡು ಬಾರಿ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷರಾಗಿದ್ದರು. ಈ ಹಿಂದಿನ ನಾಲ್ಕು ಮೇಯರ್‌ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈಗಲೂ ಓಡಾಡುತ್ತಾರೆ. ಆದರೆ ಸಮಸ್ಯೆ ಬಗೆಹರಿಸಲು ಮಾತ್ರ ಯಾರೊಬ್ಬರೂ ಮುಂದಾಗುತ್ತಿಲ್ಲ. 6 ತಿಂಗಳಿಂದ ಸಂಕಷ್ಟ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ರಸ್ತೆ ಸರಿಪಡಿಸದಿದ್ದರೆ ಹೋರಾಟಕ್ಕೆ ಮುಂದಾಗುವುದು ನಿಶ್ಚಿತ ಎಂದು ಮಹಮ್ಮದ್ ಮೇರಾಜುದ್ದೀನ್ ಎಚ್ಚರಿಸಿದರು.

‘ರಸ್ತೆ, ಚರಂಡಿ, ಕುಡಿಯುವ ನೀರಿನದ್ದೇ ಈ ಬಡಾವಣೆಯ ಮುಖ್ಯ ಸಮಸ್ಯೆಗಳು. ಚರಂಡಿ ವ್ಯವಸ್ಥೆ ಸಮರ್ಪ ಕವಾಗಿಲ್ಲ. ಎಲ್ಲೆಂದರಲ್ಲಿ ಕಲ್ಲು, ಮಣ್ಣು, ತ್ಯಾಜ್ಯ ತುಂಬಿ ಕೊಂಡಿರುವುದರಿಂದ ಚರಂಡಿ ನೀರು ರಸ್ತೆಗೆ ಬರುತ್ತೆ. ಹೀಗಾಗಿ ಸ್ವಚ್ಛತೆಯೂ ಇಲ್ಲಿ ಮರೀಚಿಕೆ ಆಗಿದೆ. ರಸ್ತೆಯಲ್ಲಿ ಚರಂಡಿ ಕಾಮಗಾರಿ ಆರಂಭಗೊಂಡಾಗಿನಿಂದಲೂ ನಮ್ಮ ಅಂಗಡಿಯ ಮುಂದೆಯೂ ನಿತ್ಯ ಒಂದಿಲ್ಲೊಂದು ಸಣ್ಣಪುಟ್ಟ ಅವಘಡ ಗಳು ಆಗುತ್ತಲೇ ಇವೆ’ ಎಂದು ಎಂ.ಡಿ.ಗೌಸ್‌ ತಿಳಿಸಿದರು.

‘ಈ ರಸ್ತೆಯಲ್ಲಿ ಚಿಕ್ಕಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವುದಕ್ಕೆ ಭಯ ಆಗುತ್ತೆ. ಯಾವ ಗುಂಡಿಗಳಲ್ಲಿ ಬೈಕ್‌ ಬೀಳುತ್ತೋ ಗೊತ್ತಾಗಲ್ಲ. ಮುಖ್ಯ ರಸ್ತೆಯನ್ನೇ ಅಗೆದಿರುವುದರಿಂದ ಸಣ್ಣ ಪುಟ್ಟ ಅಡ್ಡ ರಸ್ತೆಯಲ್ಲಿ ಸಂಚರಿಸುವಂತಾಗಿದೆ’ ಎನ್ನುತ್ತಾರೆ ಸ್ಥಳೀಯರಾದ ಮೊಹೀನ್.

ಯುಜಿಡಿ (ಒಳಚರಂಡಿ) ವ್ಯವಸ್ಥೆ ಹೊಸದಾಗಿ ಮಾಡಬೇಕಾಗಿದ್ದರಿಂದ ಹಾಗೂ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಮಳೆ ನಿಂತಿರುವುದರಿಂದ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದುಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ)ಆರ್‌.ಪಿ. ಜಾಧವ ತಿಳಿಸಿದರು.

ಅಂಗಡಿಗಳಿಗೆ ಬೀಗ ಸಂಕಷ್ಟ: 130 ಮೀಟರ್ ಉದ್ದ, 8 ಅಡಿ ಅಗಲ, 5 ಅಡಿ ಆಳದ ಚರಂಡಿ ಕಾಮಗಾರಿಯನ್ನು ಖಾಸಗಿ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಕೆಲಸ ಶುರುವಾಗಿ 5–6 ತಿಂಗಳು ಕಳೆದರೂ ಕಾಮಗಾರಿ ಮುಗಿದಿಲ್ಲ. ರಸ್ತೆ ಅಗೆಯುವ ಕೆಲಸ ಶುರುವಾದಾಗಿನಿಂದ ರಸ್ತೆಯ ಅಕ್ಕಪಕ್ಕದ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಗ್ಯಾರೇಜ್‌, ಕಿರಾಣಿ ಅಂಗಡಿ, ಮಾಂಸದ ಅಂಗಡಿ ಸೇರಿದಂತೆ 15ಕ್ಕೂ ಹೆಚ್ಚು ಅಂಗಡಿ‌ಗಳಿಗೆ ಬೀಗ ಹಾಕಲಾಗಿದೆ. ಕೆಲಸ ಇಲ್ಲದಿದ್ದರೂ ಬಾಡಿಗೆ ಕಟ್ಟಲೇಬೇಕಿದೆ. ಆರ್ಥಿಕವಾಗಿ ಹೊರೆಯಾಗುತ್ತಿದೆ.ನಿಧಾನಗತಿಯ ಕಾಮಗಾರಿಯಿಂದಾಗಿ ಅಂಗಡಿಗಳಿಗೆ ಬೀಗ ಹಾಕಿ 6 ತಿಂಗಳುಗಳೇ ಕಳೆದಿವೆ. ಸ್ಥಳೀಯ ಆಡಳಿತ ಆರ್ಥಿಕವಾಗಿ ನೆರವು ನೀಡಿದರೆ ಆಸರೆಯಾಗುತ್ತೆ ಎನ್ನುತ್ತಾರೆ ಗ್ಯಾರೇಜ್ ಅಂಗಡಿಯ ಸಯ್ಯದ್ ಗೌಸ್.

ಕೊರೊನಾ, ಲಾಕ್‌ಡೌನ್‌ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಭೂಮಿಯಿಂದ ನೀರು ಉಕ್ಕುತ್ತಿರುವುದು ಕೂಡಾ ಸಮಸ್ಯೆ ಆಗಿದೆ ಎನ್ನುತ್ತಾರೆ ಕಾಮಗಾರಿ ಟೆಂಡರ್ ಪಡೆದಿರುವ ಸಂಸ್ಥೆಯ ಸೂಪರ್‌ವೈಸರ್ ಬಾಬಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT