ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ: ಭಾವೈಕ್ಯದ ದಾವಲ ಮಲೀಕ್ ದರ್ಗಾ

ಸಾಮರಸ್ಯದ ಚಿಂತಕ ಸೂಫಿ ಸಂತನ ದರ್ಗಾದಲ್ಲಿ ಸೌಲಭ್ಯ ಕೊರತೆ
Last Updated 9 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಜೇವರ್ಗಿ: ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ಅಂತರದಲ್ಲಿರುವ ಚನ್ನೂರ ಗ್ರಾಮವು ನಾಡಿನ ಪ್ರಥಮ ಮುಸ್ಲಿಂ ತತ್ವಪದಕಾರ ಜಲಾಲ ಸಾಹೇಬರು ಹಾಗೂ ಸೂಫಿ ಸಂತ ದಾವಲ ಮಲೀಕ್ ಸಾಹೇಬರ ಹುಟ್ಟೂರು.

17ನೇ ಶತಮಾನದಲ್ಲಿ ಜೇವರ್ಗಿಯ ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿಗಳು, ತತ್ವ ಪದಕಾರರಾದ ಕಡಕೋಳದ ಮಡಿವಾಳಪ್ಪ, ರಾಮಪೂರದ ಬಕ್ಕಪ್ಪಯ್ಯ ಪ್ರಭುಗಳು ಸೇರಿದಂತೆ ಅನೇಕ ಶರಣರು, ಸಂತರು, ದಾರ್ಶನಿಕರು, ಸೂಫಿಗಳು ಬಾಳಿ ಬೆಳಗಿದ ಪುಣ್ಯಭೂಮಿ ಜೇವರ್ಗಿ ತಾಲ್ಲೂಕು.

ಷಣ್ಮುಖ ಶಿವಯೋಗಿಗಳು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಲು ಅವಿರತವಾಗಿ ಶ್ರಮಿಸಿದ್ದರು. ಕಡಕೋಳದ ಮಡಿವಾಳಪ್ಪ, ರಾಮಪೂರದ ಬಕ್ಕಪ್ಪಯ್ಯ ಪ್ರಭುಗಳು ತತ್ವಪದಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಅವಿರತವಾಗಿ ಶ್ರಮಿಸಿದರು.

ಸೂಫಿ ಸಂತ ಚನ್ನೂರಿನ ದಾವಲ ಮಲೀಕ್ ಸಾಹೇಬರು ಸಮಾನತೆ, ಸಾಮರಸ್ಯದ ಚಿಂತಕರಾಗಿದ್ದರು. ದಾವಲ ಮಲೀಕ್ ದರ್ಗಾ ಭಾವೈಕ್ಯಕ್ಕೆ ಹೆಸರು ವಾಸಿಯಾದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ದಾವಲ ಮಲೀಕ್‌ ದರ್ಗಾದಲ್ಲಿ ಅವರ ಮಜ್ಹರ (ಸಮಾಧಿ) ಇದೆ.

ಸರಳ, ಸಜ್ಜನಿಕೆ ಮೈಗೂಡಿಸಿಕೊಂಡಿದ್ದ ದಾವಲ ಮಲೀಕ್ ಸಾಹೇಬರು ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ತೊಡೆದು ಹಾಕಲು ಧರ್ಮ ಮಾರ್ಗ ಅನುಸರಿಸುತ್ತಿದ್ದರು. ಸಾತ್ವಿಕ ಬದುಕು, ಸರಳತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಾಲ್ಲೂಕಿನ ಅನೇಕ ಜನ ಶರಣರು, ಸಂತರು, ವಚನಕಾರರು, ತತ್ವ ಪದಕಾರರೊಂದಿಗೆ ಒಡನಾಟ ಹೊಂದಿದ್ದರು.

ಭಾವೈಕ್ಯದ ತಾಣ

ಕಲಬುರ್ಗಿ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳ ಭಕ್ತರು ಚನ್ನೂರ ದಾವಲ ಮಲೀಕ್‌ ದರ್ಗಾಕ್ಕೆ ಭೇಟಿ ನೀಡಿ ಹರಕೆ ತೀರಿಸುತ್ತಾರೆ. ಹಿಂದೂ– ಮುಸ್ಲಿಂ ಸೇರಿದಂತೆ ಸರ್ವಧರ್ಮೀಯರು ದಾವಲ ಮಲೀಕ್ ಸಾಹೇಬರ ದರ್ಗಾಕ್ಕೆ ಭೇಟಿ ನೀಡುತ್ತಾರೆ.

ಅನುದಾನಕ್ಕೆ ಆಗ್ರಹ

ದಾವಲ ಮಲೀಕ್‌ ದರ್ಗಾಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲ ಕಲ್ಪಿಸಲು ಯಾತ್ರಿ ನಿವಾಸ್, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸೌಲಭ್ಯ, ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಡಾ.ಅಜಯ ಸಿಂಗ್ಅನುದಾನ ಬಿಡುಗಡೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಪ್ರತಿ ವರ್ಷ ರಂಜಾನ್ ಹಬ್ಬದ 15 ದಿನಗಳ ನಂತರ ದಾವಲ ಮಲೀಕ್‌ ಜಾತ್ರಾ ಮಹೋತ್ಸವ ನಡೆಯುತ್ತದೆ. ಚನ್ನೂರ ಮತ್ತು ಬುಟ್ನಾಳ ಗ್ರಾಮಸ್ಥರು ಸೇರಿ ಗಂಧ, ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ.

ಜಾತ್ರೆ

ಪ್ರತಿ ವರ್ಷ ರಂಜಾನ್ ಮಾಸ ಪೂರ್ಣಗೊಂಡ ನಂತರ 20 ದಿನಗಳ ಅಂತರದಲ್ಲಿ ನಡೆಯುವ ದಾವಲ ಮಲೀಕ್‌ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಜನ ಭಾಗವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT