ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಪಡೆದ ಜಿಲ್ಲಾಧಿಕಾರಿ

ಸರ್ಕಾರಿ ಅಧಿಕಾರಿ–ಸಿಬ್ಬಂದಿ ವರ್ಗಕ್ಕೆ ಕೋವಿಶೀಲ್ಡ್‌ ಚುಚ್ಚುಮದ್ದು ನೀಡಲು ಚಾಲನೆ ನೀಡಿದ ವಿ.ವಿ. ಜೋತ್ಸ್ನಾ
Last Updated 8 ಫೆಬ್ರುವರಿ 2021, 17:34 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಕಂದಾಯ, ನಗರಾಭಿವೃದ್ಧಿ, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ- ಸಿಬ್ಬಂದಿಗೆ ಕೋವಿಡ್‌ ಲಸಿಕೆ ಹಾಕುವ ಮೂರು ದಿನಗಳ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ಸೋಮವಾರ ಸ್ವತಃ ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿದರು. ಅರ್ಧ ಗಂಟೆ ವೈದ್ಯರ ವೀಕ್ಷಣೆಯಲ್ಲಿದ್ದ ನಂತರ ಜಿಲ್ಲಾಧಿಕಾರಿಗಳು ಲಸಿಕಾ ಕೇಂದ್ರದಿಂದ ತೆರಳಿದರು.

ನಂತರ ಮಾತನಾಡಿದ ಅವರು, ‘ಜನವರಿ 16ರಿಂದ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ. ಅದೇ ರೀತಿ ದಿನನಿತ್ಯದ ಜೀವನದಲ್ಲಿ ಸಾರ್ವಜನಿಕರ ಸಂಪರ್ಕದಲ್ಲಿ ಬರುವ ಹೆಚ್ಚಿನ ‘ರಿಸ್ಕ್’ ಹೊಂದಿರುವ ಕಂದಾಯ, ನಗರಾಭಿವೃದ್ಧಿ, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ– ಸಿಬ್ಬಂದಿಗೆ ಇಂದಿನಿಂದ ಫೆಬ್ರುವರಿ 10ರ ವರೆಗೆ ಲಸಿಕೆ ನೀಡಲಾಗುತ್ತಿದೆ’ ಎಂದರು.

‘ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮ ಇಲ್ಲ. ಹೀಗಾಗಿ ಅಧಿಕಾರಿ– ಸಿಬ್ಬಂದಿ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು. ಈಗ ನಾನು ಲಸಿಕೆ ಹಾಕಿಕೊಂಡಿದ್ದು, ಏನೂ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಈ ಲಸಿಕೆ ನೀಡಲಾಗುತ್ತಿದ್ದು, ಆತಂಕಕ್ಕೊಳಗಾಗಬೇಕಿಲ್ಲ’ ಎಂದರು.

‘ಈ ಚುಚ್ಚುಮದ್ದು ಸಾಮಾನ್ಯವಾಗಿ ಮಕ್ಕಳಿಗೆ ನೀಡಲಾಗುವ ಲಸಿಕೆಯಂತೆಯೇ ಇದೆ. ಲಸಿಕೆ ಪಡೆದ ನಂತರ ಸಣ್ಣಪುಟ್ಟ ಜ್ವರ ಬಂದರೂ ಭಯಪಡಬೇಕಿಲ್ಲ. ಇದರ ಚಿಕಿತ್ಸೆಗೆ ಎಲ್ಲಾ ಲಸಿಕಾ ಕೇಂದ್ರದಲ್ಲಿ ಪ್ರತ್ಯೇತ ಆರೋಗ್ಯ ತಂಡ ಇರಲಿವೆ’ ಎಂದರು.‌

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಮ್ಸ್ ಪ್ರಭಾರಿ ಡೀನ್ ಡಾ.ಚಂದ್ರಶೇಖರ್ ಕರ್ಪೂರ, ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್, ಪಿ ಅಂಡ್‌ ಎಸ್.ಎಂ. ಮುಖ್ಯಸ್ಥ ಡಾ.ಅಜಯಕುಮಾರ, ಡಾ.ಜಯಮ್ಮ, ನೋಡಲ್ ಅಧಿಕಾರಿ ಡಾ.ಗುರುರಾಜ, ಜಿಲ್ಲಾ ಆಸ್ಪತ್ರೆಯ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ.ಅಂಬಾರಾಯ ಎಸ್. ರುದ್ರವಾಡಿ, ಜಿಲ್ಲಾ ಆರ್.ಸಿ.ಎಚ್‌.ಒ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಸೇರಿದಂತೆ ನರ್ಸಿಂಗ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT